ಮಡಿಕೇರಿ, ಜು.8 : ಸಿಎನ್‍ಸಿ ಸಂಘಟನೆಯಿಂದ ಕೊಡಗು ಜಿಲ್ಲೆಯಲ್ಲಿ ಅಶಾಂತಿಯ ವಾತಾವರಣ ಮೂಡುತ್ತಿದೆ ಎಂದು ಆರೋಪಿಸಿರುವ ಸಮಾನ ಮನಸ್ಕರ ವೇದಿಕೆ, ಸಂಘನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಅವರನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಪ್ರಮುಖ ಡಿ.ಎಸ್. ನಿರ್ವಾಣಪ್ಪ, ಸಿಎನ್‍ಸಿ ಸಂಘಟನೆ ಕೊಡವರನ್ನು ಮಾತ್ರ ಕೊಡಗಿನವರೆಂದು ಪ್ರತಿಬಿಂಬಿಸುತ್ತಿದ್ದು, 18 ಮೂಲ ನಿವಾಸಿಗಳನ್ನು ಮತ್ತು ಇತರ ಜನಾಂಗದವರನ್ನು ನಿರ್ಲಕ್ಷಿಸುತ್ತಿದೆ. ‘ಕೊಡವ’ರು ಎಂದರೆ ಜಿಲ್ಲೆಯಲ್ಲಿರುವ ಎಲ್ಲರು ಎನ್ನುವದಕ್ಕೆ ಬದಲಾಗಿ ಸಿಎನ್‍ಸಿ ಸಂಘಟನೆ ಕೊಡವ ಸಮೂಹದವರು ಮಾತ್ರ ಕೊಡವರೆಂದು ಪ್ರತಿಬಿಂಬಿಸಿಕೊಂಡು ತಾವು ಪ್ರಭಾವಿಗಳೆಂದು ತೋರಿಸಿಕೊಳ್ಳುವ ಮೂಲಕ ದÀಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ದೇವಟ್ ಪರಂಬು ಎನ್ನುವ ಕಪೋಲ ಕಲ್ಪಿತ ವಿವಾದವನ್ನು ಸೃಷ್ಟಿಸಿ ಜನಾಂಗೀಯ ಘರ್ಷಣೆಗೆ ಎಡೆ ಮಾಡಿಕೊಡುತ್ತಿರುವದು ಖಂಡನೀಯ. ಅರಣ್ಯ ಇಲಾಖೆಯ ಜಾಗದಲ್ಲಿ ಕಲ್ಲಿನ ಸ್ತಂಭವನ್ನು ಸ್ಥಾಪಿಸಿರುವದು ಅಪರಾಧವಾಗಿದೆ ಎಂದು ಆರೋಪಿಸಿದ ನಿರ್ವಾಣಪ್ಪ ಸಂಘಟನೆ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು. ಜನಪರವಾಗಿ ಹೋರಾಟ ನಡೆಸುತ್ತಿರುವ ಎ.ಕೆ. ಸುಬ್ಬಯ್ಯ ಅವರನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿರುವ ಸಿಎನ್‍ಸಿ ಮತ್ತು ಅವರ ಬೆಂಬಲಿಗರನ್ನೆ ರಾಜ್ಯ ಮಾತ್ರವಲ್ಲ ದೇಶದಿಂದಲೇ ಗಡೀಪಾರು ಮಾಡಬೇಕೆಂದು ನಿರ್ವಾಣಪ್ಪ ಒತ್ತಾಯಿಸಿದರು.

ವಕೀಲ ಕೆ.ಆರ್. ವಿದ್ಯಾಧರ್ ಮಾತನಾಡಿ, ಸಿಎನ್‍ಸಿ ಸಂಘಟನೆ ತನ್ನ ನಿಲುವು ಮತ್ತು ಧೋರಣೆಗಳಿಂದ ಕೊಡಗನ್ನು ಹುಚ್ಚಾಸ್ಪತ್ರೆ ಮಾಡಲು ಹೊರಟಿದೆ ಎಂದು ಟೀಕಿಸಿದರು.

ಈ ವಿವಾದಕ್ಕೆ ಸಂಬಂಧಿಸಿದಂತೆ ರಾಜಕಾರಣಿಗಳಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್, ವೀಣಾ ಅಚ್ಚಯ್ಯ, ಸುನಿಲ್ ಸುಬ್ರಮಣಿ, ಮನು ಮುತ್ತಪ್ಪ ಹಾಗೂ ಜಿಲ್ಲೆಯ ಎರಡು ಅಕಾಡೆಮಿಗಳು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಒತ್ತಾಯಿಸಿದರು.

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಪ್ರಮುಖ ಸಿರಿಮನೆ ನಾಗರಾಜ್ ಮಾತನಾಡಿ, ಕೊಡಗಿನ ನ್ಯಾಯಯುತ ಬೇಡಿಕೆಗಳಿಗೆ ನಮ್ಮ ಬೆಂಬಲವಿದೆ. ಆದರೆ, ಹುಚ್ಚಾಟಗಳಿಗೆ ಬೆಂಬಲವಿಲ್ಲವೆಂದು ಸ್ಪಷ್ಟಪಡಿಸಿದರು.

ಟಿಪ್ಪು ಧಾಳಿಯ ಸಂದರ್ಭ ಕೊಡವರನ್ನು ಹೊರತು ಪಡಿಸಿದಂತೆ ಇತರರು ಸಾವನ್ನಪಿದ್ದರೆ ದಾಖಲೆ ನೀಡಿ ಎನ್ನುವ ಹೇಳಿಕೆಯನ್ನು ಖಂಡಿಸಿದ ನಂದಾ ಸುಬ್ಬಯ್ಯ, ಟಿಪ್ಪು ಅವಧಿಯಲ್ಲಿ ಬಾರಿಕೆ, ಕುಯ್ಯಮುಡಿ ಕುಟುಂಬಗಳು ಸೇರಿದಂತೆ ಸಾಕಷ್ಟು ಕೊಡವೇತರ ಸಮುದಾಯಗಳು ಸಂಕಷ್ಟವನ್ನು ಅನುಭವಿಸಿರುವದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಶ್ರೀನಿವಾಸ್, ಹೆಚ್.ಸಿ. ಸಣ್ಣಪ್ಪ ಮೊದಲಾದವರು ಉಪಸ್ಥಿತರಿದ್ದರು.