ಸೋಮವಾರಪೇಟೆ, ಸೆ. 29: ಸಾವಿರಾರು ಸಾರ್ವಜನಿಕರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಕೈಗೊಳ್ಳುವ ಕೆಲಸಗಳಲ್ಲಿ ರಾಜಕೀಯ ಹಿತಾಸಕ್ತಿ ನುಸುಳಿದರೆ ಏನಾಗುತ್ತದೆ ಎಂಬದಕ್ಕೆ ಸೋಮವಾರಪೇಟೆಯಲ್ಲಿ ಕಳೆದ 9 ವರ್ಷಗಳ ಹಿಂದೆ ಭೂಮಿಪೂಜೆ ನೆರವೇರಿದ ಶತಮಾನೋತ್ಸವ ಭವನವೇ ಸಾಕ್ಷಿ.
ನಾ ಮೇಲು-ತಾ ಮೇಲು ಎಂಬ ಭ್ರಮೆ ರಾಜಕಾರಣಿಗಳ ಮೆದುಳಿನಲ್ಲಿ ಕುಳಿತರೆ ಸರ್ಕಾರದ ಹಣವೂ ಹೇಗೆ ಪೋಲಾಗುತ್ತದೆ ಎಂಬದಕ್ಕೆ ಈ ಕಟ್ಟಡ ಸಾಕ್ಷಿ. ಹೌದು, ಇಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳ ಕನಸ್ಸಿನ ಕೂಸಾದ ಶತಮಾನೋತ್ಸವ ಭವನ ರಾಜಕೀಯ ಮೇಲಾಟದಲ್ಲಿ ಸೂಕ್ತ ಹಣಕಾಸು ನೆರವಿಲ್ಲದೆ ಕಳೆದ 9 ವರ್ಷಗಳಿಂದ ಪಾಳುಬಿದ್ದಿದೆ.
ಹಳೆ ವಿದ್ಯಾರ್ಥಿಗಳ ಕನಸು: ಸೋಮವಾರಪೇಟೆ ಮಟ್ಟಿಗೆ ಅಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಲು ನೆರಳಾದ ಆಲದ ಮರದಂತಿರುವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ 112 ವರ್ಷಗಳ ಇತಿಹಾಸವಿದ್ದು, ಈ ಶಾಲೆಯಲ್ಲಿ ಓದಿದ ಅನೇಕರು ಇಂದು ಉನ್ನತ ಸ್ಥಾನದಲ್ಲಿದ್ದಾರೆ. ಹಲವರು ವಿದೇಶಗಳಲ್ಲಿ ನೆಲೆಸಿದ್ದರೆ, ಬಹುತೇಕರು ದೇಶದ ವಿವಿಧ ಉನ್ನತ ಹುದ್ದೆಗಳಲ್ಲಿದ್ದಾರೆ. ಅದರಂತೆ ರಾಜಕಾರಣದಲ್ಲೂ ನೂರಾರು ಮಂದಿ ಇದ್ದಾರೆ. ಆದರೆ ತಾವು ಓದಿದ ಶಾಲೆಗೆ 100 ವರ್ಷ ತುಂಬಿದ ಸವಿ ನೆನಪನ್ನು ಶಾಶ್ವತ ವಾಗಿಸಲು ಹಳೆ ವಿದ್ಯಾರ್ಥಿಗಳು ಒಟ್ಟು ಸೇರಿ, ಅಂದಿನ ಶಾಸಕರು ಹಾಗೂ ಶಾಲೆಯ ಹಳೆ ವಿದ್ಯಾರ್ಥಿ ಯಾಗಿದ್ದ ಬಿ.ಎ. ಜೀವಿಜಯರನ್ನು ಭೇಟಿಯಾಗಿ ಚರ್ಚಿಸಿ, ಸವಿ ನೆನಪಿಗಾಗಿ ಶತಮಾನೋತ್ಸವ ಭವನಕ್ಕೆ ಚಾಲನೆ ನೀಡಲಾಗಿತ್ತು.
2007 ರಲ್ಲಿ ರೂ. 1.25 ಕೋಟಿ ವೆಚ್ಚದಲ್ಲಿ ಶತಮಾನೋತ್ಸವ ಭವನ ನಿರ್ಮಿಸಲು ಅಂದಾಜು ಪಟ್ಟಿ ತಯಾರಿಸಲಾಯಿತು. ಅಂದಿನ ಶಾಸಕ ಬಿ.ಎ. ಜೀವಿಜಯ ತಮ್ಮ ಶಾಸಕರ ನಿಧಿಯಿಂದ ರೂ. 18 ಲಕ್ಷ ಅನುದಾನ ನೀಡಿದರು. ನಂತರ ಬೇರೆ ಬೇರೆ ಮೂಲದಿಂದ ಹಣ ಸಂಗ್ರಹಿಸುವದಕ್ಕೆ ಮುಂದಾದರು. ಮಲೆನಾಡು ಅಭಿವೃದ್ಧಿ ಮಂಡಳಿಯಿಂದ ವಿವಿಧ ಹಂತಗಳಲ್ಲಿ ರೂ. 15 ಲಕ್ಷ, ರಾಜ್ಯಸಭಾ ಸದಸ್ಯ ರೆಹಮಾನ್ ಖಾನ್‍ರವರು ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯಿಂದ ರೂ. 4 ಲಕ್ಷ, ಕೇಂದ್ರ ಸಚಿವ ಎಂ.ವಿ. ರಾಜಶೇಖರನ್ ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯಿಂದ ರೂ. 2.5 ಲಕ್ಷ ಹಾಗೂ ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ಅವರು ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯಿಂದ ರೂ. 3 ಲಕ್ಷ ಒದಗಿಸಿದ್ದರು. ಈ ಹಣದಲ್ಲಿ ಕಾಮಗಾರಿ ಪ್ರಾರಂಭವಾಯಿತು.
ಪಾಳು ಬಿದ್ದ ಬಂಗಲೆ: ಬಿ.ಎ. ಜೀವಿಜಯ ಅವರ ಉತ್ಸಾಹದಿಂದ ಭವನ ನಿರ್ಮಾಣಕ್ಕೆ ಚಾಲನೆ ನೀಡಿದ್ದರೂ, ನಂತರ ಎದುರಾದ ವಿಧಾನ ಸಭೆ ವಿಸರ್ಜನೆ ಅವರ ಉತ್ಸಾಹಕ್ಕೆ ತಣ್ಣೀರು ಎರಚಿ ದಂತಾಯಿತು. ನಂತರದ ಚುನಾವಣೆಯಲ್ಲಿ ಜೀವಿಜಯ ಅವರು ಪರಾಭವಗೊಂಡರು. ಇದರೊಂದಿಗೆ ಈ ಶಾಲೆಯ ಶತಮಾನೋತ್ಸವ ಭವನಕ್ಕೆ ಅನುದಾನದ ಗ್ರಹಣ ಹಿಡಿಯಿತು. ಅಷ್ಟೊತ್ತಿಗಾಗಲೆ ಶೇ. 50 ರಷ್ಟು ಕಾಮಗಾರಿ ಪೂರ್ಣಗೊಂಡಿತ್ತು.
ನಂತರ ದಿನಗಳಲ್ಲಿ ಜನಪ್ರತಿನಿಧಿಗಳು ಅತ್ತ ತಿರುಗಿಯೂ ನೋಡಲಿಲ್ಲ. ಶತಮಾನೋತ್ಸವ ಭವನ ಪಾಳು ಬಿದ್ದಿರುವ ಬಂಗಲೆ ಯಂತಾಯಿತು. ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣ ಗೊಳ್ಳದ ಹಿನ್ನೆಲೆಯಲ್ಲಿ, ಅಧಿಕ ಪ್ರಮಾಣದಲ್ಲಿ ಪರಿಕರಗಳ ಬೆಲೆ ಏರಿರುವದರಿಂದ ಕೆಲಸ ಪೂರ್ಣಗೊಳಿಸಲು ಇನ್ನು ರೂ. 1 ಕೋಟಿ ಅನುದಾನ ಅವಶ್ಯಕತೆಯಿದೆ. ಶಾಲೆಯ ಪಕ್ಕದಲ್ಲಿ ಭವನ ನಿರ್ಮಾಣಕ್ಕೆ ಸುಮಾರು 30 ಸೆಂಟ್ ಸ್ಥಳದಲ್ಲಿ 80 ಚದರ ವಿಸ್ತೀರ್ಣದ ಬೃಹತ್ ಭವನದಲ್ಲಿ 1500 ರಿಂದ 2000 ಮಂದಿಗೆ ಆಸನದ ವ್ಯವಸ್ಥೆ ಕಲ್ಪಿಸುವ ಉದ್ದೇಶವಿದೆ. ಕಟ್ಟಡದ ನೆಲಮಾಳಿಗೆಯಲ್ಲಿ ಅಡುಗೆ ಮನೆ ಹಾಗೂ ಊಟದ ಸಭಾಂಗಣಕ್ಕೆ ವ್ಯವಸ್ಥೆ ಮಾಡಲಾಗಿದೆ.
ಪಟ್ಟಣ ಪಂಚಾಯಿತಿಯಿಂದ ರೂ. 1 ಕೋಟಿ ಅನುದಾನಕ್ಕೆ ಕೊಕ್ಕೆ: ಕೇಂದ್ರ ಸರ್ಕಾರ ಪುರಸ್ಕøತ ಯುಐಡಿಎಸ್‍ಎಸ್‍ಎಂಟಿ ಯೋಜನೆ ಯಡಿ ಪ್ರತಿ ಪಟ್ಟಣ ಪಂಚಾಯಿತಿ ಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ರೂ. 20 ಕೋಟಿ ಕ್ರೀಯಾ ಯೋಜನೆಯನ್ನು ರೂಪಿಸಲಾಗಿತ್ತು. ಅದರಲ್ಲಿ ಶತಮಾನೋತ್ಸವ ಭವನ ಕಾಮಗಾರಿ ಪೂರ್ಣಗೊಳಿಸಲು ರೂ. 1 ಕೋಟಿ ಮೀಸಲಿಡಲಾಗಿತ್ತು. ಈ ಹಣ ಮೀಸಲಿಟ್ಟಿದ್ದರೆ ಇಂದಿಗೆ ಭವನ ಪೂರ್ಣಗೊಂಡು ಉದ್ಘಾಟನೆಯೂ ಆಗಿ ಸಾರ್ವಜನಿಕರ ಉಪಯೋಗಕ್ಕೆ ಬರುತ್ತಿತ್ತು.
ಸಾಮಾನ್ಯ ಸಭೆಯಲ್ಲಿ ಕ್ಯಾತೆ: ಕಳೆದ 2013ರ ಅ. 22 ರಂದು ಪಂಚಾಯಿತಿ ಅಧ್ಯಕ್ಷೆ ಲೀಲಾ ನಿರ್ವಾಣಿ ಅಧ್ಯಕ್ಷತೆಯಲ್ಲಿ ನಡೆದ ಪಂಚಾಯಿತಿ ಪ್ರಥಮ ಸಾಮಾನ್ಯ ಸಭೆಯಲ್ಲಿ ಶತಮಾನೋತ್ಸವ ಭವನ ಕಾಮಗಾರಿಗೆ ಮೀಸಲಿಟ್ಟಿದ್ದ ಹಣವನ್ನು ಪಟ್ಟಣದ ಕುಡಿಯುವ ನೀರಿನ ಸರಬರಾಜಿಗೆ ಮೋಟಾರು ಖರೀದಿಸಲು ಮಾರ್ಪಾಡು ಮಾಡುವಂತೆ ಬಿಜೆಪಿಯ ಲೀಲಾ ನಿರ್ವಾಣಿ, ಬಿ.ಈ. ರಮೇಶ್, ಕಾಂಗ್ರೆಸ್‍ನ ಶೀಲಾ ಡಿಸೋಜ, ಮೀನಾ ಕುಮಾರಿ ವಾದಿಸಿದರು. ಶತಮಾನೋತ್ಸವ ಭವನವಿರುವದು ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ, ಪಟ್ಟಣ ಅಭಿವೃದ್ಧಿಗೆ ಮೀಸಲಾದ ಹಣವನ್ನು ಅಲ್ಲಿಗೆ ವಿನಿಯೋಗಿಸಲು ಸಾಧ್ಯವಿಲ್ಲ ಎಂದು ಅವರುಗಳು ಸ್ಪಷ್ಟಪಡಿಸಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಅಂದು ಜೆಡಿಎಸ್‍ನಲ್ಲಿದ್ದ ವಿಜಯಲಕ್ಷ್ಮಿ, ಬಿ.ಎಂ. ಸುರೇಶ್, ಕಾಂಗ್ರೆಸ್‍ನ ಬಿ.ಸಿ. ವೆಂಕಟೇಶ್, ಶತಮಾನೋತ್ಸವ ಭವನಕ್ಕೆ ಕ್ರೀಯಾ ಯೋಜನೆಯಲ್ಲಿ ಮೀಸಲಿಟ್ಟ ಹಣವನ್ನು ಬದಲಾವಣೆ ಮಾಡಬಾರದು ಎಂದು ಪಟ್ಟು ಹಿಡಿದರು.
ಶತಮಾನೋತ್ಸವ ಭವನ ಕಾಮಗಾರಿ ಪೂರ್ಣಗೊಂಡರೆ, ಪಟ್ಟಣದ ಜನರಿಗೆ, ಸಂಘ-ಸಂಸ್ಥೆಗಳಿಗೆ ಉಪಯೋಗವಾಗುತ್ತದೆ. ಭವನ ಪಟ್ಟಣಕ್ಕೆ ಸಮೀಪದಲ್ಲಿದ್ದು, ಮುಂದೆ ಪಟ್ಟಣ ಪಂಚಾಯಿತಿ ವ್ಯಾಪ್ತಿ ವಿಸ್ತಾರವಾದರೆ ಉದ್ದೇಶಿತ ಭವನ ಪಟ್ಟಣಕ್ಕೆ ಸೇರ್ಪಡೆಯಾಗಲಿದೆ. ಅಭಿವೃದ್ಧಿ ವಿಷಯದಲ್ಲಿ ತಾರತಮ್ಯ ಬೇಡ, ಕೇಂದ್ರ ಸರ್ಕಾರದ ಹಣವನ್ನು ಸದುದ್ದೇಶದ ಕಾಮಗಾರಿಗಳಿಗೆ ಉಪಯೋಗಿಸಲು ಯಾವದೇ ಅಡೆತಡೆಗಳಿಲ್ಲ ಎಂದು ವಾದಿಸಿದರು. ಈ ಬಗ್ಗೆ ಸೂಕ್ತ ನಿರ್ಣಯ ಕೈಗೊಳ್ಳುವಲ್ಲಿ ಸಭೆ ವಿಫಲವಾಯಿತು. ರೂ. 1 ಕೋಟಿ ಅನುದಾನಕ್ಕೂ ಕೊಕ್ಕೆ ಬಿತ್ತು.
ಶಿಕ್ಷಕರ ಬೇಡಿಕೆ: ಈ ಮಧ್ಯೆ ಭವನವನ್ನು ತಮ್ಮ ಸುಪರ್ದಿಗೆ ನೀಡಿದರೆ ನಾವುಗಳು ಯಾವದಾದರೂ ಮೂಲದಿಂದ ಹಣತಂದು ಗುರುಭವನ ನಿರ್ಮಿಸುತ್ತೇವೆ ಎಂದು ಶಿಕ್ಷಕರ ಸಂಘ ಮನವಿಯನ್ನು ಮಾಡಿತ್ತು. ಆದರೆ ಇದಕ್ಕೆ ಯಾರೂ ಒಪ್ಪಿಗೆ ನೀಡಲಿಲ್ಲ. ಪರಿಣಾಮ ಶತಮಾನೋತ್ಸವ ಭವನ ಇಂದಿಗೂ ಪಾಳುಬಿದ್ದ ಸ್ಮಾರಕದಂತೆ ಕಂಡುಬರುತ್ತಿದೆ.
ರಾಜಕೀಯ ದುರುದ್ದೇಶ: ಮಾಜಿ ಸಚಿವ ಬಿ.ಎ. ಜೀವಿಜಯ ಪ್ರಾರಂಭ ಮಾಡಿದ, ಕಾಮಗಾರಿ ಯನ್ನು ಪೂರ್ಣಗೊಳಿಸಲು, ಇನ್ನೊಂದು ಪಕ್ಷದವರಿಗೆ ಇಷ್ಟವಿಲ್ಲ. ಈ ಕಾರಣದಿಂದ ಕಳೆದ ಆರು ವರ್ಷಗಳಿಂದ ಶತಮಾನೋತ್ಸವ ಭವನಕ್ಕೆ ಸರ್ಕಾರದಿಂದ ಹಣ ಒದಗಿಸಲು ಯಾರೂ ಮುಂದಾಗಿಲ್ಲವೆಂಬ ಆರೋಪಗಳು ಇದೀಗ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
ಒಟ್ಟಾರೆ ಸಾವಿರಾರು ಮಂದಿಗೆ ಉಪಯೋಗವಾಗುವ ಈ ಭವನವನ್ನು ಪೂರ್ಣಗೊಳಿಸುವ ಪ್ರಬಲ ಇಚ್ಛಾಶಕ್ತಿ, ರಾಜಕೀಯ ರಹಿತ ಕಾರ್ಯದಕ್ಷತೆ, ಜನೋಪಕಾರದ ಮನಸ್ಸನ್ನು ಭಗವಂತ ಕರುಣಿಸಲಿ ಎಂಬದು ಈ ಶಾಲೆಯ ಹಳೆ ವಿದ್ಯಾರ್ಥಿಗಳೂ ಸೇರಿದಂತೆ ಸೋಮವಾರಪೇಟೆ ವ್ಯಾಪ್ತಿಯ ಸಾರ್ವಜನಿಕರ ಆಶಯವಾಗಿದೆ.
ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಈ ಬಗ್ಗೆ ಗಮನಹರಿಸಿದರೆ ಶತಮಾನೋತ್ಸವ ಭವನ ಕೆಲವೇ ತಿಂಗಳಲ್ಲಿ ಉದ್ಘಾಟನೆಯಾಗಲಿದೆ. ತಪ್ಪಿದಲ್ಲಿ ಮುಂದೆಯೂ ಸ್ಮಾರಕವಾಗಿಯೇ ಉಳಿಯಲಿದೆ!
- ವಿಜಯ್ ಹಾನಗಲ್