ಕುಶಾಲನಗರ, ಜು 09: ಸಾಕುನಾಯಿಗಳು ಪುಟ್ಟ ಮಗುವೊಂದರ ಮೇಲೆ ಧಾಳಿ ಮಾಡಿ ತೀವ್ರ ಗಾಯಗೊಳಿಸಿದ ಘಟನೆ ಕುಶಾಲನಗರದಲ್ಲಿ ಶುಕ್ರವಾರ ಸಂಜೆ ನಡೆದಿದೆ. ಕೂಲಿ ಕೆಲಸ ಮಾಡುತ್ತಿರುವ ರಾಯಚೂರು ಮೂಲದ ಸಾಬಯ್ಯ ಮತ್ತು ಹಂಪಮ್ಮ ದಂಪತಿಗಳ 4 ವರ್ಷದ ಪುಟ್ಟ ಹೆಣ್ಣು ಮಗು ಮಲ್ಲಿಕಾ ಎಂಬಾಕೆ ತೀವ್ರ ಗಾಯಗೊಂಡು ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವದಾಗಿ ತಿಳಿದುಬಂದಿದೆ.
ಕುಶಾಲನಗರ ಸಮೀಪದ ಬಸವೇಶ್ವರ ಬಡಾವಣೆಯ ಡೆನ್ನಿ ಎಂಬಾತ 4 ಭಾರೀ ಗಾತ್ರದ ನಾಯಿಗಳನ್ನು ಸಾಕಿದ್ದು, ಈ ನಾಯಿಗಳನ್ನು ವಾಯುವಿಹಾರಕ್ಕೆ ಶುಕ್ರವಾರ ಸಂಜೆ ಕರೆದುಕೊಂಡು ಬರುತ್ತಿದ್ದ ಸಂದರ್ಭ ಗುಂಡೂರಾವ್ ಬಡಾವಣೆ ಬಳಿ ಏಕಾಏಕಿ ಮಗುವಿನ ಮೇಲೆ ಧಾಳಿ ಮಾಡಿದೆ. ಮಗುವಿನ ತಲೆ, ಹೊಟ್ಟೆ, ಕಾಲು ಭಾಗಗಳು ಸಂಪೂರ್ಣ ಹಾನಿಯಾಗಿದ್ದು ಕೂಡಲೇ ಕುಶಾಲನಗರ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಗೆ ಒಳಪಡಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಅಪೊಲೋ ಆಸ್ಪತ್ರೆಗೆ ಸಾಗಿಸಲಾಗಿದೆ.
ಈ ಸಂಬಂಧ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಯಾವದೇ ಕ್ರಮಕೈಗೊಂಡಿಲ್ಲ ಎಂದು ಸ್ಥಳೀಯ ನಾಗರಿಕರು ದೂರಿದ್ದಾರೆ. ಇಂತಹ ಅಪಾಯಕಾರಿ ನಾಯಿಗಳ ಬಗ್ಗೆ ಸ್ಥಳೀಯ ಪಂಚಾಯಿತಿ ಅಧಿಕಾರಿಗಳು ಕ್ರಮಕೈಗೊಳ್ಳುವಂತೆ ನಾಗರಿಕರು ಪತ್ರಿಕೆ ಮೂಲಕ ಮನವಿ ಮಾಡಿದ್ದಾರೆ.