ಗುಡ್ಡೆಹೊಸೂರು, ಸೆ. 13: ಇಲ್ಲಿಗೆ ಸಮೀಪದ ನಂಜರಾಯಪಟ್ಟಣದ ಗೌಡ ಸಮಾಜ ವತಿಯಿಂದ ಕೈಲ್ ಮುಹೂರ್ತ ಹಬ್ಬದ ಅಂಗವಾಗಿ ಕ್ರೀಡಾಕೂಟ ಮತ್ತು ಸಂತೋಷ ಕೂಟವನ್ನು ಅಲ್ಲಿನ ಪ್ರೌಢಶಾಲಾ ಆವರಣದಲ್ಲಿ ಏರ್ಪಡಿಸಲಾಗಿತ್ತು. ಶಾಲಾ ಮಕ್ಕಳ ಮತ್ತು ಕಾಲೇಜು ಮಟ್ಟದ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ಮಹಿಳೆಯರಿಗೆ ಕಣ್ಣಿಗೆ ಬಟ್ಟೆಕಟ್ಟಿ ಮಡಿಕೆ ಒಡೆಯುವ ಸ್ಪರ್ಧೆ ಮತ್ತು ಪುರುಷರಿಗೆ ಭಾರದ ಗುಂಡು ಎಸೆಯುವ ಸ್ಪರ್ಧೆ, ಬೈಕ್ ನಿಧಾನವಾಗಿ ಚಾಲಿಸುವದು ಇನ್ನೂ ವಿವಿಧ ಸ್ಪರ್ಧೆಗಳು ನಡೆದವು. ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ಕೆಮ್ಮಾರನ ಪ್ರಭಾವತಿ ಪ್ರಥಮ, ಭಾರದ ಗುಂಡು ಎಸೆತದಲ್ಲಿ ಅಚ್ಚಾಂಡಿರ ಡಿಂಪಿ ಪ್ರಥಮ, ಕೆಮ್ಮಾರನ ಗಣೇಶ್ ದ್ವಿತೀಯ ಸ್ಥಾನ ಪಡೆದರು. ಅದೃಷ್ಟಮನೆ ಸ್ಪರ್ಧೆಯಲ್ಲಿ ನಡುಬೆಟ್ಟಿ ರಾಧ ಪ್ರಥಮ, ಚೆಟ್ಟಿಮಾಡ ಗ್ರೀಷ್ಮಾ ದ್ವಿತೀಯ ಸ್ಥಾನ ಪಡೆದರು. ಬೈಕ್ ನಿಧಾನವಾಗಿ ಚಾಲಿಸುವ ಸ್ಪರ್ಧೆಯಲ್ಲಿ ಮೂಟೆಮನೆ ಬ್ರಿಜೇಶ್ ಪ್ರಥಮ ಸ್ಥಾನ ಪಡೆದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ನಂಜರಾಯಪಟ್ಟಣ ಗೌಡ ಸಮಾಜದ ಅಧ್ಯಕ್ಷ ಕೆದಂಬಾಡಿ ಜಿ. ಚೇತನ್ ವಹಿಸಿದ್ದರು. ಕ್ರೀಡಾಕೂಟದ ಉದ್ಘಾಟಕ ಎಂ.ಕೆ. ನಂಜುಂಡ ವೇದಿಕೆಯಲ್ಲಿದ್ದು. ನಂಜರಾಯಪಟ್ಟಣ ಸಮಾಜ ಬೆಳೆದು ಬಂದ ಹಾದಿಯ ಬಗ್ಗೆ ವಿವರಿಸಿದರು. ಮುಖ್ಯ ಅತಿಥಿಗಳಾಗಿ ಮಡಿಕೇರಿ ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ ಮಾತಾನಾಡಿ, ಜನಾಂಗ ಭಾಂದವರು ಈ ರೀತಿಯ ಸಂತೋಷ ಕೂಟಗಳನ್ನು ಏರ್ಪಡಿಸುವದರಿಂದ ತಮ್ಮತಮ್ಮಲ್ಲಿ ಭಾಂದವ್ಯ ಹೆಚ್ಚಾಗಿ ಸಮಾಜದ ಅಭಿವೃದ್ಧಿಯಾಗುವದು ಅಲ್ಲದೆ ತಮ್ಮ ಭಾಷೆಯ ಬಗ್ಗೆ ಅಭಿಮಾನವಿಟ್ಟು ಮತ್ತೊಂದು ಸಮಾಜವನ್ನು ಪ್ರೀತಿಸುವಂತೆ ಕರೆ ನೀಡಿದರು. ಈ ರೀತಿಯ ಗ್ರಾಮೀಣ ಕ್ರೀಡಾಕೂಟದಿಂದ ನಮ್ಮ ಆಚಾರ, ಪದ್ಧತಿ ಮತ್ತು ಹಿರಿಯರು ನಮಗೆ ಕಲಿಸಿದ ಆದರ್ಶಗಳು ಜೀವಂತವಿರಲು ಸಾಧ್ಯ ಎಂಬದಾಗಿ ತಿಳಿಸಿದರು. ನಿವೃತ್ತ ಫ್ರೊ. ಕೆದಂಬಾಡಿ ಸೋಮಣ್ಣ ಮಾತನಾಡಿ, ಜನಾಂಗದ ಸರ್ವರು ಒಟ್ಟಾಗಿ ಬೆರೆತು ಈ ರೀತಿಯ ಕಾರ್ಯಕ್ರಮಗಳು ಪ್ರತೀ ವರ್ಷ ನಡೆಯಲಿ ಎಂದು ಹಾರೈಸಿದರು.

ವೇದಿಕೆಯಲ್ಲಿ ವಿ.ಎಸ್.ಎಸ್.ಎನ್.ನ ಅಧ್ಯಕ್ಷ ಅಯ್ಯಂಡ್ರ ಲೋಕನಾಥ್, ಗ್ರಾಮ ಪಂಚಾಯಿತಿ ಸದಸ್ಯ ಕೆಮ್ಮಾರನ ಸುಕುಮಾರ ಗೌಡ, ಯುವ ಸಂಘದ ಅಧ್ಯಕ್ಷ ನಡುಮನೆ ಪವನ್, ಕೆಮ್ಮಾರನ ಉತ್ತಯ್ಯ, ಪರ್ಲಕೋಟಿ ಬಸಪ್ಪ, ಅಯ್ಯಂಡ್ರ ಧರ್ಮಾವತಿ ಮತ್ತು ಆಡಳಿತ ಮಂಡಳಿಯ 18 ಮಂದಿ ಸದಸ್ಯರು ಭಾಗವಹಿಸಿದ್ದರು. ನಂಜರಾಯಪಟ್ಟಣ, ರಂಗಸಮುದ್ರ, ಹೊಸಪಟ್ಟಣ ಮತ್ತು ವಾಲ್ನೂರಿನ ಗೌಡ ಜನಾಂಗದವರು ಪಾಲ್ಗೊಂಡಿದ್ದರು.

ಲಲಿತಾ ಚಿದಂಬರ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಕಾರ್ಯಕ್ರಮ ನಿರೂಪಣೆ ಮತ್ತು ಸ್ವಾಗತವನ್ನು ಅಯ್ಯಂಡ್ರ ಸೂರ್ಯ ನಡೆಸಿದರು.