ಶ್ರೀಮಂಗಲ, ಜ. 13 : ಅಮ್ಮತ್ತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಳೆದ 60 ವರ್ಷಗಳಿಂದ ನಿವೃತ್ತ ಸೇನಾಧಿಕಾರಿ ಗಳ ಸ್ವಾಧೀನದಲ್ಲಿದ್ದ ಕಾಫಿ ತೋಟ ಮಾಡಿರುವ ಜಾಗವನ್ನು ಸರಕಾರಿ ಜಾಗವೆಂದು ತೆರವುಗೊಳಿಸಲು ವೀರಾಜಪೇಟೆ ತಾಲೂಕು ತಹಶೀಲ್ದಾರರು ಮುಂದಾಗಿ ಸೇನಾಧಿಕಾರಿಗಳ ಮೇಲೆ ದೌರ್ಜನ್ಯ ಮಾಡಿರುವದನ್ನು ಜಿಲ್ಲಾ ಬೆಳೆಗಾರರ ಒಕ್ಕೂಟ ಖಂಡಿಸಿದೆ. ದೇಶ ಸೇವೆ ಸಲ್ಲಿಸಿರುವ ಯೋಧರ ಬಗ್ಗೆ ಕಿಂಚಿತ್ತಾದರೂ ಗೌರವ ಸರಕಾರಕ್ಕೆ ಇದ್ದರೆ, ಈ ಪ್ರಕರಣದಲ್ಲಿ ಕಾನೂನು ಮೀರಿ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿರುವ ತಹಶೀಲ್ದಾರ್ ಮಹದೇವಸ್ವಾಮಿ ಅವರನ್ನು ಅಮಾನತು ಮಾಡ ಬೇಕೆಂದು ಜಿಲ್ಲಾ ಬೆಳೆಗಾರರ ಒಕ್ಕೂಟ ಆಗ್ರಹಿಸಿದೆ. ಈ ಹಿನ್ನೆಲೆಯಲ್ಲಿ ತಾ.20ರಂದು ಮಡಿಕೇರಿಯಲ್ಲಿ ಮಾಜಿ ಸೈನಿಕರ ಸಂಘ ಹಮ್ಮಿಕೊಂಡಿರುವ ಪ್ರತಿಭಟನೆಗೆ ಒಕ್ಕೂಟದಿಂದ ಸಂಪೂರ್ಣ ಬೆಂಬಲ ನೀಡಲಾಗು ವದು ಎಂದು ಪ್ರಕಟಿಸಲಾಯಿತು.

ಒಕ್ಕೂಟದ ಅಧ್ಯಕ್ಷ ಅಜ್ಜಮಾಡ ಶಂಕರು ನಾಚಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾಯಿತು. 1958ರಲ್ಲಿ ಅಮ್ಮತ್ತಿ ಗ್ರಾಮದ ಸರ್ವೇ ನಂ 151ರಲ್ಲಿ 10 ಎಕ್ರೆ ಪೈಸಾರಿ ಜಾಗ ಅಮ್ಮತ್ತಿಯ ನಿವೃತ್ತ ಕ್ಯಾಪ್ಟನ್ ಪಟ್ಟಡ ಕಾರ್ಯಪ್ಪ ಹಾಗೂ ನಿವೃತ್ತ ಕರ್ನಲ್ ಪಟ್ಟಡ ಕರುಂಬಯ್ಯ ಅವರ ಸ್ವಾಧೀನದಲ್ಲಿದೆ. ಈ ಜಾಗದ ಸುತ್ತಲೂ ಇವರ ಸ್ವಂತ ಜಾಗವಿದ್ದು, ಮಧ್ಯದಲ್ಲಿ ಪೈಸಾರಿ ಜಾಗವಿದೆ. ಇದಕ್ಕೆ ಸರಕಾರಿ ನಿಯಾಮಾನುಸಾರ ಟಿ.ಟಿ.ಪೈನ್ ಕಟ್ಟಲಾಗಿದೆ. ಆದರೆ ದಿಡ್ಡಳ್ಳಿಯ ಅರಣ್ಯ ವಾಸಿಗಳಿಗೆ ಜಾಗ ನೀಡಲು ಯಾವದೇ ಪೂರ್ವಾನುಮತಿ ಇಲ್ಲದೆ ತಹಶೀಲ್ದಾರರ ನೇತೃತ್ವದಲ್ಲಿ ಜೆ.ಸಿ.ಬಿ.ಯನ್ನು ನಿವೃತ್ತ ಸೇನಾಧಿಕಾರಿ ಗಳ ಗೇಟಿನ ಮೂಲಕ ತೆರಳುತ್ತಿದ್ದ ಸಂದರ್ಭ ಜೆ.ಸಿ.ಬಿ.ಯನ್ನು ಮಾತ್ರ ನಿವೃತ್ತ ಸೇನಾಧಿಕಾರಿಗಳಾದ ಕಾರ್ಯಪ್ಪ ಹಾಗೂ ಕರುಂಬಯ್ಯ ತಡೆದಿದ್ದಾರೆ. ಆದರೆ ತಹಶೀಲ್ದಾರರು ಜಾಗ ಪರಿಶೀಲಿಸಲು ನಡೆದುಕೊಂಡು ಹೋಗಲು ಯಾವದೇ ತಡೆ ಮಾಡಿಲ್ಲ. ಆದರೆ ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿ ದ್ದಾರೆ ಎಂದು ಈ ಇಬ್ಬರು ಸೇನಾಧಿಕಾರಿಗಳ ಮೇಲೆ ಮೊಕದ್ದಮೆ ಹೂಡಿರುವದು ಖಂಡನೀಯ ಎಂದು ಒಕ್ಕೂಟದ ಪ್ರಮುಖರು ಅಭಿಪ್ರಾಯ ಪಟ್ಟರು.

ಆದರೆ ಖಾಸಗಿ ಜಾಗದ ಮೂಲಕ ತೆರಳಲು ತಹಶೀಲ್ದಾರರು ಯಾವದೇ ಪೂರ್ವಾನುಮತಿ ಪಡೆದಿಲ್ಲ. ಇದು ಅತಿಕ್ರಮಣ ಪ್ರವೇಶವೆಂದು ಪರಿಗಣಿಸಬೇಕಾಗುತ್ತದೆ. ತಹಶೀಲ್ದಾರರು ಕಾನೂನು ಬಾಹಿರವಾಗಿ ನಡೆದುಕೊಂಡಿದ್ದು, ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಒಕ್ಕೂಟದ ಸಭೆಯಲ್ಲಿ ಪ್ರಮುಖರು ಕಿಡಿಕಾರಿದರು. ಈ ಜಾಗದ ಮಂಜೂರಾತಿಗೆ ಕಾರ್ಯಪ್ಪ ಹಾಗೂ ಕರುಂಬಯ್ಯ ಅವರಿಗೆ ಸಂಬಂಧಿಸಿದ ಕಡತ ತಹಶೀಲ್ದಾರರ ಕಚೇರಿಯಲ್ಲಿ ನಾಪತ್ತೆಯಾಗಿದೆ. ಈ ಬಗ್ಗೆ ತನಿಖೆ ಮಾಡಿ ಕಡತವನ್ನು ಪತ್ತೆ ಹಚ್ಚುವದು ತಹಶೀಲ್ದಾರರ ಕರ್ತವ್ಯವಾಗಿದೆ. ಈಗಿದ್ದರೂ ಸೇನೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಅಧಿಕಾರಿಗಳು ಒತ್ತುವರಿ ಮಾಡಿಕೊಂಡಿರುವ ಸರಕಾರಿ ಜಾಗವನ್ನು ತೆರವುಗೊಳಿಸುವ ಸಂದರ್ಭ ನಿವೃತ್ತ ಸೇನಾಧಿಕಾರಿಗಳ ಮೇಲೆ ದೌರ್ಜನ್ಯ ನಡೆದಿದ್ದು, ಇದು ಯೋಧರ ಮೇಲೆ ಮಾಡಿದ ಅವಮಾನ ಎಂದು ಬೆಳೆಗಾರರ ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದೆ.

ತಹಶೀಲ್ದಾರರನ್ನು ಕೂಡಲೇ ಅಮಾನತು ಮಾಡಬೇಕು, ಈ ಜಾಗವನ್ನು ನಿವೃತ್ತ ಸೇನಾಧಿಕಾರಿಗಳಿಗೆ ಮಂಜೂರು ಮಾಡಬೇಕು. ಜಿಲ್ಲೆಯ ಮಾಜಿ ಯೋಧರಿಗೆ ಹಾಗೂ ಅವರ ವಿಧವಾ ಪತ್ನಿಯರಿಗೆ ಜಿಲ್ಲೆಯಲ್ಲಿರುವ ಸರಕಾರಿ ಜಾಗವನ್ನು ಕನಿಷ್ಟ 10 ಏಕ್ರೆ ಮಂಜೂರು ಮಾಡಬೇಕು. ಇದಲ್ಲದೇ ನಿವೃತ್ತ ಪೊಲೀಸ್, ಕ್ರೀಡಾಪಟುಗಳಿಗೆ ಹಾಗೂ ಮೂಲನಿವಾಸಿಗಳಿಗೆ ಮಾತ್ರ ಸರಕಾರಿ ಜಾಗವನ್ನು ಮಂಜೂರು ಮಾಡಬೇಕು. ಹೊರಗಿನಿಂದ ಬಂದ ಎಲ್ಲರಿಗೆ ಕೊಡಗಿನಲ್ಲಿ ಜಾಗ ನೀಡಲು ಕೊಡಗು ಜಿಲ್ಲೆ ನಿರಾಶ್ರಿತರ ತಾಣ ಅಲ್ಲ ಎಂದು ಅಭಿಪ್ರಾಯ ವ್ಯಕ್ತವಾಯಿತು. ಜಿಲ್ಲೆಯ ಯೋಧರಿಗೆ ಜಿಲ್ಲಾಡಳಿತ ಯಾವದೇ ಸೌಲಭ್ಯ ನೀಡುತ್ತಿಲ್ಲ. ನಿವೃತ್ತ ಯೋಧರಿಗೆ ಜಾಗ ಮಂಜೂರಾತಿ ಮಾಡುತ್ತಿಲ್ಲ. ಸರಕಾರ ಯೋಧರಿಗೆ ಗೌರವ ಹಾಗೂ ಸೌಲಭ್ಯ ನೀಡದ ಹಿನ್ನೆಲೆಯಲ್ಲಿ ಜಿಲ್ಲೆಯ ಯೋಧ ಪರಂಪರೆಯ ಜನರು ಸೇನೆಗೆ ಸೇರಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಕುಟ್ಟದಲ್ಲಿಯೂ ಅತಿಕ್ರಮಣ ಪ್ರವೇಶ: ಕುಟ್ಟ ಸಮೀಪ ಕೆ. ಬಾಡಗ ಗ್ರಾಮದ ಅನಾರೋಗ್ಯ ಪೀಡಿತ ಮುಕ್ಕಾಟಿರ ಕೆ. ಗಣಪತಿ ಅವರ ಆಸ್ತಿ ಮಧ್ಯೆ ಯಾವದೇ ಪೂರ್ವಾನುಮತಿ ಇಲ್ಲದೆ ಕಂದಾಯ ಇಲಾಖೆಯ 5-6 ವಾಹನಗಳು ಏಕಾಎಕಿ ತೆರಳಿ ಅತಿಕ್ರಮಣ ಪ್ರವೇಶ ಮಾಡಿದ್ದಾರೆ. ಗಣಪತಿ ಅವರ ಖಾಸಗಿ ಜಾಗದ ಮೂಲಕ ಇಷ್ಟೊಂದು ವಾಹನ ತೆರಳುತ್ತಿದ್ದುದ್ದನ್ನು ಕಂಡು ಕಿರುಚಿದ ಸಂದರ್ಭ ಒಂದು ವಾಹನ ನಿಲ್ಲಿಸಿ ತಾವು ನಿಮ್ಮ ಜಾಗದ ಸಮೀಪ ಸರ್ವೆ ನಡೆಸಲು ತೆರಳುತ್ತಿರುವ ವಿಚಾರವನ್ನು ಕಂದಾಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಂದಾಯ ಇಲಾಖೆಯ ಈ ರೀತಿಯ ದಬ್ಬಾಳಿಕೆಯನ್ನು ನಿಲ್ಲಿಸದಿದ್ದರೆ ಬೆಳೆಗಾರರನ್ನು ಒಗ್ಗೂಡಿಸಿ ಹೋರಾಟ ನಡೆಸುವದಾಗಿ ಎಚ್ಚರಿಸಿದರು.

ಸಭೆಯಲ್ಲಿ ಒಕ್ಕೂಟದ ಕಾಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಖಜಾಂಚಿ ಮಾಣೀರ ವಿಜಯ್ ನಂಜಪ್ಪ, ನಿರ್ದೇಶಕ ಕೈಬುಲಿರ ಎಂ. ಹರೀಶ್ ಉಪಸ್ಥಿತರಿದ್ದರು.