ಕುಶಾಲನಗರ, ಆ. 22: ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿಯಮ ಬಾಹಿರವಾಗಿ ಕಚೇರಿಯ ಗುಮಾಸ್ತ ಹುದ್ದೆಗೆ ನೇಮಕಾತಿ ನಡೆಸಿದೆ ಎಂದು ಸಂಘದ ನಿರ್ದೇಶಕರಾದ ಹೆಚ್.ಬಿ. ಚಂದ್ರಪ್ಪ ಮತ್ತು ಕೆ.ಎಸ್. ಕೃಷ್ಣೇಗೌಡ ಆರೋಪಿಸಿದ್ದಾರೆ.ಕುಶಾಲನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಮಾಜಿ ಅಧ್ಯಕ್ಷರೂ ಹಾಗೂ ನಿರ್ದೇಶಕ ಹೆಚ್. ಬಿ. ಚಂದ್ರಪ್ಪ, ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕೆಲವು ಸದಸ್ಯರು ಸಹಕಾರ ಸಂಘದ ನಿಯಮಗಳನ್ನು ಗಾಳಿಗೆ ತೂರಿ ದಿನಗೂಲಿ ಆಧಾರದ ಮೇಲೆ ಒಂದು ಹುದ್ದೆಗೆ ಸಂದರ್ಶನ ನಡೆಸಿ ನೇಮಕಾತಿಗೊಳಿಸಿದ್ದಾರೆ. ಸಹಕಾರ ಸಂಘಗಳ ರಿಜಿಸ್ಟ್ರಾರ್ ಅನುಮತಿ ಇಲ್ಲದೆ ನೇಮಕಗೊಳಿಸಿರುವ ಹುದ್ದೆಯನ್ನು ರದ್ದುಗೊಳಿಸುವಂತೆ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದ್ದು, ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸಂಘದ ನಿರ್ದೇಶಕ ಕೆ. ಎಸ್. ಕೃಷ್ಣೇಗೌಡ ಮಾತನಾಡಿ, ಸಂಘದ ದುಡಿಯುವ ಬಂಡವಾಳದ ಆಧಾರದ ಮೇಲೆ ಸಿಬ್ಬಂದಿಗಳ ನೇಮಕಾತಿ ನಡೆಯುತ್ತದೆ. ಆದರೆ ವಾರ್ಷಿಕ ರೂ. 12 ಕೋಟಿ ವಹಿವಾಟು ನಡೆಸುತ್ತಿರುವ ಸಂಘದಲ್ಲಿ ಈಗಾಗಲೇ ಹೆಚ್ಚುವರಿ ನೌಕರರು ಕಾರ್ಯನಿರ್ವಹಿಸುತ್ತಿದ್ದು, ವಾರ್ಷಿಕವಾಗಿ ಎರಡು ಲಕ್ಷ ರೂ.ಗಳ ಹೊರೆಯಾಗುತ್ತಿದೆ. ಇರುವ ಸಿಬ್ಬಂದಿಗಳಿಗೆ ಸಮರ್ಪಕವಾದ ಕೆಲಸವಿಲ್ಲದ ಹಿನ್ನೆಲೆಯಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನೇಮಕಾತಿ ಸಂಘದ ಅಭಿವೃದ್ಧಿಯನ್ನು ಕುಂಠಿತಗೊಳಿಸಲಿದೆ ಎಂದು ಆರೋಪಿಸಿದರು.
ಸಂಬಂಧಪಟ್ಟ ಅಧಿಕಾರಿಗಳು ನಿಯಮ ಬಾಹಿರವಾಗಿ ನಡೆಸಿರುವ ನೇಮಕಾತಿಯನ್ನು ಕೂಡಲೇ ರದ್ದುಗೊಳಿಸಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ. ಗೋಷ್ಠಿಯಲ್ಲಿ ತೊರೆನೂರು ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ. ಪಾಂಡು ಇದ್ದರು.