ಮಡಿಕೆÉೀರಿ, ಅ.30 : ಕೇರಳದ ಪಟ್ಟಿಕಾಡಿನ ವಿದ್ಯಾಕೇಂದ್ರವಾದ ಜಾಮಿಅ ನೂರಿಯ ಅರಬಿಕ್ ಕಾಲೇಜಿನ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಂಟಿಕೊಪ್ಪದ ಮುಹಮ್ಮದಲಿ ಶಿಹಾಬ್ ತಂಞಳ್ ಜ್ಯೂನಿಯರ್ ಶರೀಅತ್ ಕಾಲೇಜಿನ ವತಿಯಿಂದ ನೆಲ್ಯಹುದಿಕೇರಿಯ ದಾರುಸ್ಸಲಾಂ ಮದ್ರಸದಲ್ಲಿ ನ.1 ರಂದು ಉಮ್ರಾ ಅಧ್ಯಯನ ಶಿಬಿರ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‍ಕೆಎಸ್‍ಎಸ್‍ಎಫ್‍ನ ಪ್ರಧಾನ ಕಾರ್ಯದರ್ಶಿ ಎಂ. ತಮ್ಲಿಕ್ ದಾರಿಮಿ, ಉಮ್ರಾ ಶಿಬಿರದ ಕುರಿತು ಮಾಹಿತಿ ನೀಡಿದರು. ಮುಸಲ್ಮಾನದ ಧನ್ಯತೆಯ ಕೇಂದ್ರವಾಗಿರುವ ಮೆಕ್ಕಾದಲ್ಲಿ ನಿರ್ವಹಿಸುವ ಪುಣ್ಯ ಕರ್ಮ ಉಮ್ರಾವಾಗಿದ್ದು, ಇದರ ಬಗ್ಗೆ ಅಧ್ಯಯನ ಶಿಬಿರದಲ್ಲಿ ಮಾಹಿತಿಯನ್ನು ನೀಡಲಾಗುವದೆಂದರು.

ಖ್ಯಾತ ವಾಗ್ಮಿ ಎಸ್‍ವೈಎಸ್ ಕೇಂದ್ರ ಕಾರ್ಯದರ್ಶಿಗಳಾದ ಅಬ್ದುಸ್ಸಮದ್ ಪೂಕೊಟೂರ್ ಉಮ್ರಾ ತರಗತಿಯನ್ನು ನಡೆಸಿಕೊಡಲಿದ್ದಾರೆ. ಧಾರ್ಮಿಕ ಶಿಕ್ಷಣದೊಂದಿಗೆ ಲೌಕಿಕ ಶಿಕ್ಷಣವನ್ನು ಉತ್ತಮವಾಗಿ ನೀಡುತ್ತಿರುವ ಶರೀಅತ್ ಕಾಲೇಜು ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಸಾಕ್ಷಿಯಾಗಿದೆಯೆಂದು ತಮ್ಲಿಕ್ ದಾರಿಮಿ ತಿಳಿಸಿದರು.

ನ.1 ರಂದು ನಡೆಯುವ ಉಮ್ರಾ ತರಬೇತಿ ಕಾರ್ಯಕ್ರಮದಲ್ಲಿ ಜಿಲ್ಲಾ ಸಮಸ್ತ ಉಲಮಾ ಒಕ್ಕೂಟದ ಅಧ್ಯಕ್ಷರಾದ ಎಂ. ಅಬ್ದುಲ್ ಫೈಝಿ, ಎಂ. ಅಬ್ದುಲ್ ರೆಹಮಾನ್ ಮುಸ್ಲಿಯಾರ್, ವೈ.ಎಂ.ಉಮ್ಮರ್ ಫೈಝಿ, ನೆಲ್ಯಹುದಿಕೇರಿ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಒ.ಎಂ. ಅಬ್ದುಲ್ ಹಾಜಿ. ಕಾರ್ಯದರ್ಶಿ ಗಳಾದ ಎನ್.ಎ. ಮುಹಮ್ಮದ್ ಆಲಿ, ಎ.ಕೆ. ಆಲಿ ಕುಟ್ಟಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆಂದು ತಮ್ಲಿಕ್ ದಾರಿಮಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜೂನಿಯರ್ ಕಾಲೇಜಿನ ಅಧ್ಯಕ್ಷರಾದ ವೈ.ಎಂ. ಉಮ್ಮರ್ ಫೈಝಿ, ಎನ್.ಎನ್.. ಮುಹಮ್ಮದ್ ಇಕ್ಬಾಲ್, ಕೆ.ಎಂ. ರಫೀಕ್, ಹಸನ್ ಕುಂಞ ಹಾಜಿ ಹಾಗೂ ಸಲೀಂ ಉಪಸ್ಥಿತರಿದ್ದರು.