ಸಿದ್ದಾಪುರ, ಜು. 26: ನಡುರಾತ್ರಿಯಲ್ಲಿ ಸಿದ್ದಾಪುರ ಪಟ್ಟಣದಲ್ಲಿ ಕಾಡಾನೆ ಪ್ರತ್ಯಕ್ಷಗೊಂಡಿದ್ದು, ಅಂಗಡಿಯೊಂದರ ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ.

ಪಟ್ಟಣದ ವೀರಾಜಪೇಟೆ ರಸ್ತೆಯ ಸಂತ ಜೋಸೇಫÀÀರ ಚರ್ಚ್‍ನ ಕಡೆಯಿಂದ ವೀರಾಜಪೇಟೆ ರಸ್ತೆಯ ಕಡೆಗೆ ಒಂಟಿ ಸಲಗವೊಂದು ನಡುರಾತ್ರಿಯಲ್ಲಿ ರಾಜಾರೋಷದಿಂದ ನಡೆದಾಡಿದ್ದು, ಸ್ಥಳೀಯ ರಿಯಾ ಸೆರಾಮಿಕ್ಸ್ ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ. ವೀರಾಜಪೇಟೆ ರಸ್ತೆಯ ಫ್ರಾನ್ಸಿಸ್ ಎಂಬವರಿಗೆ ಸೇರಿದ ಜಾಗದಲ್ಲಿ ಕಾಡಾನೆ ಹೆಜ್ಜೆ ಹಾಗೂ ಲದ್ದಿ ಪ್ರತ್ಯಕ್ಷವಾಗಿದ್ದು, ವಿಷಯ ತಿಳಿದು ಸಮೀಪದ ರಿಯಾ ಸೆರಾಮಿಕ್ಸ್ ಅಂಗಡಿಯ ಸಿಸಿ ಕ್ಯಾಮೆರಾ ಪರಿಶೀಲಿ ಸಿದಾಗ ಕಾಡಾನೆ ರಾಜಾರೋಷವಾಗಿ ನಡೆದಾಡುವ ದೃಶ್ಯ ಸೆರೆಯಾಗಿದೆ. ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಕಾಡಾನೆ ಪ್ರತ್ಯಕ್ಷ ವಾಗುತ್ತಿದ್ದು, ಜನ-ಜಂಗುಳಿಯಿಂದ ಕೂಡಿದ ಪಟ್ಟಣದಲ್ಲೇ ಕಾಡಾನೆ ಕಾಣಿಸಿರುವದು ಪಟ್ಟಣದ ಜನತೆಯಲ್ಲಿ ಆತಂಕ ಮೂಡಿಸಿದೆ.