ಮಡಿಕೇರಿ, ಜು. 26: ಮಡಿಕೇರಿ ನಗರದಲ್ಲಿ ಕಾರ್ಗಿಲ್ ವಿಜಯ ದಿವಸ್ ವಿಜಯೋತ್ಸವವನ್ನು ಆಚರಣೆ ಮಾಡಲಾಯಿತು. ಈ ಸಂದರ್ಭ ಹುತಾತ್ಮರ ಸ್ಮಾರಕಕ್ಕೆ ಪುಷ್ಪಾರ್ಚನೆ ಯೊಂದಿಗೆ ಗೌರವ ನಮನ ಸಲ್ಲಿಸಲಾಯಿತು. ಬಳಿಕ ಅಶ್ವಿನಿ ಆಸ್ಪತ್ರೆಯಲ್ಲಿ ಕಾರ್ಗಿಲ್ ವಿಜಯ ದಿವಸ್ ಸವಿನೆನಪಿಗಾಗಿ ರಕ್ತದಾನ ಶಿಬಿರವು ನಡೆಯಿತು.ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ನೇತೃತ್ವದಲ್ಲಿ ವಿವಿಧ ಹಿಂದೂ ಸಂಘಟನೆಗಳ ಕಾರ್ಯ ಕರ್ತರು ನಗರದ ಹುತಾತ್ಮ ಸ್ಮಾರಕ ಕೇಂದ್ರದಲ್ಲಿ ಸಮಾವೇಶಗೊಂಡು ಕಾರ್ಗಿಲ್ ವಿಜಯ ದಿವಸ್ ಹಿನ್ನೆಲೆಯಲ್ಲಿ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು.
ಬಳಿಕ ಸಂಸ್ಕಾರ ಭಾರತಿ ಸಂಘಟನೆಯ ಮಂಗಳೂರು ವಿಭಾಗ ಸಂಚಾಲಕ ಶ್ರೀಕೃಷ್ಣ ಉಪಾಧ್ಯಾಯ ಮಾತನಾಡಿ, ಸೈನಿಕರನ್ನು ಸ್ಮರಣೆ ಮಾಡುವದೆಂದರೆ ಅದು ನಮಗೆಲ್ಲ ಸ್ಫೂರ್ತಿದಾಯಕವಾಗಿದೆ. ಪದೇ ಪದೇ ಗಡಿ ಒಪ್ಪಂದವನ್ನು ಉಲ್ಲಂಘಿಸು ತ್ತಿರುವ ಪಾಕ್ ಸೇನೆ ಬೆನ್ನಿಗೆ ಚೂರಿ ಹಾಕುವ ಅಭ್ಯಾಸವನ್ನು ರೂಢಿಸಿ ಕೊಂಡಿದೆ. ಇಂತಹದೇ ಸಂದರ್ಭದಲ್ಲಿ ಭಾರತದ ಗಡಿಯೊಳಗೆ ಒಳನುಸುಳಿ ಬಂದ ಪಾಕ್ ಆಕ್ರಮಣವನ್ನು ಸದೆಬಡಿದು ಪಾಕ್ ಸೈನಿಕರನ್ನು ಹೊಡೆದುರಳಿಸಿದ ಶೌರ್ಯ ದಿನವಾಗಿದೆ. ಕುರಿ ಕಾಯುವ ಹುಡುಗನಿಂದ ಅಂದು ಪಾಕ್ ಸೈನಿಕರು ಒಳನುಸುಳಿ ಬಂದ ಮಾಹಿತಿ ದೊರೆತಿತ್ತು. ಇದನ್ನು ಬೆನ್ನಟ್ಟಿ ಹೋದ ಸೈನ್ಯಾಧಿಕಾರಿ ಸೌರವ್ ಕಾಲಿಯಾ ನೇತೃತ್ವದ 5ಮಂದಿ ಸೈನಿಕರ ತಂಡವನ್ನು ಅಪಹರಿಸಿದ ಪಾಕ್ ತುಂಬಾ ಹೀನವಾಗಿ ನಡೆದು ಕೊಂಡಿತ್ತು. ಐವರು ಸೈನಿಕರ ಕೈ, ಕತ್ತು, ಕಾಲು ಹೀಗೆ ಎಲ್ಲಾ ಅಂಗಾಂಗವನ್ನು ಕತ್ತರಿಸಿ ಭಾರತಕ್ಕೆ ಕಳುಹಿಸಿದ ಬಳಿಕ ಪಾಕ್‍ನ ಕುತಂತ್ರ ಅರಿವಿಗೆ ಬಂದು ನಮ್ಮ ಸೈನ್ಯ ಮುನ್ನುಗ್ಗಿ ಪಾಕ್ ಸೈನ್ಯವನ್ನು ಸದೆಬಡಿದ ದಿನವಾಗಿದೆ. ಇದರಲ್ಲಿ ಕೊಡಗಿನ ಸೈನಿಕರ ಪಾತ್ರವಿದೆ. ಕೊಡಗಿನ ಜನ ದೇಶಕ್ಕಾಗಿ ಯಾವತ್ತೂ ಬದುಕುವದನ್ನು ತಾನು ಕಂಡಿದ್ದೇನೆ ಎಂದು ಹೆಮ್ಮೆಯಿಂದ ನುಡಿದರು.
1947ರಲ್ಲಿ ದೇಶ ವಿಭಜನೆ ಯಾಗಿದ್ದು, ನಮ್ಮ ದುರಂತವೆಂದ ಅವರು ಕಾಶ್ಮೀರದ ಮೂರನೇ ಒಂದು ಭಾಗ ಇಂದಿಗೂ ಪಾಕ್ ಕೈಯಲ್ಲಿದೆ. ಸ್ವಾತಂತ್ರ್ಯ ಬಳಿಕ ವಿವಿಧ ಯುದ್ಧಗಳಲ್ಲಿ ದೇಶದ 9502 ಮಂದಿ ಸೈನಿಕರು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದಾರೆ. ಸೈನಿಕರು ದೇಶದ ಸಂಪತ್ತಾಗಿದ್ದು, ಅವರನ್ನು ಮರೆತಲ್ಲಿ ದೇಶಕ್ಕೆ ಉಳಿಗಾಲವಿಲ್ಲ. ಸೈನಿಕರು ನಮಗೆ ಸ್ಫೂರ್ತಿದಾಯಕ ರಾಗಿದ್ದು, ಎಲ್ಲಾ ಕ್ಷೇತ್ರಗಳಲ್ಲಿ ಅವರಿಗೆ ಆದ್ಯತೆ ಸಿಗುವಂತಾಗಬೇಕು ಎಂದರು.
ಜಾಗ ನೀಡಬೇಕು
ನಿವೃತ್ತ ಮೇಜರ್ ಬಿ.ಎ. ನಂಜಪ್ಪ ಮಾತನಾಡಿ, ಹುತಾತ್ಮರಿಗೆ ಗೌರವ ಸಲ್ಲಿಸುವದು ನಮ್ಮೆಲ್ಲರ ಕರ್ತವ್ಯವಾಗಿದೆ. ಕೆಲವು ಸೈನಿಕರು ತಮ್ಮ ಹೊಟ್ಟೆಪಾಡಿಗೆ ಸೈನ್ಯಕ್ಕೆ ಸೇರಿ ಕೊಂಡಿದ್ದರೆ, ಶೇ. 90ರಷ್ಟು ಸೈನಿಕರು ದೇಶಪ್ರೇಮದಿಂದ ಸೈನಿಕರಾಗಿ ಸೇರಿಕೊಂಡಿದ್ದಾರೆ. ನಿವೃತ್ತರಾದ ಬಳಿಕ ಆಡಳಿತ ವರ್ಗ ಸೈನಿಕರಿಗೆ ಸೂಕ್ತ ಸೌಲಭ್ಯ ಕಲ್ಪಿಸಬೇಕು. ಇಲ್ಲಿನ ಸ್ಮಾರಕದಲ್ಲಿ 2ನೇ ಮಹಾಯುದ್ಧದಲ್ಲಿ ಮೃತರಾದವರಿಗೆ ಗೌರವಾರ್ಪಣೆ ಸಲ್ಲಿಸಲಾಗುತ್ತದೆ. ಜಿಲ್ಲಾಡಳಿತ ಕಾರ್ಗಿಲ್ ಹುತಾತ್ಮರಿಗೆ ಗೌರವಾರ್ಪಣೆ ಸಲ್ಲಿಸಲು ಜಾಗ ನೀಡಬೇಕು. ಮುಂದಿನ ವಿಜಯ ದಿವಸ್ ಆ ಜಾಗದಲ್ಲಿ ಆಚರಿಸುವಂತಾಗಬೇಕು ಎಂದು ಜಿಲ್ಲಾಡಳಿತವನ್ನು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಎಂ. ಸತೀಶ್‍ಕುಮಾರ್, ಮೇಜರ್ ಚಂಗಪ್ಪ, ನಿವೃತ್ತ ಸೈನಿಕರಾದ ಎಂ.ಕೆ. ನಾಚಪ್ಪ, ಇಂಡೋ-ಪಾಕ್ ಯುದ್ಧದಲ್ಲಿ
(ಮೊದಲ ಪುಟದಿಂದ) ಭಾಗಿಯಾದ ಸೈನಿಕ ಎಂ.ಕೆ. ಅಚ್ಚಯ್ಯ, ಭಜರಂಗದಳ ಜಿಲ್ಲಾ ಸಹ ಸಂಚಾಲಕ ಕೆ.ಎಚ್. ಚೇತನ್, ವಿಹಿಂಪ ಜಿಲ್ಲಾ ಉಪಾಧ್ಯಕ್ಷ ಡಿ.ಹೆಚ್. ಮೇದಪ್ಪ, ಜಿಲ್ಲಾ ಕಾರ್ಯದರ್ಶಿ ರಮೇಶ್‍ಪಿ., ಬಿಜೆಪಿ ಜಿಲ್ಲಾಧ್ಯಕ್ಷ ಮನುಮುತ್ತಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂತಿ ಸತೀಶ್, ಜಿಲ್ಲಾ ಕಾರ್ಯದರ್ಶಿ ಬಿ.ಕೆ. ಅರುಣ್‍ಕುಮಾರ್, ಎಬಿವಿಪಿ ಜಿಲ್ಲಾ ಸಂಚಾಲಕ ನವನೀತ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿದ್ದರಾಜು, ಬಿಎಂಎಸ್ ಜಿಲ್ಲಾ ಖಜಾಂಚಿ ಟಿ.ಎ. ಕುಮಾರ್, ಹಿಂದೂ ಜಾಗರಣಾ ವೇದಿಕೆಯ ತಾಲೂಕು ಸಂಚಾಲಕ ಅಜಿತ್, ಭಾರತ್ ವಿಕಾಸ್ ಪರಿಷತ್‍ನ ಅಧ್ಯಕ್ಷ ಧನಂಜಯ, ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಜೈನಿ, ಪ್ರಧಾನ ಕಾರ್ಯದರ್ಶಿಗಳಾದ ಬಿ.ಕೆ. ಜಗದೀಶ್, ಉಮೇಶ್ ಸುಬ್ರಮಣಿ ಹಾಗೂ ಇನ್ನಿತರರು ಇದ್ದರು.
ಭಜರಂಗದಳ ತಾಲೂಕು ಸಂಚಾಲಕ ವಿನಯ್ ಕಾರ್ಯಕ್ರಮ ನಿರೂಪಸಿ, ಜಿಲ್ಲಾ ಸಂಚಾಲಕ ಸ್ವಾಗತಿಸಿದರೆ, ಚಿ.ನಾ. ಸೋಮೇಶ್ ವಂದಿಸಿದರು. ಬಳಿಕ ಅಶ್ವಿನಿ ಆಸ್ಪತ್ರೆಯಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಸುಮಾರು 78 ಮಂದಿ ರಕ್ತದಾನ ಮಾಡಿದರು.