ನಾಪೋಕ್ಲು, ಆ. 9: ಇಲ್ಲಿನ ಸುತ್ತಮುತ್ತಲ ಗ್ರಾಮಗಳಲ್ಲಿ ನಾಟಿ ಕಾರ್ಯ ಬಿರುಸುಗೊಂಡಿದ್ದು ರೈತರು ಕಾರ್ಯನಿರತರಾಗಿದ್ದಾರೆ. ಸಮೀಪದ ನರಿಯಂದಡ ಗ್ರಾಮದಲ್ಲಿ ತೋಟಂಬೈಲ್ ಕುಮಾರ್ ಅವರ ಗದ್ದೆಯಲ್ಲಿ ರೈತರು ಪರಸ್ಪರ ಸಹಕಾರ ತತ್ವದಲ್ಲಿ ನಾಟಿ ಮಾಡುತ್ತಿರುವ ದೃಶ್ಯ ಕಂಡುಬಂತು. ಸುಮಾರು ಇಪ್ಪತೈದಕ್ಕೂ ಅಧಿಕ ಮಂದಿ ನಾಟಿ ಕೆಲಸದಲ್ಲಿ ನಿರತರಾಗಿದ್ದರು. ಬಿಟ್ಟು ಬಿಟ್ಟು ಮಳೆ ಸುರಿಯುತ್ತಿರುವದರಿಂದ ಗದ್ದೆಗಳಲ್ಲಿ ನೀರಾಗಿದ್ದು, ನಾಟಿ ಕೆಲಸ ಬಿರುಸುಗೊಂಡಿದೆ. ಒಂದೆಡೆ ಕಾರ್ಮಿಕರ ಕೊರತೆಯಿಂದ ಗದ್ದೆ ಕೆಲಸಕ್ಕೆ ರೈತರು ವಿದಾಯ ಹೇಳುತ್ತಿದ್ದರೆ, ಮತ್ತೊಂದೆಡೆ ರೈತರು ಒಟ್ಟುಗೂಡಿ ನಾಟಿ ಪೂರ್ಣ ಗೊಳಿಸುತ್ತಿರುವದು ವಿಶೇಷವಾಗಿದೆ.