ಮಡಿಕೇರಿ, ಜು. 23: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ಶೇ. 35 ರಷ್ಟು ವೇತನ ಪರಿಷ್ಕರಣೆಗೆ ಒತ್ತಾಯಿಸಿ ತಾ. 25 ರಿಂದ (ನಾಳೆಯಿಂದ) ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿದ್ದು, ಈ ಹಿನ್ನೆಲೆಯಲ್ಲಿ ಸರಕಾರಿ ಬಸ್ ಸಂಚಾರ ರಾಜ್ಯವ್ಯಾಪಿ ಸ್ಥಗಿತಗೊಳ್ಳುವದು ಬಹುತೇಕ ಖಚಿತವಾಗಿದೆ.ಸಾರಿಗೆ ನೌಕರರ ಕಾರ್ಮಿಕ ಸಂಘಗಳ ಜಂಟಿ ಸಮಿತಿ ಪ್ರಮುಖರೊಂದಿಗೆ ನಿನ್ನೆ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಿದ್ದು, ಸಭೆ ಸಫಲತೆ ಕಂಡಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಾರಿಗೆ ನಿಗಮದ 1.20 ಲಕ್ಷ ನೌಕರರು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ತವ್ಯ ಬಹಿಷ್ಕರಿಸಲು ತೀರ್ಮಾನಿಸಿದ್ದಾರೆ.

ಸಾರಿಗೆ ಇಲಾಖೆಯ ಅಧಿಕಾರಿಗಳು, ಸಚಿವರು, ನೌಕರರ ಮನವೊಲಿಕೆಗೆ ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದು, ಒಂದು ವೇಳೆ ಪ್ರಯತ್ನ ಫಲ ಕೊಟ್ಟರೆ ಪ್ರಯಾಣಿಕರು ಪರದಾಡುವಂತಿಲ್ಲ. ಪ್ರಯತ್ನ ಫಲ ಕೊಡದಿದ್ದಲ್ಲಿ ಸೋಮವಾರದಿಂದ ಪ್ರಯಾಣಿಕರಿಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ.

ಕೊಡಗು ಜಿಲ್ಲೆಯಲ್ಲೂ ನಿತ್ಯ ಸಾರಿಗೆ ಬಸ್‍ಗಳನ್ನು ನಂಬಿರುವ ಸಾವಿರಾರು ಪ್ರಯಾಣಿಕರಿದ್ದಾರೆ ಕೊಡಗಿನಲ್ಲಿ ದಿನನಿತ್ಯ ವಿದ್ಯಾರ್ಥಿಗಳೂ ಸೇರಿದಂತೆ 25,000 ಮಂದಿ ಪ್ರಯಾಣಿಕರು ಸರಕಾರಿ ಬಸ್‍ಗಳನ್ನು ಅವಲಂಬಿಸಿದ್ದಾರೆ. ದಿನಂಪ್ರತಿ ಕೊಡಗಿನಲ್ಲಿ 35 ಸಾಮಾನ್ಯ ಬಸ್‍ಗಳೂ ಸೇರಿದಂತೆ 1135 ರೂಟ್ ಬಸ್‍ಗಳು ಸಂಚಾರ ಮಾಡುತ್ತವೆ. ಒಂದು ವೇಳೆ ಮುಷ್ಕರದಿಂದ ಸರಕಾರಿ ಬಸ್ ಸಂಚಾರ ಸ್ಥಗಿತಗೊಂಡರೆ ದಿನವೊಂದಕ್ಕೆ ಕೊಡಗಿನಲ್ಲಿ 10 ಲಕ್ಷ ರೂ. ನಷ್ಟ ಸಂಭವಿಸಲಿದೆ ಎಂದು ಮಡಿಕೇರಿ ಡಿಪೋ ವ್ಯವಸ್ಥಾಪಕಿ ಹೆಚ್. ಗೀತಾ ಅವರು ‘ಶಕ್ತಿ’ಗೆ ತಿಳಿಸಿದ್ದಾರೆ. ಮುಷ್ಕರ ಸಂಬಂಧ ಕರಪತ್ರಗಳು ಹಂಚಲ್ಪಡುತ್ತಿದ್ದು, ತಾವೂ ಸೇರಿದಂತೆ ಅಧಿಕಾರಿಗಳು ನೌಕರರ ಮನವೊಲಿಕೆಗೆ ಪ್ರಯತ್ನಿಸುತ್ತಿದ್ದೇವೆ ಎಂದು ಅವರು ಹೇಳಿದರು.

ಖಾಸಗಿ ಬಸ್ ಯಥಾಸ್ಥಿತಿ

ಸರಕಾರಿ ಬಸ್‍ಗಳ ಸಂಚಾರ ಸ್ಥಗಿತಗೊಂಡರೂ ಜಿಲ್ಲೆಯಲ್ಲಿ ಖಾಸಗಿ ಬಸ್‍ಗಳ ಸಂಚಾರ ಯಥಾ ಸ್ಥಿತಿ ಮುಂದುವರೆಯಲಿದೆ. ಖಾಸಗಿ ಬಸ್‍ಗಳನ್ನು ಸಾವಿರಾರು ಪ್ರಯಾಣಿಕರು ಅವಲಂಬಿಸಿದ್ದು, ಸರಕಾರಿ ಬಸ್‍ಗಳ ಮುಷ್ಕರ ಸಂದರ್ಭ ಮಾರ್ಗ ಬದಲಿಸಿ ಯಾವದೇ ಕಾರಣಕ್ಕೂ ಖಾಸಗಿ ಬಸ್‍ಗಳು ಸಂಚರಿಸುವದಿಲ್ಲ. ಬದಲಿಗೆ ದಿನನಿತ್ಯ ಸಂಚರಿಸುವ ಮಾರ್ಗದಲ್ಲೇ ಖಾಸಗಿ ಬಸ್‍ಗಳ ಸಂಚಾರ ಮುಂದುವರೆಯಲಿದೆ ಎಂದು ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ಸ್ಪಷ್ಟಪಡಿಸಿದ್ದಾರೆ.

ಎಸ್ಮಾ ಜಾರಿ..?

ಈ ಎಲ್ಲಾ ಬೆಳವಣಿಗೆಗಳ ನಡುವೆ ಸರಕಾರ ಸಾರಿಗೆ ನಿಗಮದ ನೌಕರರು ಪಟ್ಟು ಸಡಿಲಿಸದೆ ಮುಷ್ಕರಕ್ಕೆ ಮುಂದಾದರೆ ‘ಎಸ್ಮಾ’ ಜಾರಿಮಾಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.