ಕುಶಾಲನಗರ, ಡಿ 19: ಕುಶಾಲನಗರದಲ್ಲಿ ನಕಲಿ ನಂಬರ್ ಅಳವಡಿಸಿ ಓಡಾಡುವ ವಾಹನಗಳ ಸಂಖ್ಯೆ ಹೆಚ್ಚಳಗೊಳ್ಳುತ್ತಿದೆ. ಶನಿವಾರ ಸಾರಿಗೆ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ ಸಂದರ್ಭ ಬೊಲೆರೋ ವಾಹನವೊಂದು ಪತ್ತೆಯಾಗಿದ್ದು ನಕಲಿ ನಂಬರ್ ಅಳವಡಿಸಿರುವದು ತಿಳಿದು ಬಂದಿದೆ.

ಕೆಎ.12.ಬಿ.2300 ನೋಂದಣಿ ಯುಳ್ಳ ಸಂಖ್ಯೆಯನ್ನು ವಾಹನಕ್ಕೆ ಅಳವಡಿಸಿ ಕುಶಾಲನಗರದ ಸರಕಾರಿ ಪಾಲಿಟೆಕ್ನಿಕ್ ಬಳಿ ಸಾಗುತ್ತಿದ್ದ ಸಂದರ್ಭ ಮಡಿಕೇರಿ ಸಾರಿಗೆ ಇಲಾಖೆ ನಿರೀಕ್ಷಕ ಶಿವಕುಮಾರ್ ಅವರು ಪತ್ತೆಹಚ್ಚಿ ಪೊಲೀಸರ ವಶಕ್ಕೆ ನೀಡಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಸಾರಿಗೆ ಅಧಿಕಾರಿ ಶರತ್‍ಚಂದ್ರ ಅವರು ಕುಶಾಲನಗರದಲ್ಲಿ ಜೆಸಿಬಿ ಯಂತ್ರವೊಂದನ್ನು (ಕೆಎ.13.ಎಂ.7288) ಪರಿಶೀಲಿಸಿ ಇದೇ ರೀತಿಯ ನಕಲಿ ನೋಂದಣಿ ಪತ್ತೆಯಾಗಿರುವದನ್ನು ಇಲ್ಲಿ ಸ್ಮರಿಸಬಹುದು. ಶನಿವಾರ ಕುಶಾಲನಗರ ಕಡೆಗೆ ಬರುತ್ತಿದ್ದ ಬೊಲೆರೋ ವಾಹನವನ್ನು ನಾಪೋಕ್ಲು ನಿವಾಸಿ ವಸೀಂ ಎಂಬಾತ ಚಾಲನೆ ಮಾಡಿಕೊಂಡು ಬರುತ್ತಿದ್ದ ಸಂದರ್ಭ ಈ ಪ್ರಕರಣ ಪತ್ತೆಯಾಗಿದೆ ಎಂದು ಸಾರಿಗೆ ಅಧಿಕಾರಿ ಶಿವಕುಮಾರ್ ತಿಳಿಸಿದ್ದಾರೆ.

ಕುಶಾಲನಗರ ವ್ಯಾಪ್ತಿಯಲ್ಲಿ ಹಲವು ಜೆಸಿಬಿ ಯಂತ್ರಗಳು ಸೇರಿದಂತೆ ಹೆಚ್ಚಿನ ವಾಹನಗಳು ನಕಲಿ ನೋಂದಣಿ ಸಂಖ್ಯೆಗಳನ್ನು ಅಳವಡಿಸಿಕೊಂಡು ಓಡಾಟ ನಡೆಸುತ್ತಿರುವದು ಇತ್ತೀಚಿನ ಬೆಳವಣಿಗೆಯಾಗಿದೆ. ಪ್ರಯಾಣಿಕರನ್ನು ಕೊಂಡೊಯ್ಯುವ ಆಟೋ ರಿಕ್ಷಾ ಸೇರಿದಂತೆ ಕೆಲವು ವಾಹನಗಳು ಕೂಡ ಈ ದಂಧೆಯಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ನಾಗರಿಕ ವಲಯದಲ್ಲಿ ಸಂಶಯ ವ್ಯಕ್ತಗೊಂಡಿದ್ದು, ಈ ಬಗ್ಗೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದಲ್ಲಿ ಭಾರೀ ಪ್ರಕರಣಗಳು ಹೊರ ಬೀಳುವ ಸಾಧ್ಯತೆಯಿದೆ ಎನ್ನಲಾಗಿದೆ.