ಮಡಿಕೇರಿ, ಸೆ. 17: ಹಿಂದೆ ‘ಸಿ’ ರಾಜ್ಯವಾಗಿದ್ದ ಕೊಡಗು 1956 ರಲ್ಲಿ ಕರ್ನಾಟಕದೊಂದಿಗೆ ವಿಲೀನವಾದ ನಂತರ ಅನೇಕ ಸಂಕಷ್ಟಗಳನ್ನು ಎದುರಿಸುತ್ತಾ ಬಂದಿದೆ ಎಂದು ಆರೋಪಿಸಿರುವ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕರ್ನಾಟಕ ರಾಜ್ಯೋತ್ಸವದ ದಿನವಾದ ನ.1 ರಂದು ದೆಹಲಿ ಚಲೋ ಪ್ರತಿಭಟನೆ ನಡೆಸಲು ನಿರ್ಧರಿಸಿದೆ ಎಂದು ಸಿಎನ್ಸಿ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಸಿ’ ರಾಜ್ಯವಾಗಿದ್ದ ಕೊಡಗನ್ನು ಅಂದಿನ ದಿನಗಳಲ್ಲಿ ಸರದಾರ್ ವಲ್ಲಭಾಬಾಯಿ ಪಟೇಲ್ ಅವರು ರಾಮ ರಾಜ್ಯವೆಂದು ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಆದರೆ, ಇಂದು ಕೊಡಗು ಜಿಲ್ಲೆ ಕರ್ನಾಟಕ ರಾಜ್ಯದಲ್ಲಿ ವಿಲೀನವಾದ ನಂತರ ಸಂಪೂರ್ಣ ವಾಗಿ ನಿರ್ಲಕ್ಷಿಸಲ್ಪಟ್ಟಿದೆಯೆಂದು ಆರೋಪಿಸಿದರು. ಕೊಡಗಿಗೆ ನ್ಯಾಯ ಸಿಗಬೇಕಾದರೆ, ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸುವದೇ ಸೂಕ್ತ ಪರಿಹಾರವೆಂದು ಅಭಿಪ್ರಾಯಪಟ್ಟ ಅವರು, ನ.1 ರಂದು ದೆಹಲಿಯ ಜಂತರ್ ಮಂತರ್ನಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಧರಣಿ ನಡೆಸಲಾಗುವದೆಂದರು.
ಬೇಡಿಕೆಗಳು: ಕೊಡವ ಲ್ಯಾಂಡ್ ಕೇಂದ್ರಾಡಳಿತ ಪ್ರದೇಶ ಘೋಷಣೆ ಯಾಗಬೇಕು, ಸಂವಿಧಾನದ 6ನೇ ಶೆಡ್ಯೂಲ್ ಪ್ರಕಾರ ಸ್ವಾಯತ್ತತೆ ನೀಡಬೇಕು, ಸಣ್ಣ ಸಂಖ್ಯೆಯಲ್ಲಿರುವ ಕೊಡವ ಜನಾಂಗಕ್ಕೆ ಬುಡಕಟ್ಟು ಸ್ಥಾನ ಮಾನ ನೀಡಬೇಕು. ಸಂವಿಧಾನದ 371ನೇ ವಿಧಿ ಪ್ರಕಾರ ಕೊಡಗು ಅಭಿವೃದ್ಧಿ ಮಂಡಳಿ ರಚಿಸಬೇಕು, ವಿನಾಶದ ಅಂಚಿನಲ್ಲಿರುವ ಕೊಡವ ಭಾಷೆಯನ್ನು 8ನೇ ಶೆಡ್ಯೂಲ್ಗೆ ಸೇರಿಸಬೇಕು, 2011ರ ಭೂ ಕಂದಾಯ ತಿದ್ದುಪಡಿ ಕಾಯ್ದೆ ಅನುಷ್ಠಾನಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, ಕೊಡವರಿಗೆ ಮತ್ತು ಜಮ್ಮಾ ಹಿಡುವಳಿದಾರರಿಗೆ ಇಂಡಿಯನ್ ಆಮ್ರ್ಸ್ ಆಕ್ಟ್ ಪ್ರಕಾರ ವಿಶೇಷ ಬಂದೂಕು ಹಕ್ಕು ಅಭಾದಿತ ವಾಗಿ ಮುಂದುವರಿಯ ಬೇಕು. ಅಲ್ಪಸಂಖ್ಯಾತರಾಗಿರುವ ಕೊಡವರಿಗೆ ಶಾಸನ ಸಭೆಯಲ್ಲಿ ಪ್ರಾತಿನಿಧ್ಯ ನೀಡಬೇಕು, ದೇವಟ್ ಪರಂಬುವಿನಲ್ಲಿ ರಾಷ್ಟ್ರೀಯ ಸ್ಮಾರಕ ನಿರ್ಮಿಸಬೇಕು, ಕೊಡವ ಜನಾಂಗಕ್ಕೆ ಯಹೂದಿ, ಪಾರ್ಸಿ, ಸಿಂಧಿ, ಜಿಯಾದಿ, ಕುರ್ದಿ, ಬಲೂಚಿ, ಪಸ್ತೂನ್ ಮತ್ತು ಕಾಶ್ಮೀರಿ ಪಂಡಿತರಂತೆ ಜಾಗತಿಕ ಮಾನ್ಯತೆ ನೀಡಬೇಕೆಂದು ಒತ್ತಾಯಿಸಿ ಅಂದು ದೆಹಲಿಯಲ್ಲಿ ಆಡಳಿತ ವರ್ಗದ ಪ್ರಮುಖರಿಗೆ ಮನವಿ ಪತ್ರ ಸಲ್ಲಿಸ ಲಾಗುವದೆಂದು ನಾಚಪ್ಪ ತಿಳಿಸಿದರು.
ಕನ್ನಡ ರಾಜ್ಯೋತ್ಸವವನ್ನು ಕರಾಳ ದಿನವನ್ನಾಗಿ ಕಳೆದ 20 ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದ್ದು, ಬೇಡಿಕೆಗಳು ಈಡೇರದಿದ್ದಲ್ಲಿ ವಿಶ್ವ ಸಂಸ್ಥೆಯ ಗಮನ ಸೆಳೆಯಲಾಗುವ ದೆಂದರು. ಗೋಷ್ಠಿಯಲ್ಲಿ ಮೂಕೊಂಡ ದಿಲೀಪ್, ಪುಲ್ಲೇರ ಕಾಳಪ್ಪ ಹಾಗೂ ಮಂದಪಂಡ ಮನೋಜ್ ಉಪಸ್ಥಿತರಿದ್ದರು.