ಮಡಿಕೇರಿ, ಜು. 8: ನಗರದ ಜನರಿಗೆ ಮೂಲಭೂತ ಸೌಲಭ್ಯಗಳನ್ನು ನೀಡಲು ಅಸಮರ್ಥರಾಗಿರುವ ನಗರಸಭಾ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಪೀಪಲ್ಸ್ ಮೂಮೆಂಟ್ ಫಾರ್ ಹ್ಯೂಮನ್ ರೈಟ್ಸ್ ಒತ್ತಾಯಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಹರೀಶ್ ಆಚಾರ್ಯ, ನಗರದ ಮಹದೇವಪೇಟೆ ರಸ್ತೆ ವಿಸ್ತರಣಾ ಕಾರ್ಯ ವಿಳಂಬವಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಅವೈಜ್ಞಾನಿಕವಾಗಿ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ಅಪೂರ್ಣ ಗೊಂಡಿರುವ ಕಾಮಗಾರಿಯಿಂದ ನಗರದ ಜನತೆ ಸಂಕಷ್ಟವನ್ನು ಎದುರಿಸಬೇಕಾಗಿದೆ. ಎರಡೂ ಬದಿಗಳಲ್ಲಿ ಚರಂಡಿಗಳನ್ನು ನಿರ್ಮಿಸಿ, ಸ್ಲ್ಯಾಬ್‍ಗಳನ್ನು ಹಾಕಿಸಿದ ನಂತರ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಈ ಹಿಂದೆಯೆ ಸಂಘಟನೆ ಸಲಹೆ ನೀಡಿತ್ತು. ಇದನ್ನು ನಿರ್ಲಕ್ಷಿಸಿದ ನಗರಸಭೆ ಮಳೆಗಾಲದಲ್ಲಿ ಕಾಮಗಾರಿ ಕೈಗೆತ್ತಿಕೊಂಡು ಸಾರ್ವಜನಿಕರಿಗೆ ತೊಂದರೆಯನ್ನು ನೀಡುತ್ತಿದೆ ಎಂದು ಆರೋಪಿಸಿದರು. ಮಹದೇವಪೇಟೆ ವ್ಯಾಪ್ತಿಯ ನಗರಸಭಾ ಸದಸ್ಯರುಗಳು ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಜನರ ಸಂಕಷ್ಟಗಳನ್ನು ಆಲಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದ ಹರೀಶ್ ಆಚಾರ್ಯ ನಗರಸಭೆÉಯಲ್ಲಿ ಕೆಲವು ಅಸಮರ್ಥ ಸದಸ್ಯರಿದ್ದು, ಇವರುಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವದು ಸೂಕ್ತವೆಂದು ಅಭಿಪ್ರಾಯಪಟ್ಟರು.

ನಗರಸಭೆ ಸಾರ್ವಜನಿಕರಿಗೆ ನ್ಯಾಯಯುತವಾಗಿ ಸಿಗಬೇಕಾದ ಮೂಲಭೂತ ಸೌಲಭ್ಯಗಳನ್ನು ನೀಡದೆ ಮಾನವ ಹಕ್ಕುಗಳನ್ನು ಉಲ್ಲಂಘಿಸು ತ್ತಿದೆ. ಶೀಘ್ರ ಮಹದೇವಪೇಟೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳದಿದ್ದಲ್ಲಿ ಅವ್ಯವಸ್ಥೆಗೊಂಡಿರುವ ರಸ್ತೆಯ ಮಧ್ಯಭಾಗದಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಪ್ರತಿಭಟನೆ ನಡೆಸುವದಾಗಿ ಹರೀಶ್ ಆಚಾರ್ಯ ಎಚ್ಚರಿಕೆ ನೀಡಿದರು. ಅಲ್ಲದೆ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡುವದಾಗಿ ತಿಳಿಸಿದರು.

ಸಂಘಟನೆಯ ಪ್ರಮುಖರಾದ ಸತ್ಯೇಶ್ ಭಟ್ ಮಾತನಾಡಿ, ಮಹದೇವಪೆÉೀಟೆಯ ಕೇವಲ 2 ಕಿ.ಮೀ. ದೂರದ ರಸ್ತೆ ಕಾಮಗಾರಿಯನ್ನು ನಾಲ್ಕು ತಿಂಗಳುಗಳೇ ಕಳೆದಿದ್ದರೂ ಪೂರ್ಣಗೊಳಿಸಿಲ್ಲ. ರಸ್ತೆ ಅವ್ಯವಸ್ಥೆಯಿಂದ ಮಕ್ಕಳು ಹಾಗೂ ವಯೋವೃದ್ಧರು ಬಿದ್ದು ಗಾಯಗ ಳಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹೈಟೆಕ್ ಮಾರುಕಟ್ಟೆ ಕಾಮಗಾರಿ ಕೂಡ ಪೂರ್ಣಗೊಳ್ಳದೆ ಇರುವದರಿಂದ ಮತ್ತಷ್ಟು ಅವ್ಯವಸ್ಥೆ ಎದುರಾಗಿದೆ. ಮಾರುಕಟ್ಟೆ ಕಾಮಗಾರಿ ಯನ್ನು ಪೂರ್ಣಗೊಳಿಸಿ ನಂತರ ರಸ್ತೆ ವಿಸ್ತರಣೆ ಆರಂಭಿಸುವಂತೆ ಒತ್ತಾಯಿಸ ಲಾಗಿತ್ತಾದರೂ ಇದಕ್ಕೆ ಸ್ಪಂದಿಸದ ನಗರಸಭೆ ಇದೀಗ ಸಾರ್ವಜನಿಕರು ಕಷ್ಟ ನಷ್ಟಗಳನ್ನು ಅನುಭವಿಸುವಂತೆ ಮಾಡಿದೆ ಎಂದು ಆರೋಪಿಸಿದರು.

ಗೋಷ್ಠಿಯಲ್ಲಿ ಪ್ರಮುಖರಾದ ನಿತ್ಯಾನಂದ ರೈ, ಕೋಳಿಬೈಲು ಜಯರಾಂ, ಪಾರ್ವತಿ ಆಚಾರ್ಯ ಉಪಸ್ಥಿತರಿದ್ದರು.