ವೀರಾಜಪೇಟೆ, ಜ. 28: ಕೊಡಗು ಜಿಲ್ಲಾ ಪಂಚಾಯಿತಿಗೆ ಸೇರಿದ ಅಂಬಾಸಿಡರ್ ಕಾರು (ಕೆ.ಎ12ಜಿ291) ಚಾಲಕನ ಅಜಾಗರೂಕತೆಯಿಂದ ಬೇತ್ರಿ ಕಾವೇರಿ ಹೊಳೆಗೆ ಮಗುಚಿ ಬದ್ದ ಘಟನೆ ಇಂದು ಬೆಳಿಗ್ಗೆ 7.20ರ ಸಮಯದಲ್ಲಿ ನಡೆದಿದೆ. ಮಡಿಕೇರಿಯಿಂದ ವೀರಾಜಪೇಟೆ ಕಡೆಗೆ ತೆರಳುತ್ತಿದ್ದ ಸಂದರ್ಭ ಬೇತ್ರಿ ತಿರುವಿನಲ್ಲಿ ಹೊಳೆಗೆ ಹಾಕಲಾಗಿದ್ದ ಕಬ್ಬಿಣದ ಕಂಬಿಯನ್ನು ಬೇಧಿಸಿಕೊಂಡು 40 ಅಡಿ ಹೊಳೆಗೆ ಬಿದ್ದಿದೆ. ಚಾಲಕ ಟಿ.ಪಿ. ಭುವನೇಶ್ ದೇಹದ ಬಲಭಾಗಕ್ಕೆ ಗಾಯಗಳಾಗಿದ್ದು ಬಲಗೈ ಮುರಿದಿದೆ. ಘಟನೆ ನಡೆದ ತಕ್ಷಣ ಬೇತ್ರಿಯ ಕಂಬಿರಂಡ ರಾಜೇಶ್, ಬಷೀರ, ಸಲಾಂ ಗಾಯಾಳುವನ್ನು ಹೊಳೆಯಿಂದ ಮೇಲೆತ್ತಿ ಮಡಿಕೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾರು ಹೊಳೆಗೆ ಬೀಳುವ ಸಂದÀರ್ಭ ಚಾಮರಾಜನಗರದ ಕೂಲಿ ಕಾರ್ಮಿಕ ಸಿದ್ದಶೆಟ್ಟಿ ಎಂಬವರು ನಿತ್ಯಕರ್ಮವನ್ನು ಮುಗಿಸುತ್ತಿದ್ದು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಮೂರ್ನಾಡು ಉಪಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಳುಗಳನ್ನು ತೋಟಕ್ಕೆ ಕಳುಹಿಸಲು ಲೈನ್ ಮನೆಗೆ ಬಂದ ಸಂದರ್ಭ ತಿರುವಿನಲ್ಲಿ ಅಂಬಾಸಿಡರ್ ಕಾರು ವೇಗವಾಗಿ ಬಂದು ಬ್ರೇಕ್ ಹಾಕಿದ್ದಾರೆ. ನಿಯಂತ್ರಣಕ್ಕೆ ಸಿಗದೆ ಕಬ್ಬಿಣದ ಸೇತುವೆಯನ್ನು ಮುರಿದು ಹಾಕಿ ಹೊಳೆಯೊಳಗೆ ಬಿದ್ದಿದೆ. ನೀರು ಕಡಿಮೆ ಇದ್ದ ಕಾರಣ ಡ್ರೈವರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ತಿರುವಿನಲ್ಲಿ ಬಹುತೇಕ ಅಪಘಾತಗಳು ನಡೆಯುತ್ತಿರುತ್ತವೆ.