ಮಡಿಕೇರಿ, ಮೇ 31: ನಾಡಿನ ಹಿರಿಯ ಸಾಹಿತಿ, ನಾಡೋಜ ದೇ.ಜವರೇಗೌಡ ಅವರ ನಿಧನಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ವತಿಯಿಂದ ಸಂತಾಪ ವ್ಯಕ್ತಪಡಿಸ ಲಾಯಿತು. ನಗರದ ಕ.ಸಾ.ಪ. ಜಿಲ್ಲಾ ಘಟಕ ಕಚೇರಿಯಲ್ಲಿ ದೇ.ಜ.ಗೌ. ನಿಧನ ಕ್ಕೆ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ಕುವೆಂಪು ಅವರ ಶಿಷ್ಯರಾಗಿದ್ದ ದೇ.ಜವರೇಗೌಡ ಅವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ದೇ. ಜವರೇಗೌಡ ಅವರು ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆಯಲು ಅವಿರತ ಶ್ರಮವಹಿಸಿದ್ದರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮೇಚಿರ ಸುಭಾಷ್ ನಾಣಯ್ಯ ಅವರು ಸ್ಮರಿಸಿದರು. ಕ.ಸಾ.ಪ. ತಾಲೂಕು ಘಟಕದ ಅಧ್ಯಕ್ಷ ಕುಡೆಕಲ್ ಸಂತೋಷ್ ಅವರು ಕನ್ನಡ ನಾಡು ನುಡಿ ಸಾಹಿತ್ಯ ಕ್ಷೇತ್ರಕ್ಕೆ ಹಲವು ಕೊಡುಗೆ ನೀಡಿದ್ದ ದೇ.ಜ.ಗೌಡ ಅವರ ಕನ್ನಡ ಸೇವೆ ಸ್ಮರಣೀಯ ಎಂದು ಹೇಳಿದರು. ಶ್ರದ್ಧಾಂಜಲಿ ಸಭೆಯಲ್ಲಿ ಕ.ಸಾ.ಪ. ಜಿಲ್ಲಾ ಘಟಕದ ರಮೇಶ್, ಕೋಡಿ ಚಂದ್ರಶೇಖರ್, ಕೆ.ಸಿ.ನಂಜುಂಡ ಸ್ವಾಮಿ, ಅಶ್ವತ್ಥ್ ಕುಮಾರ್, ನಾಗರಾಜ ಶೆಟ್ಟಿ, ಗಿರೀಶ್ ಮತ್ತಿತರರು ಇದ್ದರು. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಅವರು ಹಿರಿಯ ಸಾಹಿತಿ ದೇ. ಜವರೇಗೌಡ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ದೇ.ಜವರೇಗೌಡ ಅವರ ಕನ್ನಡ ಸೇವೆ ಸದಾ ಸ್ಮರಣೀಯ ಎಂದು ತಿಳಿಸಿದ್ದಾರೆ.