ಮಡಿಕೇರಿ, ಸೆ.16 : ಮನುಕುಲ ಕುಟುಂಬಕ್ಕೆ ವಿಶ್ವ ಮಾನವ ಸಂದೇಶವನ್ನು ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳು ಇಡೀ ಮಾನವ ಜನಾಂಗದ ಗುರು ಎಂದು ಉಪವಿಭಾಗಾಧಿಕಾರಿ ಡಾ. ನಂಜುಂಡೇಗೌಡ ಅವರು ಬಣ್ಣಿಸಿದರು. ಜಿಲ್ಲಾಡಳಿತ, ಜಿ.ಪಂ. ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾರಾಯಣಗುರು ಜಯಂತ್ಯೋತ್ಸವವನ್ನು ಆಚರಿಸುವದರಿಂದ ವ್ಯಕ್ತಿ ಹಾಗೂ ವ್ಯಕ್ತಿಯ ವಿಕಸನಕ್ಕೆ ಮಹತ್ವ ದೊರೆಯುತ್ತದೆ. ನಾರಾಯಣ ಗುರುಗಳು ತಿಳಿಸಿದ ಮಹತ್ವದ ಅಂಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವದು ಉತ್ತಮ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಸರ್ಕಾರ ಅನೇಕ ದಾರ್ಶನಿಕರ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ಅವುಗಳಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜಯಂತ್ಯುತ್ಸವ ಕಾರ್ಯಕ್ರಮವನ್ನು ಮೊದಲ ಬಾರಿಗೆ ಆಚರಿಸುತ್ತಿರುವದು ಉತ್ತಮ ವಿಚಾರ ಎಂದು ಶ್ಲಾಘಿಸಿದರು.

ನಾರಾಯಣ ಗುರುಗಳು ಹುಟ್ಟಿದ್ದು ಕೇರಳದಲ್ಲಿ ಆದರೂ ಅವರ ಸಂದೇಶಗಳು ವಿಶ್ವ ಮಟ್ಟದಲ್ಲಿ ಅಪಾರ ಖ್ಯಾತಿಗಳಿಸಿದೆ. ತತ್ವ, ಪರಂಪರೆ ಮೂಲಕ ಸಮಾಜ ಮುಖಿಯಾಗಿ ದೇಶ-ವಿದೇಶಗಳಿಗೆ ಮಾಹಿತಿ ನೀಡಿ ದೇಶಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ವಿಜಯ ಮಾತನಾಡಿ, ಮತ ಯಾವದಾದರೂ ಪರವಾಗಿಲ್ಲ, ಮನುಷ್ಯನಾಗಿ ಬಾಳು ಎಂದು ಸಮಾಜಕ್ಕೆ ತಿಳಿಸಿದವರು ನಾರಾಯಣ ಗುರುಗಳು. ಅವರ ತತ್ವಗಳನ್ನು ಪಾಲನೆ ಮಾಡುವಂತಾಗಬೇಕು ಎಂದು ತಿಳಿಸಿದರು.

ವೇದಿಕೆಯಲ್ಲಿ ಕೊಡಗು ಜಿಲ್ಲಾ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಬಿ.ವೈ ಆನಂದ ರಘು, ನಾರಾಯಣ ಧರ್ಮ ಪರಿಪಾಲನಾ ಯೋಗಂನ ಅಧ್ಯಕ್ಷ ಕೆ.ಎನ್.ವಾಸು, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಎಲ್.ಎನ್ ಕುಳ್ಳಯ್ಯ ಇದ್ದರು.

ಅತಿಥಿಗಳು ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ರಾಘವೇಂದ್ರ ಪ್ರಸಾದ್ ನೇತೃತ್ವದಲ್ಲಿ ಭಜನೆ ಕಾರ್ಯಕ್ರಮ ನೆರವೇರಿತು.