ಶ್ರೀಮಂಗಲ, ಜು. 8: ಬಾಳೆಲೆ-ನಿಟ್ಟೂರು ನಡುವಿನ ಲಕ್ಷ್ಮಣ ತೀರ್ಥ ನದಿಗೆ ಈಗ ಇರುವ ಸೇತುವೆಯನ್ನು ಮತ್ತು ರಸ್ತೆಯನ್ನು ಎತ್ತರಿಸಿ ಪ್ರವಾಹ ಬಂದರೂ ರಸ್ತೆ ಸಂಪರ್ಕ ಕಡಿತವಾಗದಂತೆ ರೂ. 5 ಕೋಟಿ ಅನುದಾನದಲ್ಲಿ ಹೊಸ ನಿಟ್ಟೂರು ಸೇತುವೆಯ ನಿರ್ಮಾಣಕ್ಕೆ ಗುಂಡಿ ತೆಗೆಯುವಾಗ ಹಳೆ ಸೇತುವೆಯ ಕಂಬಗಳ ಹತ್ತಿರ ಮಣ್ಣನ್ನು ತೆಗೆದ ಪರಿಣಾಮವಾಗಿ, ಸೇತುವೆಯ ಒಂದು ಕಡೆ ಕುಸಿದು ಬೀಳುವ ಹಂತ ತಲಪಿದೆ. ಸ್ಥಳಕ್ಕೆ ಜಿ.ಪಂ. ಸದಸ್ಯ ಬಾನಂಡ ಪ್ರಥ್ಯು ಭೇಟಿ ನೀಡಿ ಸಂಚಾರಕ್ಕೆ ತೊಂದರೆಯಾಗದಂತೆ ಸೇತುವೆ ಕುಸಿದ ಸ್ಥಳವನ್ನು ಸರಿಪಡಿಸಲು ತುರ್ತು ಕ್ರಮ ಕೈಗೊಳ್ಳಲು ಲೋಕೋಪಯೋಗಿ ಇಲಾಖಾಧಿಕಾರಿಗಳಿಗೆ ತಿಳಿಸಿದ್ದಾರೆ.

ಜಿ.ಪಂ. ಸದಸ್ಯ ಬಾನಂಡ ಪ್ರಥ್ಯು ಅವರು, ಬಾಳಲೆ ಕಂದಾಯ ಪರಿವೀಕ್ಷಕ ಚಂದ್ರನ್ ಹಾಗೂ ಪಿ.ಡಬ್ಲ್ಯೂ.ಡಿ. ಇಂಜಿನಿಯರ್ ವಿಜಯ ಕುಮಾರ್‍ರವರನ್ನು ಸಂಪರ್ಕಿಸಿ, ತಕ್ಷಣ ಸೇತುವೆ ಕುಸಿತವನ್ನು ತಡೆಗಟ್ಟಲು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವಿಜಯ ಕುಮಾರ್, ಮಳೆ ಸ್ವಲ್ಪ ನಿಂತ ಕೂಡಲೇ ಹಳೇ ಸೇತುವೆಯ ಕಂಬಗಳು ಜರಿಯದಂತೆ ಮರಳು ಚೀಲ ಹಾಗೂ ಕಲ್ಲುಗಳನ್ನು ತುಂಬಲಾಗುವದು ಎಂದು ತಿಳಿಸಿದರು.

ಈ ಬಗ್ಗೆ ಮಾಹಿತಿ ನೀಡಿದ ಅಡ್ಡೆಂಗಡ ಅರುಣ್, ಹಲವು ದಶಕಗಳನ್ನು ಪೂರೈಸಿರುವ ಈ ಸೇತುವೆ ಪ್ರತೀ ವರ್ಷ ಮಳೆಗಾಲದಲ್ಲಿ ಪ್ರವಾಹಕ್ಕೆ ಮುಳುಗಡೆಯಾಗಿ ನಿಟ್ಟೂರು, ಕಾರ್ಮಾಡು, ತಟ್ಟಕೆರೆ, ಜಾಗಲೆ, ಕೊಟ್ಟಗೇರಿ ಭಾಗದ ಜನರಿಗೆ ವಾರಗಳವರೆಗೆ ಪಟ್ಟಣಗಳ ಸಂಪರ್ಕ ಕಡಿತಗೊಳ್ಳುತಿತ್ತು. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಹೆಚ್.ಸಿ. ಮಹದೇವಪ್ಪ ಉಸ್ತುವಾರಿ ಸಚಿವರಾಗಿದ್ದಾಗ ಸ್ಥಳೀಯ ನಾಯಕರ ಒತ್ತಾಯದಿಂದ ಸುಮಾರು ರೂ. 5 ಕೋಟಿ ಅನುದಾನ ಬಿಡುಗಡೆ ಯಾಗಿದ್ದು, ರಸ್ತೆಯನ್ನು ಎತ್ತರಿಸಿ ನದಿ ಪ್ರವಾಹ ಬಂದರೂ ರಸ್ತೆ ಸಂಪರ್ಕ ಕಡಿತವಾಗದಂತೆ ಈ ಯೋಜನೆ ಮಾಡಲಾಗುತ್ತಿದೆ.

ಇದರಿಂದ ಇಲ್ಲಿ ನೂತನ ಸೇತುವೆ ನಿರ್ಮಾಣ ಹಾಗೂ ರಸ್ತೆ ನಿರ್ಮಾಣಕ್ಕೆ ಪಿ.ಡಬ್ಯೂ.ಡಿ. ಇಲಾಖೆಗೆ ಒಪ್ಪಿಸಲಾಗಿದೆ. ಈಗ ಹೊಸ ಸೇತುವೆ ನಿರ್ಮಾಣಕ್ಕೆ ಇಲಾಖೆ ಮುಂದಾಗಿ ಹಳೇ ಸೇತುವೆಯ ಒಂದು ಕಡೆ ಕುಸಿದಿದ್ದು, ಮೇಲಿನ ಸ್ಲ್ಯಾಬ್ ಮತ್ತು ಕಂಬಕ್ಕೆ ಸುಮಾರು ಅರ್ಧ ಅಡಿಗಳ ಅಂತರ ಕಂಡು ಬರುತ್ತಿದ್ದು, ಮಳೆ ಹೆಚ್ಚಾದರೆ ಸೇತುವೆ ಕುಸಿದು ಅಪಾಯ ಉಂಟಾಗುವ ಪರಿಸ್ಥಿತಿ ನಿರ್ಮಾಣ ವಾಗಲಿದೆ ಎಂದು ಆತಂಕ ವ್ಯಕ್ತ ಪಡಿಸಿದರು. ಈಗಾಗಲೇ ಈ ಸೇತುವೆಯ ಮೇಲೆ ಭಾರೀ ಗಾತ್ರದ ವಾಹನಗಳನ್ನು ನಿರ್ಬಂಧಿಸಲಾಗಿದೆ. ಸೇತುವೆಯ ಮೇಲೆ ಕಳೆದ 8 ದಿನಗಳಿಂದ ನಿರ್ಬಂಧ ಹೇರಿದ್ದು, 5 ಗ್ರಾಮದ ಮಕ್ಕಳನ್ನು ಪೋಷಕರು ಬಾಳೆಲೆ ಪಟ್ಟಣಕ್ಕೆ ತೆರಳಿ ತಮ್ಮ ಲಘು ವಾಹನದಲ್ಲಿ ಕರೆದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣ ವಾಗಿದ್ದು, ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭ ಬಾಳೆಲೆ ಕಾಂಗ್ರೆಸ್ ಸ್ಥಾನೀಯ ಸಮಿತಿ ಅಧ್ಯಕ್ಷ ಆದೇಂಗಡ ವಿನು ಉತ್ತಪ್ಪ, ಬಾಣಂಗಡ ರಮೇಶ್ ಮತ್ತು ಸಾರ್ವಜನಿಕರು ಹಾಜರಿದ್ದರು.