ಮಡಿಕೇರಿ, ಆ. 17: ವಿವಿಧತೆಯಲ್ಲಿ ಏಕತೆಯ ಗುಣ ಹೊಂದಿರುವದೇ ಭಾರತದ ಪ್ರಬಲ ಶಕ್ತಿಯಾಗಿದ್ದು ಇಂಥಹ ದೇಶದಲ್ಲಿ ಪ್ರತಿಯೋರ್ವರು ನಾಗರಿಕ ಪ್ರಜ್ಞೆಯನ್ನು ಬೆಳೆಸಿಕೊಂಡರೆ ಈ ದೇಶಕ್ಕೆ ಯಾವದೇ ಗಂಭೀರ ಸಮಸ್ಯೆ ಎದುರಾಗದು ಎಂದು ಛೇಂಜ್ ಮೇಕರ್ಸ್ ಆಫ್ ಮೈಸೂರಿನ ಸ್ಥಾಪಕಾಧ್ಯಕ್ಷ ಪಿ.ವಿ. ರಾಮದಾಸ್ ಅಭಿಪ್ರಾಯಪಟ್ಟಿದ್ದಾರೆ.

ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿಸಲಾಗಿದ್ದ ನಾಗರಿಕ ಪ್ರಜ್ಞೆ ಮತ್ತು ಪರಿಸರಸ್ನೇಹಿ ಗಣೇಶ ಕುರಿತ ವಿಚಾರ ಮಂಥನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಪಿ.ವಿ. ರಾಮದಾಸ್, ಸಂಘಜೀವಿಯಾಗಿ ಬದುಕುತ್ತಿರುವ ನಾವುಗಳು ಪರಸ್ಪರ ಅವಲಂಭಿಗಳೇ ಆಗಿದ್ದೇವೆ. ಇಂಥಹ ಪರಿಸ್ಥಿತಿಯಲ್ಲಿ ಕಾಳಜಿ ಎಂಬ ನಾಗರಿಕ ಪ್ರಜ್ಞೆ ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು.

ಬೇರೆಲ್ಲಾ ವಿಚಾರಗಳಿಗೆ ನೀಡಿದ್ದಕ್ಕಿಂತ ಹೆಚ್ಚಿನ ಸಮಯವನ್ನು ನಾವು ಕಾಳಜಿಗೋಸ್ಕರ ನೀಡಬೇಕು. ಸ್ವಂತ ಕಾಳಜಿಯಂತೆ ನಾಗರಿಕ ಕಾಳಜಿ ಹೊಂದದೇ ಇದ್ದಲ್ಲಿ ಮಾಡಿದ್ದೆಲ್ಲಾ ವ್ಯರ್ಥವಾಗುವ ಸಾಧ್ಯತೆಗಳೇ ಹೆಚ್ಚು ಎಂದು ಕಿವಿಮಾತು ಹೇಳಿದ ರಾಮ ದಾಸ್, ಸಾರ್ವಜನಿಕವಾಗಿ ಹೇಗೆ ವರ್ತಿಸಬೇಕು, ನಾಗರಿಕರಾಗಿ ನಮ್ಮ ಕರ್ತವ್ಯ, ಹೊಣೆಗಾರಿಕೆಯಿಂದ ವರ್ತಿಸಿ ಬೇರೆಯವರಿಂದ ಗೌರವಾದಾರಗಳನ್ನು ಹೇಗೆ ಪಡೆಯಬೇಕು ಎಂಬದರ ಅರಿವಿರಬೇಕು. ಪರಸ್ಪರ ಕಾಳಜಿಯಿಂದಾಗಿ ಸಾಮಾಜಿಕ ಕಾಳಜಿ ರೂಪುಗೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಲಿಖಿತ ನಿಯಮದಂತೆ ಪ್ರತಿಯೋರ್ವರಲ್ಲಿಯೂ ನಾಗರಿಕ ಕಾಳಜಿ ಅಭಿವ್ಯಕ್ತಗೊಳ್ಳಬೇಕೆಂದು ಹೇಳಿದ ರಾಮದಾಸ್, ನಮ್ಮಿಂದ ಸಮಾಜ ಏನನ್ನೂ ಯಾವಾಗ ಬಯಸುತ್ತದೆ ಎಂಬ ಬಗ್ಗೆಯೂ ಸೂಕ್ಷ್ಮವಾಗಿ ತಿಳಿದುಕೊಂಡು ಸಮಾಜಕ್ಕೆ ನಮ್ಮ ಕೊಡುಗೆ ನೀಡುವದು ಅಗತ್ಯ ಎಂದರು.

ಸ್ವಚ್ಚತೆ ಬಗ್ಗೆ ಮಕ್ಕಳಿಗೆ ತಿಳಿಹೇಳಬೇಕು. ರಸ್ತೆ, ಬೀದಿ, ಸಾರ್ವಜನಿಕ ಸ್ಥಳಗಳನ್ನು ಸ್ವಚ್ವವಾಗಿಡಬೇಕಾದದ್ದು ದೇಶದ ಪ್ರಜೆಯಾಗಿ ನಮ್ಮ ಹೊಣೆಗಾರಿಕೆ ಎಂಬದು ಚಿಕ್ಕಂದಿನಲ್ಲಿಯೇ ಅರಿವಾದರೆ ಮುಂದೆ ಅದನ್ನೇ ಅವರು ಪರಿಪಾಲಿಸುತ್ತಾರೆ. ಸರದಿಯಲ್ಲಿ ತಾಳ್ಮೆಯಿಂದ ವರ್ತಿಸುವದು, ಸಮಯ ಪಾಲನೆ ಮಾಡುವದು, ಹಿರಿಯ ನಾಗರಿಕರಿಗೆ ನೆರವು ನೀಡುವಿಕೆ, ಪ್ರತಿಯೊಬ್ಬರನ್ನೂ ಗೌರವಿಸುವದು ಕಾಳಜಿಯ ಪ್ರಮುಖ ಅಂಶ. ಹಾಗೆಯೇ, ಇನ್ನೊಬ್ಬರ ಬಗ್ಗೆ ನಾವೇ ನಿರ್ಧಾರ ತೆಗೆದುಕೊಂಡು ಬೇಕಾಬಿಟ್ಟಿ ಮಾತನಾಡುವದು ಸರಿಯಲ್ಲ ಎಂದೂ ರಾಮದಾಸ್ ಹೇಳಿದರು.

ದೇಶದಲ್ಲಿ ಭ್ರಷ್ಟಾಚಾರವನ್ನು ಪ್ರಬಲವಾಗಿ ವಿರೋಧಿಸಬೇಕು. ನಮ್ಮಿಂದಲೇ ಭ್ರಷ್ಟಾಚಾರಕ್ಕೆ ಅವಕಾಶ ಆಗಬಾರದು. ದೇಶದ ಬಗ್ಗೆ ಕೀಳಾಗಿ ಮಾತನಾಡದೇ ಸದಾ ಗೌರವ ಭಾವನೆಯಿಂದ ಮಾತನಾಡುವದು ಕೂಡ ನಾಗರಿಕ ಪ್ರಜ್ಞೆಯಾಗಿದೆ ಎಂದು ಹೇಳಿದ ರಾಮದಾಸ್, ರೋಟರಿಯಂಥಹ ಸಾಮಾಜಿಕ ಸಂಸ್ಥೆಗಳು ಅಗತ್ಯವುಳ್ಳವರಿಗೆ ಪುಸ್ತಕ, ಬಟ್ಟೆ ದಾನ ನೀಡಬೇಕು, ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕು. ಸಮಸ್ಯೆಗಳ ಪರಿಹಾರಕ್ಕೆ ಕ್ರಿಯಾಯೋಜನೆ ರೂಪಿಸಬೇಕು. ಆರ್.ಟಿ.ಐ.ನ ಸಮರ್ಪಕ ಬಳಕೆಯಾಗಬೇಕು, ನಿವೃತ್ತ ಅಧಿಕಾರಿಗಳು, ಸಿಬ್ಬಂದಿಗಳ ಮಾರ್ಗದರ್ಶನವನ್ನು ಬಳಸಿಕೊಂಡು ಹಿರಿಯ ನಾಗರಿಕರ ಮಾರ್ಗದರ್ಶನವನ್ನೂ ಪಡೆದುಕೊಳ್ಳುವ ಮೂಲಕ ಯೋಗ್ಯ ಸಮಾಜ ನಿರ್ಮಾಣಕ್ಕೆ ಮುಂದಡಿ ಇರಿಸಬೇಕೆಂದು ರಾಮ ದಾಸ್ ಕರೆ ನೀಡಿದರು.

ಮಕ್ಕಳು ಸಮಾಜದ ಬದಲಾವಣೆಯ ರಾಯಭಾರಿಗಳಾಗಿದ್ದಾರೆ. ಹೀಗಾಗಿ ಶಾಲೆಗಳಲ್ಲಿ ಪರಿಸರ ಸ್ನೇಹಿ ಸಂಘಗಳನ್ನು ಸ್ಥಾಪಿಸಿ, ಮಕ್ಕಳಿಗೆ ಪರಿಸರ ಪ್ರಜ್ಞೆ, ನಾಗರಿಕ ಪ್ರಜ್ಞೆ, ಸಾಮಾಜಿಕ ಕಾಳಜಿ ಕುರಿತು ತಿಳುವಳಿಕೆ ನೀಡಿ ಎಂದೂ ರಾಮದಾಸ್ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್‍ನ ಮುಂದಿನ ಸಾಲಿನ ನಿಯೋಜಿತ ಗವರ್ನರ್ ಮಾತಂಡ ಸುರೇಶ್ ಚಂಗಪ್ಪ, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಕಾರ್ಯದರ್ಶಿ ಡಾ.ನವೀನ್, ಮಡಿಕೇರಿ ರೋಟರಿ ಕ್ಲಬ್ ಅಧ್ಯಕ್ಷ ಡಾ.ಮೋಹನ್ ಅಪ್ಪಾಜಿ, ಕಾರ್ಯದರ್ಶಿ ಸಲೀಹಾ ಪಾಟ್ಕರ್ ಸೇರಿದಂತೆ ರೋಟರಿ ಕ್ಲಬ್ ಸದಸ್ಯರು ಪಾಲ್ಗೊಂಡಿದ್ದರು.