ಸೋಮವಾರಪೇಟೆ, ಜು. 27: ಇಲ್ಲಿನ ತಾಲೂಕು ಕಚೇರಿಯಿಂದ ಪೊಲೀಸ್ ಠಾಣೆ, ಪೊಲೀಸ್ ವಸತಿ ಗೃಹ ಹಾಗೂ ರೇಂಜರ್ಸ್ ಬ್ಲಾಕ್‍ಗೆ ತೆರಳುವ ರಸ್ತೆ ಮಧ್ಯದಲ್ಲಿರುವ ನಿರುಪ ಯುಕ್ತ ಟ್ಯಾಂಕ್ ತೆರವುಗೊಳಿಸಲು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ಮಿನಿ ವಿಧಾನಸೌಧ ಹಾಗೂ ಪೊಲೀಸ್ ಠಾಣೆ ಮುಂಭಾಗ ರೇಂಜರ್ ಬ್ಲಾಕ್‍ಗೆ ತೆರಳುವ ಮಾರ್ಗದ ಮಧ್ಯೆಯಲ್ಲಿ ಹಲವು ವರ್ಷಗಳಿಂದ ನಿರುಪಯುಕ್ತ ಹಾಗೂ ಅಪಾಯಕಾರಿ ಸ್ಥಿತಿಯಲ್ಲಿರುವ ಟ್ಯಾಂಕ್ ಬಗ್ಗೆ ಸಾರ್ವಜನಿಕರು ಶಾಸಕ ರಂಜನ್‍ಗೆ ದೂರಿಕೊಂಡ ಹಿನ್ನೆಲೆಯಲ್ಲಿ ಶಾಸಕರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಕಳೆದ 30 ವರ್ಷಗಳ ಹಿಂದೆ ನಿರ್ಮಾಣಗೊಂಡ ನೆಲಮಟ್ಟದ ಟ್ಯಾಂಕ್ ಈವರೆಗೆ ಉಪಯೋಗಿಸಿಲ್ಲ. ಇದೀಗ ಅಪಾಯಕಾರಿ ಸ್ಥಿತಿ ತಲುಪಿದೆ. ಅಲ್ಲದೆ ಮಾರ್ಗ ಮಧ್ಯದಲ್ಲಿಯೇ ಇರುವದರಿಂದ ವಾಹನವಾಗಲಿ, ಪಾದಚಾರಿಗಳಾಗಲಿ ಇಲ್ಲಿ ಓಡಾಡಲು ಕಷ್ಟಕರವಾಗುತ್ತಿದೆ. 30 ವರ್ಷಗಳಿಂದ ಟ್ಯಾಂಕ್ ಉಪಯೋಗಿಸದೇ ಇರುವದರಿಂದ ಶಿಥಿಲಾವಸ್ಥೆ ತಲುಪಿದ್ದು, ಮುಂದೆ ಅಪಾಯ ಸಂಭವಿಸಲಿದೆ. ಇದರೊಂದಿಗೆ ಅಕ್ಕಪಕ್ಕದವರು ಕಸ ಹಾಕಲು ಇದೇ ಸ್ಥಳವನ್ನು ಉಪಯೋಗಿಸುತ್ತಿರುವದರಿಂದ ವಾತಾವರಣ ಗಬ್ಬೆದ್ದು ನಾರುತ್ತಿದೆ ಎಂದು ಸ್ಥಳದಲ್ಲಿದ್ದ ನಾಗರಿಕರು ದೂರಿದರು.

ನಿರುಪಯುಕ್ತ ಟ್ಯಾಂಕ್‍ನ್ನು ತಕ್ಷಣ ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡುವದು ಸೂಕ್ತವೆಂದು ಪ.ಪಂ. ಮುಖ್ಯಾಧಿಕಾರಿ ನಾಚಪ್ಪ ಹಾಗೂ ಅಭಿಯಂತರ ವೀರೇಂದ್ರ ಅವರಿಗೆ ಶಾಸಕ ರಂಜನ್ ಸೂಚಿಸಿದರು. ಈ ಟ್ಯಾಂಕ್ ಒಮ್ಮೆ ನೀರು ತುಂಬಿಸಿ ಪರಿಶೀಲಿಸಿದ ನಂತರ ಕ್ರಮಕೈಗೊಳ್ಳುವದಾಗಿ ಅಭಿಯಂತರ ವೀರೇಂದ್ರ ತಿಳಿಸಿದರು. ಕಳೆದ 5 ವರ್ಷಗಳ ಹಿಂದೆ ಈ ಬಗ್ಗೆ ತಿಳಿಸಿದಾಗ ಆಗಲೂ ನೀರು ತುಂಬಿಸಿ ಪರಿಶೀಲಿಸುತ್ತೇವೆ ಎಂದು ಹೇಳಿದ್ದೀರಿ ಆದರೆ ಈವರೆಗೂ ಮಾಡಲಿಲ್ಲ. ಇದೀಗ ಪುನಃ ಅದೇ ಉತ್ತರ ನೀಡುತ್ತಿದ್ದೀರಿ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರಲ್ಲದೆ, ತಕ್ಷಣ ಟ್ಯಾಂಕ್ ತೆರವುಗೊಳಿಸಿ ಎಂದು ತಾಕೀತು ಮಾಡಿದರು.