ಕುಶಾಲನಗರ, ನ. 15: ಕುಶಾಲನಗರ ಶ್ರೀ ಗಣಪತಿ ದೇವಾಲಯ ರಥೋತ್ಸವ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ದೊರೆತಿದ್ದು, ಐತಿಹಾಸಿಕ ಪುರಾತನ ಗಣಪತಿ ದೇವಾಲಯದ ರಥೋತ್ಸವ ತಾ. 17 ರಂದು ನಡೆಯಲಿದ್ದು, ರಥೋತ್ಸವದ ಅಂಗವಾಗಿ ತಾ. 22 ರ ತನಕ ಉತ್ಸವ ಹಾಗೂ ಹಲವು ಕಾರ್ಯಕ್ರಮಗಳು ನಡೆಯಲಿವೆ.

ಸೋಮವಾರ ರಾತ್ರಿ ಕಾರ್ತಿಕ ದಟ್ಟೋತ್ಸವ ನಡೆದು ನಂತರ ಪೂಜಾ ಕಾರ್ಯಕ್ರಮಗಳು ಜರುಗಿದವು. ಮಂಗಳವಾರ ಬೆಳಿಗ್ಗೆ ಕುಶಾಲನಗರದ ವಿವಿಧ ದೇವಾಲಯಗಳ ಆಡಳಿತ ಮಂಡಳಿ ಒಕ್ಕೂಟದ ಪದಾಧಿಕಾರಿಗಳು ಗಣಪತಿ ದೇವರಿಗೆ ಫಲಪುಷ್ಪ ಅರ್ಚನೆ ಮಾಡುವ ಮೂಲಕ ಸಾಮೂಹಿಕವಾಗಿ ಪೂಜೆ ಸಲ್ಲಿಸಿದರು.

ಈ ಸಂದರ್ಭ ಮಾತನಾಡಿದ ಗಣಪತಿ ದೇವಾಲಯ ಸೇವಾ ಸಮಿತಿಯ ಕಾರ್ಯದರ್ಶಿ ಎಸ್.ಕೆ. ಶ್ರೀನಿವಾಸ್ ರಾವ್, ಕುಶಾಲನಗರದ ಸರ್ವ ದೇವಾಲಯಗಳ ಆಡಳಿತ ಮಂಡಳಿ ಸಾಮೂಹಿಕವಾಗಿ ಪೂಜೆ ಸಲ್ಲಿಸುವ ಕಾರ್ಯಕ್ರಮ ಹಮ್ಮಿ ಕೊಂಡಿದ್ದು, ಮುಂದಿನ ದಿನಗಳಲ್ಲಿ ಪಟ್ಟಣದ ಎಲ್ಲಾ ದೇವಾಲಯಗಳ ಜಾತ್ರೋತ್ಸವ ಅಥವಾ ವಾರ್ಷಿಕೋತ್ಸವ ಸಂದರ್ಭ ಇದೇ ಸಂಪ್ರದಾಯ ಮುಂದುವರೆಯಲಿದೆ ಎಂದರು.

ಸ್ಥಳೀಯ ಶ್ರೀಮತ್ ಕನ್ನಿಕಾ ಪರಮೇಶ್ವರಿ, ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ, ಶ್ರೀ ಚೌಡೇಶ್ವರಿ ದೇವಾಲಯ, ಶ್ರೀ ಸುಬ್ರಮಣ್ಯ ಸ್ವಾಮಿ ದೇವಾಲಯ, ಶ್ರೀ ಮುತ್ತಪ್ಪ ದೇವಾಲಯ, ಶ್ರೀ ಮಾತೆ ಕಾವೇರಿ ಮಹಾ ಆರತಿ ಬಳಗದ ಸಮಿತಿ ಪ್ರಮುಖರು ಮತ್ತು ವಿವಿಧ ದೇವಾಲಯಗಳ ಅರ್ಚಕರುಗಳು ಗಣಪತಿ ದೇವರಿಗೆ ಪೂಜೆ ಸಲ್ಲಿಸಿದರು.

ದೇವಾಲಯದ ಪ್ರಧಾನ ಅರ್ಚಕ ಆರ್.ಎಸ್. ಕಾಶೀಪತಿ ಮತ್ತು ಅರ್ಚಕರ ತಂಡದಿಂದ ವಿಶೇಷ ಪೂಜೆ ನೆರವೇರಿಸಲಾಯಿತು. ಈ ಸಂದರ್ಭ ದೇವಾಲಯ ಆಡಳಿತ ಮಂಡಳಿ ಒಕ್ಕೂಟದ ಪ್ರಮುಖರಾದ ಕೆ.ಆರ್. ಶಿವಾನಂದನ್, ಕೆ.ಕೆ. ದಿನೇಶ್, ಡಿ.ಆರ್. ಸೋಮಶೇಖರ್, ವಿ.ಆರ್. ಶಿವಶಂಕರ್, ಬಿ.ಎಲ್. ಸತ್ಯನಾರಾಯಣ, ಚಿಕ್ಕೇಗೌಡ, ಪಿ. ಕಾರ್ತೀಶನ್, ಎಂ.ಎನ್. ಚಂದ್ರಮೋಹನ್, ಜಗದೀಶ್, ಬಿ.ಎಸ್. ಲೋಕೇಶ್ ಸಾಗರ್, ಡಿ.ಟಿ. ವಿಜಯೇಂದ್ರ, ಡಿ.ವಿ. ರಾಜೇಶ್, ಹೆಚ್.ಎಂ. ಮಧುಸೂದನ್, ಎಂ.ಎಸ್. ಮೊಗಣ್ಣೇಗೌಡ, ರಾಜು, ಕುಶಲ ಅರ್ಚಕರ ಸಂಘದ ಅಧ್ಯಕ್ಷರಾದ ಪರಮೇಶ್ವರ ಭಟ್, ಕೃಷ್ಣಮೂರ್ತಿ ಭಟ್, ವಿಷ್ಣುಮೂರ್ತಿ ಭಟ್ ಮತ್ತು ಆಡಳಿತ ಮಂಡಳಿಯ ಸದಸ್ಯರು, ಭಕ್ತಾದಿಗಳು ಇದ್ದರು.