ಸುಂಟಿಕೊಪ್ಪ ಸಹಕಾರ ಸಂಘದ ಸಭೆ
ಸುಂಟಿಕೊಪ್ಪ, ಸೆ. 23: ಸುಂಟಿಕೊಪ್ಪ ಕೃಷಿ ಪತ್ತಿನ ಸಹಕಾರ ಸಂಘ ಲಾಭದತ್ತ ಮುನ್ನಡೆಯುತ್ತಿದ್ದರೂ ಸದಸ್ಯರುಗಳಿಗೆ ನಿಗದಿಪಡಿಸಿದ ಡಿವಿಡೆಂಡ್ ಸಾಲದಾಗಿದೆ ಎಂದು ಸಭೆಯಲ್ಲಿ ಅಸಮಾಧಾನದ ಧ್ವನಿ ಕೇಳಿ ಬಂದಿತು.
ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2015-16ನೇ ಸಾಲಿನ 57ನೇ ವಾರ್ಷಿಕ ಮಹಾಸಭೆ ಅಧ್ಯಕ್ಷ ಹೆಚ್.ಸಿ. ಪೊನ್ನಪ್ಪ ಅವರ ಅಧ್ಯಕ್ಷತೆಯಲ್ಲಿ ಗುಂಡುಗುಟ್ಟಿ ಶ್ರೀ ಮಂಜುನಾಥಯ್ಯ ಸಹಕಾರ ಭವನದಲ್ಲಿ ನಡೆಯಿತು.
ಸದಸ್ಯರುಗಳಾದ ಬಿ.ಜಿ. ಜವಾಹರ್ ಕೆ.ಬಿ. ರಾಜಪ್ಪ, ಎಂ.ಎನ್. ಮೊಣ್ಣಪ್ಪ, ಹಾಗೂ ಎಂ.ಎ. ವಸಂತ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಸಂಘ ರೂ. 23,89,399 ಲಾಭಗಳಿಸಿದೆ. ಸಂಘದ ಸದಸ್ಯರುಗಳಿಗೆ ನಿಗದಿಪಡಿಸಿದ ಡಿವಿಡೆಂಡ್ ಶೇ. 12 ಕಡಿಮೆಯಾಗಿದೆ. ಶೇ. 15 ರಷ್ಟು ಡಿವಿಡೆಂಡ್ ನೀಡಬೇಕೆಂದು ಆಗ್ರಹಿಸಿದರು. ಅಧ್ಯಕ್ಷ ಪೊನ್ನಪ್ಪ ಮಾತನಾಡಿ, ಶೇರು ಹಣ ಜಾಸ್ತಿಯಾಗಿದ್ದರಿಂದ ಡಿವಿಡೆಂಡ್ ಇಲಾಖೆಯ ಮಾನದಂಡದ ಪ್ರಕಾರವೇ ನೀಡಬೇಕಾಗಿದೆ ಎಂದು ಉತ್ತರಿಸಿದರು. ಸದಸ್ಯ ಜವಾಹರ್ ಮಾತನಾಡಿ, ಚುನಾವಣೆಗೆ ನಿಂತಾಗ ತಾವು ಶೇ. 20 ರಷ್ಟು ಡಿವಿಡೆಂಡ್ ನೀಡುವದಾಗಿ ಘೋಷಿಸಿದ್ದೀರಿ, ಈಗ ಅದನ್ನು ಪಾಲಿಸಬೇಕು. ಪೊನ್ನಂಪೇಟೆ, ಕುಟ್ಟ ಸಹಕಾರ ಸಂಘದವರು ರೂ. 16 ಲಕ್ಷ ಲಾಭ ಬಂದಿದ್ದರೂ ಶೇ. 20 ರಷ್ಟು ಡಿವಿಡೆಂಡ್ ನೀಡಿದ್ದಾರೆ ಎಂದು ಅವರು ಪಟ್ಟು ಹಿಡಿದರು. ಕೊನೆಗೆ ಅಧ್ಯಕ್ಷರು ನಿರ್ದೇಶಕರೊಂದಿಗೆ ಚರ್ಚಿಸಿ ಶೇ. 1 ರಷ್ಟು ಡಿವಿಡೆಂಡ್ ಹೆಚ್ಚಿಸಿ ಶೇ. 13 ಡಿವಿಡೆಂಡ್ ನೀಡುವದಾಗಿ ಘೋಷಿಸಿದರು.
ಸಂಘದಿಂದ ವಿತರಿಸುತ್ತಿರುವ ರಸಗೊಬ್ಬರ ದರ ಖಾಸಗಿ ಅಂಗಡಿಯಲ್ಲಿ ದೊರಕುವದಕ್ಕಿಂತ ಅಧಿಕವಾಗಿದೆ ಎಂದು ಕೆ.ಡಿ. ರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು. ಸಂಘದಿಂದ ಮದ್ದು ಗುಂಡು ವಿತರಿಸಲು ಆನೇಕ ಬಾರಿ ಸಭೆಯಲ್ಲಿ ಪ್ರಸ್ತಾಪಿಸಿದರೂ ಇನ್ನೂ ಮದ್ದುಗುಂಡು ಲಭ್ಯವಾಗುತ್ತಿಲ್ಲ ಎಂದು ಸದಸ್ಯರು ತಿಳಿಸಿದಾಗ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉತ್ತರಿಸಿ ಸರಕಾರಕ್ಕೆ ಅರ್ಜಿ ಸಲ್ಲಿಸಿದ್ದೇವೆ, ನೂತನ ನಿಯಮಗಳ ಪ್ರಕಾರ ಆನೇಕ ಷರತ್ತು ವಿಧಿಸಲಾಗಿದೆ. ಜಿಲ್ಲಾಧಿಕಾರಿಗಳು ಸಮ್ಮತಿ ನೀಡಿದ್ದಾರೆ. ಮದ್ದುಗುಂಡು ವಿತರಿಸಲು ಪರವಾನಗಿ ಸಿಗಲಿದೆ ಎಂದರು.
ಸಂಘದ ನಿರ್ದೇಶಕ ಎಂ.ಎನ್. ಕೊಮಾರಪ್ಪ ಮಾತನಾಡಿ, ವಾಣಿಜ್ಯ ಸಂಕೀರ್ಣ ನಿರ್ಮಿಸಲು ರೂ. 1 ಕೋಟಿ 50 ಲಕ್ಷ ವೆಚ್ಚವಾಗಿ 1 ಪೈಸೆ ಸಾಲ ತೆಗೆದುಕೊಳ್ಳದೆ ಸಂಘದ ಫಂಡ್‍ನಿಂದಲೇ ಕಟ್ಟಡ ಪೂರ್ಣಗೊಳಿಸಲಾಗಿದೆ. ಕಟ್ಟಡ ಕ್ಷೇಮಾಭಿವೃದ್ಧಿ ನಿಧಿಗೆ ಸದಸ್ಯರುಗಳು ನೆರವು ನೀಡಿದ್ದಾರೆ ಎಂದು ಹೇಳಿದರು.
ಸಂಘದ ಅಧ್ಯಕ್ಷ ಎಂ.ಸಿ. ಪೊನ್ನಪ್ಪ ಅವರು ಚುನಾವಣೆ ಸಂದರ್ಭ ನಾವು ಸಂಘವನ್ನು ಲಾಭದತ್ತ ತಂದು ಡಿವಿಡೆಂಡ್ ಹೆಚ್ಚಿಗೆ ನೀಡಲಾಗುವದೆಂದು ಭರವಸೆ ನೀಡಿದ್ದೇವೆ. ಅದರಂತೆ ಸಂಘವನ್ನು ಲಾಭದತ್ತ ಕೊಂಡೊಯ್ಯುತ್ತಿದ್ದೇವೆ. ಸಂಘದ ಉಳಿವೇ ನಮ್ಮ ಮುಖ್ಯ ಧ್ಯೇಯ ಎಂದು ಹೇಳಿದರು. ಸಂಘದ ಉಪಾಧ್ಯಕ್ಷ ಕೆ.ಆರ್. ಮಂಜುನಾಥ್, ನಿರ್ದೇಶಕರುಗಳಾದ ಕೊಮಾರಪ್ಪ, ಜರ್ಮಿ ಡಿಸೋಜ, ಕೆ.ಎಸ್. ಮಂಜುನಾಥ್, ಎಸ್.ಪಿ. ನಿಂಗಪ್ಪ, ಎಂ.ಎ. ಕುಟ್ಟಪ್ಪ, ದಾಸಂಡ ರಮೇಶ್ ಚಂಗಪ್ಪ, ಡಿ.ಕೆ. ಲೀಲಾ ಮೇದಪ್ಪ, ಡಿ.ಕೆ. ಗಂಗಾಧರ, ಮೇಲ್ವಿಚಾರಕ ನವೀನ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.