ಮಡಿಕೇರಿ, ಡಿ. 15: ಐಗೂರು ಮಸೀದಿಯಲ್ಲಿ ಕುರ್‍ಆನ್ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ಧರಣೇಶ್ ಜೆಡಿಎಸ್‍ಗೆ ಸೇರಿದವನಲ್ಲವೆಂದು ಸ್ಪಷ್ಟಪಡಿಸಿರುವ ಮಡಿಕೇರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಸಿ.ಎಲ್. ವಿಶ್ವ, ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್ ಅವರು ಮಾಡಿರುವ ಆರೋಪವನ್ನು ಖಂಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಲೆಯಾಳಿ ಸಮಾಜದ ಹೆಸರಿನಲ್ಲಿ ಜನಾಂಗದ ಏಳಿಗೆಗಾಗಿ ಕಾರ್ಯನಿರ್ವಹಿಸಬೇಕೇ ಹೊರತು, ಇತರ ರಾಜಕೀಯ ಪಕ್ಷಗಳ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಬಾರದು ಎಂದರು.

ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಹೆಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜಿಲ್ಲೆಯ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸುವದಾಗಿ ತಿಳಿಸಿದ ವಿಶ್ವ, ಜಿಲ್ಲಾ ಉಸ್ತುವಾರಿ ಸಚಿವರು ನಡೆಸಿದ ಕೆಡಿಪಿ ಸಭೆÉಗೆ ಶಾಸಕರುಗಳಾದಿಯಾಗಿ ಬಿಜೆಪಿ ಪ್ರತಿನಿಧಿಗಳು ಗೈರು ಹಾಜರಾದ ಬಗ್ಗೆ ಅಸಮಾಧಾನ ವ್ಯಕ್ತÀಪಡಿಸಿದರು.

ಸೋಮವಾರಪೇಟೆ ತಾಲೂಕಿನಲ್ಲಿ ಮೂವರು ರೈತರು ಸಾಲದ ಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ರೀತಿಯ ಅನೇಕ ಸಮಸ್ಯೆಗಳು ಜಿಲ್ಲೆಯಲ್ಲಿದ್ದು, ಇದರ ಪರಿಹಾರಕ್ಕಾಗಿ ಕೆಡಿಪಿ ಸಭೆÉಯಲ್ಲಿ ಚರ್ಚೆ ಮಾಡುವದನ್ನು ಬಿಟ್ಟು ಗೈರು ಹಾಜರಾಗುವ ಮೂಲಕ ಕ್ಷುಲ್ಲಕ ರಾಜಕಾರಣ ಮಾಡಲಾಗಿದೆ ಎಂದು ಆರೋಪಿಸಿದರು. ರೈತರ ಸಾಲ ಮನ್ನಾ ಮಾಡಬೇಕೆಂದು ಒತ್ತಾಯಿಸಿ ಮಾಜಿ ಸಚಿವ ಬಿ.ಎ. ಜೀವಿಜಯ ಮತ್ತು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸಂಕೇತ್ ಪೂವಯ್ಯ ನೇತೃತ್ವದಲ್ಲಿ ಸದ್ಯದಲ್ಲೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುವದಾಗಿ ಅಧಿಕೃತ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ಸಿ.ಎಲ್. ವಿಶ್ವ ತಿಳಿಸಿದರು.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ ಅವರೇ ಖುದ್ದು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಬಿ.ಎ. ಜೀವಿಜಯ ಅವರಲ್ಲಿ ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ಜೀವಿಜಯ ಅವರೇ ಚುನಾವಣೆಯಲ್ಲಿ ಪಕ್ಷವನ್ನು ಪ್ರತಿನಿಧಿಸಿ ಸ್ಪರ್ಧಿಸಲಿದ್ದಾರೆ ಎಂದರು.

ಪಕ್ಷದ ಮಡಿಕೇರಿ ತಾಲೂಕು ಅಧ್ಯಕ್ಷ ಮನೋಜ್ ಬೋಪಯ್ಯ ಮಾತನಾಡಿ, ಕಳೆದ ಮೂರು ನಾಲ್ಕು ವರ್ಷಗಳ ಅವಧಿಯಲ್ಲಿ ಕೊಡಗಿನಲ್ಲಿ ಟಿಪ್ಪು ಜಯಂತಿ ಘಟನಾವಳಿಗಳೊಂದಿಗೆ ಮತೀಯ ವಿಚಾರಗಳಷ್ಟೆ ಪ್ರಮುಖವಾಗುತ್ತಿದ್ದು, ಅಭಿವೃದ್ಧಿಯ ವಿಚಾರಗಳು ತೆರೆ ಮರೆಗೆ ಸರಿಯುತ್ತಿರುವದು ಕಳವಳಕಾರಿ ಎಂದರು.

ಗೋಷ್ಠಿಯಲ್ಲಿ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಪಕ್ಷದ ವಕ್ತಾರ ಎ.ಜೆ. ಕೃಷ್ಣಪ್ಪ, ಐಗೂರು ಪಂಚಾಯಿತಿ ಸದಸ್ಯ ಗೋಪಾಲಕೃಷ್ಣ ಹಾಗೂ ಪ್ರಮುಖರಾದ ಶಿವದಾಸ್ ಹಾಗೂ ಕ್ರಿಸ್ಟೋಫರ್ ಉಪಸ್ಥಿತರಿದ್ದರು.