ಗೋಣಿಕೊಪ್ಪಲು, ಜ. 29: ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಪ್ರಾರಂಭಿಕ ಹಂತದಲ್ಲಿ ವಿಸ್ತೀರ್ಣ ಕಡಿಮೆ ಇದ್ದು, ಈ ಹಿಂದೆ ಮೂರು ದಿನಗಳ ಕಾಲ ನಾಗರಹೊಳೆಯಲ್ಲಿ ವಾಸ್ತವ್ಯಹೂಡಿದ್ದ ಗಿಡಮೂಲಿಕಾ ತಜ್ಞರೊಬ್ಬರು ಸುಮಾರು 735 ಔಷಧಿ ಸಸ್ಯವನ್ನು ಸುಮಾರು 250 ಚ.ಕಿ.ಮೀ.ಪ್ರದೇಶದಲ್ಲಿ ಪತ್ತೆ ಹಚ್ಚಿದ್ದರು. ಇದೀಗ ನಾಗರಹೊಳೆ ರಾಷ್ಟ್ರೀಯ ಉದ್ಯಾನ ಸುಮಾರು 643 ಚ.ಕಿ.ಮೀ. ವಿಸ್ತೀರ್ಣವಿದ್ದು ಇದೊಂದು ಅಮೂಲ್ಯ ಗಿಡಮೂಲಿಕೆಗಳ ಭಂಡಾರವಾಗಿದೆ ಎಂದು ವೈಲ್ಡ್ ಲೈಫ್ ಫಸ್ಟ್ ಅಧ್ಯಕ್ಷ ಕೆ.ಎಂ. ಚಿಣ್ಣಪ್ಪ ಅವರು ಆಯುರ್ವೇದ ವೈದ್ಯರ ತಂಡಕ್ಕೆ ವಿವರಿಸಿದರು.
ಬೆಂಗಳೂರು ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾ ವಿದ್ಯಾಲಯದ ಸ್ನಾತಕೋತ್ತರ ವಿಭಾಗದ ಸುಮಾರು 20 ಮಂದಿ ವೈದ್ಯರ ತಂಡ ಇದೇ ಪ್ರಥಮ ಬಾರಿಗೆ ಅಭಯಾರಣ್ಯದ ವಿಸ್ಮಯವನ್ನು ಕಣ್ಣಾರೆ ಕಂಡು ದಾಖಲೀಕರಣ ಮಾಡಿಕೊಳ್ಳಲು ನಾಗರಹೊಳೆ ಪ್ರಕೃತಿ ಶಿಬಿರದಲ್ಲಿ ಪಾಲ್ಗೊಂಡಿದ್ದು, ವನ್ಯಜೀವಿ ಹಾಗೂ ಅರಣ್ಯದ ಬಗ್ಗೆ ವನ್ಯಪ್ರೇಮಿ ಚಿಣ್ಣಪ್ಪ ಅವರಿಂದ ಅರಣ್ಯ ಪಾಠ ಹೇಳಿಸಿಕೊಂಡರು.
ನಾಗರಹೊಳೆ ಅಭಯಾರಣ್ಯ ನಿರಂತರ ಮಾನವ ಪ್ರೇರಿತ ಕಾಡ್ಗಿಚ್ಚಿಗೆ ತುತ್ತಾಗುತ್ತಿದ್ದು, ಅಮೂಲ್ಯ ಗಿಡ ಮೂಲಿಕೆಗಳು, ನೆಲಮಟ್ಟದಲ್ಲಿ ಗೂಡುಕಟ್ಟಿ ವಾಸಿಸುವ ಪ್ರಾಣಿ-ಪಕ್ಷಿ ಸಂಕುಲಗಳು, ಆನೆಗಳಿಗೆ ವೈದ್ಯರಂತೆ ಸೇವೆ ಸಲ್ಲಿಸುವ ಜೇಡಗಳು, ಕಾಡನ್ನು ಉಳಿಸಲು ಪ್ರಮುಖ ಪಾತ್ರ ನಿರ್ವಹಿಸುವ ಕ್ರಿಮಿ ಕೀಟಗಳು, ಉರಗ, ಮೊಲ ಇತ್ಯಾದಿ ಪ್ರಾಣಿಗಳ ಜೀವಗಳಿಗೆ ಆಧುನಿಕ ಭಸ್ಮಾಸುರರು ಕಂಟಕರಾಗಿದ್ದಾರೆ ಎಂದು ಚಿಣ್ಣಪ್ಪ ವಿಷಾದಿಸಿದರು. ತಮಗೆ ತಿಳಿದ ವಿವಿಧ ವನಸ್ಪತಿಗಳ ಮಹತ್ವವನ್ನು ಶಿಬಿರಾರ್ಥಿಗಳಿಗೆ ಅವರು ವಿವರಿಸಿದರು.
ಮೈಸೂರು ಸರ್ಕಾರಿ ಆಯುರ್ವೇದ ಕಾಲೇಜಿನ ನಿವೃತ್ತ ಪ್ರಾಂಶುಪಾಲ, ದೃವ್ಯಗುಣ ತಜ್ಞ ಡಾ. ಸತ್ಯನಾರಾಯಣ ಭಟ್ ಅವರು ಹಲವು ಔಷಧಿಯುಕ್ತ ಗಿಡ-ಮರಗಳ ಪರಿಚಯ ಮಾಡಿಕೊಟ್ಟರಲ್ಲದೆ, ವಿನಾಶದ ಅಂಚಿನಲ್ಲಿರುವ ಔಷಧಿ ಸಸ್ಯಗಳನ್ನು ಉಳಿಸಿ-ಬೆಳೆಸುವ ಹೊಣೆ ಎಲ್ಲರ ಮೇಲಿದೆ ಎಂದು ಹೇಳಿದರು.
ಇದೇ ಸಂದರ್ಭ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸಂಕೇತ್ಪೂವಯ್ಯ ಹಾಗೂ ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ ಅವರು ಕೆ.ಎಂ. ಚಿಣ್ಣಪ್ಪ ಅವರ ಪ್ರಕೃತಿ ಶಿಬಿರದಲ್ಲಿ ಪಾಲ್ಗೊಂಡು ಜಿಲ್ಲೆಯ ಜೀವರಾಶಿಗಳ ಸಂರಕ್ಷಣೆ ಕುರಿತು ಕಿರುಪರಿಚಯ ಮಾಡಿಕೊಂಡರು. ವಿನಾಶದ ಅಂಚಿನಲ್ಲಿರುವ ಕಾಡು ಮಾವು ಹಾಗೂ ಕುಳಿರ್ಮಾವು ಮರಗಳ ಬಗ್ಗೆ ಚರ್ಚೆ ನಡೆಸಿದರು. 1985 ರಿಂದಲೂ ನಾಗರಹೊಳೆ ಅಭಯಾರಣ್ಯವನ್ನು ವೀಕ್ಷಣೆ ಮಾಡುತ್ತಾ ಬಂದಿದ್ದು, ಅಭಯಾರಣ್ಯವನ್ನು ಉಳಿಸಲು ಚಿಣ್ಣಪ್ಪ ಅವರು ನಡೆಸಿದ ಹೋರಾಟ, ಅನುಭವದ ಸಂದೇಶ ಎಲ್ಲರಿಗೂ ಸಿಗುವಂತಾಗಬೇಕೆಂದು ಸಂಕೇತ್ ಪೂವಯ್ಯ ಹಾಗೂ ಬೋಪಣ್ಣ ಅಭಿಪ್ರಾಯಪಟ್ಟರು. ಪ್ರಕೃತಿ ನಡಿಗೆಯ ನಂತರ ವೈದ್ಯರ ತಂಡಕ್ಕೆ ಸ್ಲೈಡ್ ಶೋ ಮೂಲಕ ಮಾಹಿತಿ ನೀಡಲಾಯಿತು. ಅಪರಾಹ್ನ 3 ಗಂಟೆಯ ನಂತರ ಸಫಾರಿ ಸಂದರ್ಭ ಕಡವೆ, ಗಂಡು-ಹೆಣ್ಣು ನವಿಲುಗಳ ಗುಂಪು, ಜಿಂಕೆ, ರಣಹದ್ದುಗಳು, ಕಾಡು ಹಂದಿ, ಕಾಡುಕೋಣ, ಕಾಡಾನೆ, ಕೆಂದಳಿಲು ಮುಂತಾದ ವನ್ಯಪ್ರಾಣಿಗಳ ವೀಕ್ಷಣೆ ಮಾಡಿದರು.
ಕಾರ್ಯಕ್ರಮ ಸಂಯೋಜಕ ಟಿ.ಎಲ್. ಶ್ರೀನಿವಾಸ್, ಸ್ಥಳೀಯರಾದ ಸುಮನ್, ಡಾ. ಮದನ್, ಡಾ. ಟಿ. ಚೈತ್ರ, ಡಾ. ವಿಜಯಲಕ್ಷ್ಮಿ, ಡಾ. ಸುಜಿತ್ ಪ್ರಕಾಶ್ ರೆಡ್ಡಿ, ಡಾ. ಅಭಿಜ್ಞಾ ನರಸಿಂಹನ್, ವೈದ್ಯರುಗಳಾದ ಆಶ್ರಿತಾ ಶ್ರೀಕುಮಾರ್, ದೀಪಿಕಾ ಎನ್, ಜಿ.ಕೆ. ಚೈತ್ರ, ಶಿಲ್ಪಾ, ಅಮೂಲ್ಯ ಕಣ್ಣನ್, ಟಿ.ಎನ್. ಪಲ್ಲವಿ, ಜಿ. ಚೈತ್ರ, ನೇಹಾ ಪಾಂಡೆ, ಕೀರ್ತಿ ದೇಸಾಯಿ, ಅಶ್ವಿನಿ, ಸೈದಾ ನಿಕಟ್ ನೌಸೀನ್, ಶಾರದಾ, ಆದಿಶ್ರೀ ಭಟ್, ಪ್ರಿಯಾಂಕ ಕಡಾಡಿ, ಸವಿತಾ ಬಾಳಗೌಡ ಸುಟಗಟ್ಟಿ ಮುಂತಾದವರು ಪಾಲ್ಗೊಂಡಿದ್ದರು.
ರಾತ್ರಿ ಮಾಕುಟ್ಟದಲ್ಲಿ ವಾಸ್ತವ್ಯ ಹೂಡಿದ ವೈದ್ಯರ ತಂಡ ಅಲ್ಲಿನ ಗಿರಿಜನ ಆರೋಗ್ಯ ತಪಾಸಣೆ ಅಮೂಲ್ಯ ಗಿಡಮೂಲಿಕೆಗಳ ಕುರಿತು ಮಾಹಿತಿ ಸಂಗ್ರಹಿಸಿ ಕೇರಳದ ಇರಿಟ್ಟಿ ಸಮೀಪ ಪುರಾತನ ಕಲರಿ ವಿದ್ಯೆ (ಮಾರ್ಷಲ್ ಆಟ್ರ್ಸ್) ವೀಕ್ಷಣೆ ಮಾಡಿದರು.