ಗುಡ್ಡೆಹೊಸೂರು, ಜು. 19: ಇಲ್ಲಿಗೆ ಸಮೀಪದ ನಂಜರಾಯ ಪಟ್ಟಣದಲ್ಲಿ ಹಲವು ದಿನಗಳಿಂದ ಕಾಡಾನೆಗಳ ಹಾವಳಿ ಇದ್ದರೆ ಅದರ ಜೊತೆಯಲ್ಲಿ ಸಾಕಾನೆಗಳ ಧಾಳಿ ರೈತರನ್ನು ಕಾಡುತ್ತಿದೆ. ದುಬಾರೆಯಲ್ಲಿ ನೆಲಸಿರುವ ಮಹಿಳೆಯೊಬ್ಬರು ಮೂರು ಆನೆಗಳನ್ನು ಸಾಕುತ್ತಿದ್ದಾರೆ. ಮೂಲತಃ ಮಂಗಳೂರಿನವರಾದ ಇವರು ವಿದೇಶಿಯೊಬ್ಬರನ್ನು ವಿವಾಹವಾಗಿದ್ದಾರೆ. ಹೆಚ್ಚು ಕಾಲ ವಿದೇಶದಲ್ಲಿಯೇ ಕಳೆಯುತ್ತಾರೆ. ಇವರು ಸುಮಾರು 20 ವರ್ಷದಿಂದ ಆನೆಗಳನ್ನು ಸಾಕುತ್ತಿದ್ದು, ಈ ಆನೆಗಳು ನಂಜರಾಯಪಟ್ಟಣದಲ್ಲಿ ಈ ಹಿಂದೆ ಭತ್ತದ ಗದ್ದೆಗಳಿಗೆ ಧಾಳಿ ಮಾಡಿ ಬೆಳೆಗಳನ್ನು ತಿಂದು ರೈತರಿಗೆ ನಷ್ಟ ಪಡಿಸುತ್ತಿದ್ದವು. ಈ ಸಂಬಂಧ ಅಲ್ಲಿಯ ರೈತರು ಹಲವಾರು ಬಾರಿ ಅರಣ್ಯ ಇಲಾಖೆಗೆ ದೂರು ವೀಡಿರುತ್ತಾರೆ. ಇತ್ತೀಚೆಗೆ ಈ ಸಾಕಾನೆಗಳಿಂದ ತುಂಬಾ ತೊಂದರೆಯಾಗುತ್ತಿರುವದಾಗಿ ಅಲ್ಲಿನ ನಿವಾಸಿ ಅಡ್ಲಳ್ಳಿ ರಾಮು ಎಂಬವರು ಪತ್ರಿಕೆಯೊಂದಿಗೆ ದೂರಿದ್ದಾರೆ. ಆನೆಗಳನ್ನು ನೋಡಿಕೊಳ್ಳಲು ಯಾರನ್ನೋ ನೇಮಿಸಿದ್ದಾರೆ. ಅವರು ವಿದೇಶದಲ್ಲಿದ್ದಾರೆ. ಆದರೆ ಇಲ್ಲಿನ ರೈತರು ಅತಂತ್ರ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ.

ಆನೆಗಳು ರಾತ್ರಿ ಸಮಯದಲ್ಲಿ ಕಾಡಿಗೆ ತೆರಳಿ ಹಿಂತಿರುಗಿ ಬರುವಾಗ ಕಾಡಾನೆಗಳನ್ನು ಜೊತೆ ಕರೆದುಕೊಂಡು ಬಂದು ತಮ್ಮ ತೋಟಗಳಿಗೆ ನುಗ್ಗಿ ನಾಶ ಪಡಿಸುತ್ತಿರುವದಾಗಿ ಗ್ರಾಮಸ್ಥರು ದೂರಿದ್ದಾರೆ. ಈ ಸಂಬಂಧ ಮಹಿಳೆ ವಿರುದ್ಧ ದೂರು ದಾಖಲಿಸಿ ವಿದೇಶದಲ್ಲಿರುವ ಅವರಿಗೆ ನೋಟಿಸ್ ನೀಡುವದಾಗಿ ರಾಮು ತಿಳಿಸಿದ್ದಾರೆ. ಅಲ್ಲದೆ ಅರಣ್ಯ ಇಲಾಖೆ ಸರಿಯಾದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.