ಮೂರ್ನಾಡು, ಸೆ. 1: ಬಲಮುರಿ ಗ್ರಾಮದ ಶ್ರೀ ಕಾವೇರಿ ಕಣ್ವ ಮುನೀಶ್ವರ ದೇವಾಲಯದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಕಣ್ವಮುನಿ ಧಾರ್ಮಿಕ ಸಭಾ ಭವನದ ಉದ್ಘಾಟನೆ ನಡೆಯಿತು.
ವೀರಾಜಪೇಟೆ ಶ್ರೀ ಗಾಯತ್ರಿ ಚಾರಿಟೆಬಲ್ ಟ್ರಸ್ಟ್, ಶ್ರೀ ಕಾವೇರಿ ಕಣ್ವ ಮುನೀಶ್ವರ ದೇವಾಲಯ ಹಾಗೂ ದಾನಿಗಳ ಧನ ಸಹಾಯ ದಿಂದ ನೂತನವಾಗಿ ನಿರ್ಮಾಣ ಗೊಂಡ ಸಭಾ ಭವನವನ್ನು ಶ್ರೀ ಕಣ್ವ ಮುನೀಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ನೆರವಂಡ ಅಪ್ಪಚ್ಚು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಧರ್ಮ, ಸಂಸ್ಕøತಿಗಳ ಬೆಳವಣಿಗೆ ಆಗಬೇಕಾದರೆ ಇಂತಹ ಧಾರ್ಮಿಕ ಮಂದಿರಗಳು ನಿರ್ಮಾಣ ವಾಗಬೇಕು. ಇಂದಿನ ಯುವಕರಲ್ಲಿ ಧಾರ್ಮಿಕ ಮನೋಭಾವನೆಗಳು ಕಡಿಮೆ ಆಗಿದೆ. ಯುವಕರಲ್ಲಿ ಧಾರ್ಮಿಕ ಮನೋಭಾವನೆಗಳನ್ನು ಬೆಳೆಸುವ ಕಾರ್ಯವಾಗಬೇಕಾಗಿದೆ ಎಂದರು.
ಬೆಂಗಳೂರು ಹೈಕೋರ್ಟು ಹಿರಿಯ ವಕೀಲ ಮುಕ್ಕಾಟಿರ ಟಿ. ನಾಣಯ್ಯ, ಕೊಡಗು ಜಿಲ್ಲಾ ಪಂಚಾಯಿತಿ ಸದಸ್ಯ ಮುರಳಿ, ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚನ ದಿನೇಶ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಬಿದ್ದಂಡ ಉಷಾ ದೇವಮ್ಮ, ಬಲಮುರಿ ಶ್ರೀ ಈಶ್ವರ ದೇವಾಲಯ ಅಧ್ಯಕ್ಷ ಕೊಂಗೀರಂಡ ತಮ್ಮಯ್ಯ, ವೀರಾಜಪೇಟೆ ಶ್ರೀ ಗಾಯತ್ರಿ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಶ್ರೀನಿವಾಸ ಗಿರಿ ಹಾಜರಿದ್ದರು.
ಮೂರ್ನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಾಲಯ ಅರ್ಚಕ ಮಹಾಬಲೇಶ್ವರ ಭಟ್ ಧಾರ್ಮಿಕ ಪ್ರವಚನ ನೀಡಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಗಣಹೋಮ, ರುದ್ರಾಭಿಷೇಕ ಪೂಜಾ ಕಾರ್ಯಗಳು ನಡೆಯಿತು.
ಚೆಯ್ಯಂಡ ಸತ್ಯ ಸ್ವಾಗತಿಸಿ, ಶಿಕ್ಷಕಿ ಹೆಚ್.ಜಿ. ಸಾವಿತ್ರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.