ಸೋಮವಾರಪೇಟೆ,ಜ.25: ತೆರಿಗೆ ಕಟ್ಟದ ನಯವಂಚಕರ ಬೃಹತ್ ಸಮುದಾಯ ದೇಶದ ಅಭಿವೃದ್ಧಿಗೆ ಹಿನ್ನಡೆಯನ್ನುಂಟು ಮಾಡುತ್ತಿದೆ. ಆ ಕಾರಣದಿಂದಾಗಿಯೇ ನೋಟ್ ಬ್ಯಾನ್ ಆದರೂ ಸಹ ಅಕ್ರಮ ಹಣ ಸಂಗ್ರಹ ದಂಧೆ ಮುಂದುವರೆದಿದೆ ಎಂದು ಚಿತ್ರದುರ್ಗ ಬೃಹನ್ಮಠದ ಪೀಠಾಧ್ಯಕ್ಷರಾದ ಡಾ. ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.ಸ್ವಾಮಿ ವಿವೇಕಾನಂದ ಜಯಂತ್ಯೋತ್ಸವ ಸಮಿತಿ ಆಶ್ರಯದಲ್ಲಿ ಪಟ್ಟಣದ ಮಾನಸ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸ್ವಾಮಿ ವಿವೇಕಾನಂದರ 154ನೇ ಜನ್ಮದಿನಾಚರಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿಯವರು ಈ ದೇಶದಲ್ಲಿ ಕಾನೂನು ಕಠಿಣಗೊಳಿಸಿದರೂ ಸಹ ತೆರಿಗೆ ವಂಚಕರು ಕಾನೂನಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದಲೇ ದೇಶದಲ್ಲಿ ಕಪ್ಪು, ಬಿಳಿ ವ್ಯವಹಾರದ ಪ್ರಯತ್ನಗಳು ನಡೆಯುತ್ತಿವೆ ಎಂದರು.

ಪ್ರತಿಯೊಬ್ಬರು ತಮ್ಮ ಜವಾಬ್ಧಾರಿ ಅರಿಯಬೇಕು, ಆಲಸ್ಯ-ಅಜ್ಞಾನ-ಮೂರ್ಖತನ ಬದುಕನ್ನು ಕಮರಿಸುತ್ತವೆ. ಇವುಗಳಿಗೆ ಯಾರೂ ಒಳಗಾಗಬಾರದು. ಪ್ರಜ್ಞಾಹೀನ ಬದುಕಿನಿಂದ ಸಮಾಜಕ್ಕೆ ಲಾಭವಿಲ್ಲ. ದೇಶಕ್ಕೆ ಜಾಗೃತ ಸಮುದಾಯದ ಅಗತ್ಯವಿದೆ. ವಿದ್ಯಾರ್ಥಿಗಳು ಕಲಿಕೆಯ ಆಸಕ್ತಿಯನ್ನು ಜೀವಂತವಾಗಿಟ್ಟುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಬೋಧಸ್ವರೂಪಾನಂದ ಸ್ವಾಮೀಜಿ ಮಾತನಾಡಿ, ಸಮಾಜದ ಉನ್ನತಿಗಾಗಿ ಶ್ರಮಿಸಿದ ಮಹಾನ್ ಚೇತನ ಸ್ವಾಮಿ ವಿವೇಕಾನಂದರು ವೇದಾಂತ ತತ್ವಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಪ್ರಯತ್ನಿಸಿದವರು ಎಂದು ಅಭಿಪ್ರಾಯಿಸಿದರಲ್ಲದೆ, ಪ್ರಸ್ತುತ ಚಾರಿತ್ರ್ಯವಂತ ವ್ಯಕ್ತಿತ್ವಗಳು ನಿರ್ಮಾಣವಾಗಬೇಕಿದೆ. ಶಾಲಾ ಕಾಲೇಜುಗಳಲ್ಲಿ ನೈತಿಕ ಶಿಕ್ಷಣ ಕಲಿಸಲು ಆಡಳಿತ ನಡೆಸುವ ಸರ್ಕಾರಗಳು ಗಮನಹರಿಸಬೇಕಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು, ಸ್ವಾಮಿ ವಿವೇಕಾನಂದ ಅವರು ಯುವ ಜನಾಂಗಕ್ಕೆ ಸ್ಪೂರ್ತಿಯ ಚಿಲುಮೆಯಾಗಿದ್ದು, ಅವರ ಆಶಯಗಳನ್ನು ಈಡೇರಿಸುವ ಜವಾಬ್ದಾರಿ ಯುವ ಜನಾಂಗದ ಮೇಲಿದೆ ಎಂದರು.

ಕೇಂದ್ರ ಸರ್ಕಾರ ವಿವೇಕಾನಂದರ ಜನ್ಮದಿನವನ್ನು ಯುವ ದಿನವನ್ನಾಗಿ ಆಚರಿಸಲು ಮುಂದಾಗಿದ್ದು, ನಮ್ಮ ಸರ್ಕಾರವಿದ್ದ ಸಂದರ್ಭ ಜಿಲ್ಲಾ ಹಾಗೂ ತಾಲೂಕು ಮಟ್ಟದ ಆಚರಣೆಗೆ ರೂ. 25 ಕೋಟಿ ಅನುದಾನ ಮೀಸಲಿಟ್ಟಿತ್ತು. ಈಗಿನ ಸರ್ಕಾರವೂ ಸಹ ಯುವಜನರ ಸಬಲೀಕರಣಕ್ಕೆ ಯೋಜನೆ ರೂಪಿಸಬೇಕಿದೆ ಎಂದರು.

ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್‍ನ ಜಿಲ್ಲಾ ಸಂಚಾಲಕ ಡಾ. ಕೆ.ಎನ್. ಚಂದ್ರಶೇಖರ್ ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ವಾಮಿ ವಿವೇಕಾನಂದ ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷ ಬಿ.ಎಸ್. ಸದಾನಂದ್ ವಹಿಸಿದ್ದರು. ವೇದಿಕೆಯಲ್ಲಿ ಸಮಿತಿಯ ತಾಲೂಕು ಕಾರ್ಯದರ್ಶಿ ಎಸ್. ಮಹೇಶ್, ಖಜಾಂಚಿ ಮೃತ್ಯುಂಜಯ ಉಪಸ್ಥಿತರಿದ್ದರು.

ವಿವೇಕಾನಂದ ಜಯಂತಿ ಅಂಗವಾಗಿ ಸೋಮವಾರಪೇಟೆ ಭಾಗದ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಕುರಿತಾದ ಛದ್ಮವೇಷ ಸ್ಪರ್ಧೆ, ಚಿತ್ರಕಲೆ ಹಾಗೂ ಭಾಷಣ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಇದಕ್ಕೂ ಮುನ್ನ ಇಲ್ಲಿನ ವಿವೇಕಾನಂದ ಪ್ರತಿಮೆಗೆ ಪ್ರಮುಖರು ಮಾಲಾರ್ಪಣೆ ಮಾಡಿದರು. ನಂತರ ಶಾಲಾ ಕಾಲೇಜು ವಿದ್ಯಾರ್ಥಿಗಳು, ರೋಟರಿ, ಕರ್ನಾಟಕ ರಕ್ಷಣಾ ವೇದಿಕೆ, ನಿವೃತ್ತ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳನ್ನು ಒಳಗೊಂಡಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು.