ನಾಪೋಕ್ಲು, ಜೂ. 21: ಮಳೆ-ಗಾಳಿ, ಚಂಡಮಾರುತ ಸೇರಿದಂತೆ ಹವಾಮಾನ ವೈಪರೀತ್ಯಗಳ ಬಗ್ಗೆ ಸಾರ್ವಜನಿಕರಿಗೆ, ರೈತರಿಗೆ ಕ್ಲುಪ್ತ ಸಮಯದಲ್ಲಿ ಮಾಹಿತಿ ನೀಡಲೆಂದು ಹವಾಮಾನ ಇಲಾಖೆ ಕಾರ್ಯನಿರ್ವಹಿಸುತ್ತಿದ್ದು ಇದಕ್ಕಾಗಿ ಇತ್ತೀಚಿನ ದಿನಗಳಲ್ಲಿ ವಿಶೇಷ ತಂತ್ರಜ್ಞಾನ ಬಳಕೆಯಾಗುತ್ತಿದೆ. ಆದರೆ ವಿಶೇಷ ತಂತ್ರಜ್ಞಾನದಿಂದ ಸ್ಥಾಪಿಸಲ್ಪಟ್ಟ ಸಾಧನಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಿದರೆ ಮಾತ್ರ ಮಳೆ ಅಥವಾ ಹವಾಮಾನದ ಬಗ್ಗೆ ನಿಖರ ಮಾಹಿತಿ ನೀಡಲು ಸಾಧ್ಯ.

ಹವಾಮಾನ, ಮಳೆಯ ಬಗ್ಗೆ ಮಾಹಿತಿಗಾಗಿ ಸ್ಥಾಪನೆಗೊಂಡಿರುವ ಮಾಹಿತಿ ಘಟಕಗಳು ಯಾವ ರೀತಿ ಕೆಲಸ ನಿರ್ವಹಿಸುತ್ತಿದೆ ಎಂಬದಕ್ಕೆ ಇಲ್ಲಿಗೆ ಸಮೀಪದ ಬಿದ್ದಾಟಂಡ ವಾಡೆಯ ಬಳಿ ಸ್ಥಾಪಿತವಾಗಿರುವ ಮಳೆ ಮಾಪನ ಕೇಂದ್ರ ತಾಜಾ ಉದಾಹರಣೆ.

8 ವರ್ಷಗಳ ಹಿಂದೆ ಈ ಕೇಂದ್ರ ಸ್ಥಾಪಿಸಿದ ಬಳಿಕ ಯಾವದೇ ನಿರ್ವಹಣೆಯೂ ಇಲ್ಲದೆ ನಿಷ್ಕ್ರಿಯಗೊಂಡಿದೆ.

ಈ ಘಟಕದ ಯಂತ್ರೋಪಕರಣ ಸಾಧನಗಳು ಕಿತ್ತು ಹೋಗಿದಲ್ಲದೆ ಸುತ್ತಲೂ ಹಾಕಿದ ಬೇಲಿಯೂ ಇಲ್ಲ. ಸಮರ್ಪಕ ನಿರ್ವಹಣೆಯು ಇಲ್ಲ. ಇದರ ಪ್ರಮುಖ ಕೇಂದ್ರ ಅಹಮದಾಬಾದಿನಲ್ಲಿದ್ದು ರೈತರಿಗೆ ಹವಾಮಾನದ ನಿಖರ ಮಾಹಿತಿ ತಿಳಿಸಲು ಸ್ಥಾಪಿಸಲಾಗಿ, ರೈತರಿಗೆ ಕಾಫಿಗೆ ಸಂಬಂಧಿಸಿದಂತೆ ವಿಮಾ ಸೌಲಭ್ಯ ಇರುವದರಿಂದ ಕಾಫಿ ಬೆಳೆಗಾರರಿಗೆ ಈ ವ್ಯಾಪ್ತಿಯ ಮಳೆಯ ಪ್ರಮಾಣದ ದಾಖಲು ಅಗತ್ಯ. ಸಾಧನಗಳು ಸರಿಯಾಗಿ ಕಾರ್ಯನಿರ್ವಹಿಸದೆ ಸರಿಯಾದ ಮಾಹಿತಿಯೂ ಇಲ್ಲದೆ ಬೆಳೆಗಾರರು ಪರದಾಡುವಂತಾಗಿದ್ದು, ನಿರ್ವಹಣೆ ಇಲ್ಲದ ಈ ಮಳೆ ಮಾಪನ ಮಾಹಿತಿ ಕೇಂದ್ರದಿಂದÀ ರೈತರಿಗೆ ಯಾವದೇ ಪ್ರಯೋಜನ ಇಲ್ಲದಂತಾಗಿದೆ.

-ದುಗ್ಗಳ ಸದಾನಂದ