ಸೋಮವಾರಪೇಟೆ,ಜ.2: ನಗದು ರಹಿತ ವ್ಯವಹಾರದಿಂದಾಗುವ ಅನುಕೂಲತೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಭಗತ್ ಸಿಂಗ್ ಸೇನೆಯ ಪದಾಧಿಕಾರಿಗಳು ಸಂತೆ ದಿನದಂದು ಸೋಮವಾರಪೇಟೆ ನಗರದಲ್ಲಿ ಮಾಹಿತಿ ಕರಪತ್ರ ವಿತರಿಸಿದರು.ನಗದು ರಹಿತ ವ್ಯವಹಾರದಿಂದ ಪದೇ ಪದೇ ಬ್ಯಾಂಕ್‍ಗಳಿಗೆ ಅಲೆದಾಡುವ, ಸರತಿ ಸಾಲಿನಲ್ಲಿ ನಿಲ್ಲುವ ಸಮಸ್ಯೆಗಳು ಇಲ್ಲದಾಗುತ್ತದೆ. ಜತೆಗೆ ಅಮೂಲ್ಯ ಸಮಯವೂ ವ್ಯರ್ಥವಾಗುವದಿಲ್ಲ. ಈ ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಕರಪತ್ರ ಹಂಚಲಾಗುತ್ತಿದೆ ಎಂದು ಭಗತ್ ಸಿಂಗ್ ಸೇನೆಯ ಜಿಲ್ಲಾ ಘಟಕದ ಸಂಚಾಲಕ ಪಿ. ಮಧು ಹೇಳಿದರು.
ಈ ಯೋಜನೆಯಿಂದ ಚಿಲ್ಲರೆ ಸಮಸ್ಯೆ ಪರಿಹಾರವಾಗುತ್ತದೆ. ಹೆಚ್ಚಿನ ಹಣವನ್ನು ಜತೆಯಲ್ಲಿರಿಸಿಕೊಂಡು ಓಡಾಡುವದು ತಪ್ಪುತ್ತದೆ. ಹಣ ಕಳ್ಳತನದ ಭಯ ಇರುವದಿಲ್ಲ. ಲಂಚ, ನಕಲಿ ನೋಟುಗಳ ಚಲಾವಣೆ ಸಾಧ್ಯವಾಗುವದಿಲ್ಲ. ದೇಶದಲ್ಲಿ ಭಯೋತ್ಪಾದನೆ ಚಟುವಟಿಕೆಗಳಿಗೆ ಕಡಿವಾಣ ಬಿದ್ದು ದೇಶ ಸುಭದ್ರ ವಾಗುತ್ತದೆ ಎಂದು ಮಧು ಹೇಳಿದರು.
ನೋಟುಗಳ ಮುದ್ರಣಕ್ಕೆ ಕರೆನ್ಸಿ ಪೇಪರ್ ಖರೀದಿಗೆ ಉಂಟಾಗುವ ಲಕ್ಷಾಂತರ ಕೋಟಿ ರೂಪಾಯಿಗಳ ಉಳಿತಾಯವಾಗಿ ಅದನ್ನು ಮೂಲಭೂತ ಸೌಕರ್ಯಕ್ಕೆ ಬಳಸಲು ಅನುಕೂಲವಾಗುತ್ತದೆ. ಕಾರ್ಡ್‍ಗಳಿಂದ ಹಣ ಪಾವತಿ ಮೂಲಕ ವಸ್ತುಗಳನ್ನು ಖರೀದಿಸುವಾಗ ಹಲವು ರಿಯಾಯ್ತಿ ಯೋಜನೆಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಆಸ್ತಿಗಳನ್ನು ಖರೀದಿಸುವಾಗ ಮೂಲದರಕ್ಕಿಂತ ಹೆಚ್ಚಿನ ಮೊತ್ತ ನೀಡಿ ಖರೀದಿಸುವಾಗ ಅದರಿಂದಾಗುವ ಹಣದ ನಷ್ಟ ತಪ್ಪುತ್ತದೆ. ಶೈಕ್ಷಣಿಕ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಡೊನೇಷನ್ ಹಾವಳಿಗೆ ಕಡಿವಾಣ ಬೀಳುತ್ತದೆ. ಕ್ರಿಮಿನಲ್ ಚಟುವಟಿಕೆಗಳಿಗೆ ಹಾಗೂ ಹಣಕಾಸಿನ ಅವ್ಯವಹಾರಗಳಿಗೆ ಕಡಿವಾಣ ಬೀಳುತ್ತದೆ ಎಂದರು.
ಕೇಂದ್ರ ಸರ್ಕಾರವು ದೇಶದ ಒಳಿತಿಗಾಗಿ ನಗದು ರಹಿತ (ಕ್ಯಾಶ್‍ಲೆಸ್) ವ್ಯವಹಾರಕ್ಕೆ ಪೂರಕವಾಗಿ ಆರಂಭಿಸಿರುವ ಯೋಜನೆಗಳನ್ನು ಎಲ್ಲರೂ ಬೆಂಬಲಿಸುವ ಮೂಲಕ, ದೇಶದಲ್ಲಿ ನಗದು ರಹಿತ (ಕ್ಯಾಶ್‍ಲೆಸ್) ಯುಗದ ಆರಂಭಕ್ಕೆ ಕೈ ಜೋಡಿಸಿ ದೇಶದ ಅಭಿವೃದ್ಧಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ಆಟೋ ಚಾಲಕರ ಸಂಘದ ಅಧ್ಯಕ್ಷ ಮೋಹನ್ ಅವರಿಗೆ ಕರಪತ್ರ ನೀಡುವ ಮೂಲಕ ಮಾಹಿತಿ ಆಂದೋಲನಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭ ರಮೇಶ್, ಸಂತೋಷ್ ಪೂಜಾರಿ, ನೆಹರು, ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.