ಸೋಮವಾರಪೇಟೆ, ನ. 21: ಕನ್ನಡ ನಾಡಿನಲ್ಲಿ ಜೀವಿಸುವ ಪ್ರತಿಯೊಬ್ಬರು ಕನ್ನಡವನ್ನು ಮುಕ್ತವಾಗಿ ಮಾತನಾಡಬೇಕು. ಭಾಷಾಭಿಮಾನ ಎಂಬದು ಆಳವಾಗಿ ಬೇರೂರಿ ನಿತ್ಯವು ಬಳಕೆಯಾದಾಗ ಮಾತ್ರ ಕನ್ನಡ ರಾಜ್ಯೋತ್ಸವ ನಿತ್ಯೋತ್ಸವವಾಗಿ ನಡೆಯಲಿದೆ ಎಂದು ತಾಲೂಕು ಪಂಚಾಯಿತಿ ಸದಸ್ಯೆ ತಂಗಮ್ಮ ಹೇಳಿದರು.
ಇಲ್ಲಿನ ಮುರುಘ ರಾಜೇಂದ್ರ ಬಾಲಕಿಯರ ಪ್ರೌಢಶಾಲೆಯಲ್ಲಿ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ಅಧ್ಯಕ್ಷ ಎಸ್.ಸಿ.ರಾಜಶೇಖರ್ ಮಾತನಾಡಿ, ವಿದ್ಯಾರ್ಥಿ ದಿಸೆಯಿಂದಲೇ ಭಾಷಾಭಿ ಮಾನ ಬೆಳೆಸಿಕೊಳ್ಳಬೇಕೆಂದರು. ಇನ್ನೋರ್ವ ಅತಿಥಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ನ ಅಧ್ಯಕ್ಷ ಎಸ್. ಮಹೇಶ್ ಮಾತನಾಡಿ, ಕನ್ನಡ ಭಾಷೆಯ ಮಹತ್ವವನ್ನು ಪ್ರತಿಯೊಬ್ಬ ರಲ್ಲೂ ಮನವರಿಕೆ ಮಾಡಿಕೊಟ್ಟು ಮಾತೃ ಭಾಷೆಯ ಬೆಳವಣಿಗೆಯ ಹಾದಿಗೆ ಎಲ್ಲರೂ ಶ್ರಮಿಸಬೇಕೆಂದರು.
ನಿವೃತ್ತ ನೌಕರರ ಸಂಘದ ಅಧ್ಯಕ್ಷ ಹಾಲೇಬೇಲೂರು ನಿರ್ವಾಣಿಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ರುದ್ರೇಶ್, ತಾಲೂಕು ಸಾಹಿತ್ಯ ಪರಿಷತ್ನ ಕಾರ್ಯದರ್ಶಿ ಎಸ್.ಡಿ. ವಿಜೇತ್, ಪದಾಧಿಕಾರಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ಭಾವಗೀತೆ, ಭಾಷಣ ಸ್ವರ್ಧೆ ಏರ್ಪಡಿಸಿ ಬಹುಮಾನಗಳನ್ನು ವಿತರಿಸಲಾಯಿತು.