ಮಡಿಕೇರಿ, ಡಿ. 21: ನಗದು ರಹಿತವಾದ ಡಿಜಿಟಲ್ ವ್ಯವಹಾರದ ಬಗ್ಗೆ ಬ್ಯಾಂಕ್‍ಗಳ ಮೂಲಕ ಸಾಮೂಹಿಕವಾಗಿ ಜನ ಸಾಮಾನ್ಯರಿಗೆ ಜಾಗೃತಿ ಹಾಗೂ ಆಸಕ್ತಿ ಮೂಡಿಸಲು ಪ್ರಯತ್ನಿಸುವಂತೆ ಕೊಡಗು - ಮೈಸೂರು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರು ಬ್ಯಾಂಕ್ ಅಧಿಕಾರಿಗಳಿಗೆ ಕರೆ ನೀಡಿದರು.
ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿಂದು ಬ್ಯಾಂಕ್‍ಗಳ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು ಈ ಕುರಿತು ಸಲಹೆ ನೀಡಿದರು. ದೇಶದಲ್ಲಿ ರೂ. 500 ಹಾಗೂ ರೂ. 1000 ನೋಟ್ ಅಮಾನೀಕರಣಗೊಳಿಸಿದ ಬಳಿಕ ಜಿಲ್ಲೆಯಲ್ಲಿ ಆಗಿರುವ ಪರಿಣಾಮ ಹಾಗೂ ವ್ಯವಸ್ಥೆಗಳ ಕುರಿತಾಗಿ ಸಂಸದರು ಲೀಡ್ ಬ್ಯಾಂಕ್‍ನ ಜಿಲ್ಲಾ ವ್ಯವಸ್ಥಾಪಕ ಕೆ.ಎಂ. ದೇವಯ್ಯ, ನಬಾರ್ಡ್‍ನ ವ್ಯವಸ್ಥಾಪಕ ಎಂ.ಸಿ. ನಾಣಯ್ಯ ಸೇರಿದಂತೆ ವಿವಿಧ ಬ್ಯಾಂಕ್‍ಗಳ ಅಧಿಕಾರಿಗಳಿಂದ ಮಾಹಿತಿ ಪಡೆದರು.
(ಮೊದಲ ಪುಟದಿಂದ) ಚೆಕ್, ಇ-ಪೇಮೆಂಟ್ ಮೂಲಕ ನೌಕರರಿಗೆ ವೇತನ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಸರ್ಕಾರದ ಈ ನಿರ್ಣಯದಿಂದಾಗಿ ನಗದು ರೂಪದಲ್ಲಿ ವೇತನ ಪಡೆಯುತ್ತಿದ್ದ ಅಸಂಖ್ಯಾತ ಆಸಂಘಟಿತ ಕಾರ್ಮಿಕ ವಲಯದ ಮೇಲೆ ಪರಿಣಾಮ ಬೀರಲಿದೆ. ಅಸಂಘಟಿತ ವಲಯದ ಕಾರ್ಮಿಕರಲ್ಲಿ ಬಹುತೇಕ ಮಂದಿಗೆ ಬ್ಯಾಂಕ್ ಖಾತೆಗಳಿಲ್ಲ. ಹೀಗಾಗಿ ಇನ್ನು ಮುಂದೆ ಅವರ ವೇತನಕ್ಕಾಗಿಯಾದರೂ ಅನಿವಾರ್ಯವಾಗಿ ಬ್ಯಾಂಕ್ ಖಾತೆಗಳನ್ನು ತೆರೆಯಬೇಕಿದೆ. ಈಗಾಗಲೇ ದೇಶಾದ್ಯಂತ ಸುಮಾರು 27 ಕೋಟಿ ಸಾಮಾನ್ಯ ಖಾತೆಗಳಿದ್ದು, 23 ಕೋಟಿ ಜನಧನ್ ಖಾತೆಗಳಿವೆ.