ಕುಶಾಲನಗರ, ಜು 16: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಲವು ಸಚಿವರು ದ್ವೇಷದ ರಾಜಕಾರಣ ಬಿಡುವದರೊಂದಿಗೆ ರಾಜ್ಯದಲ್ಲಿ ಅಧಿಕಾರಿಗಳ ವಿಶ್ವಾಸ ಪಡೆಯುವಲ್ಲಿ ಚಿಂತನೆ ಹರಿಸಬೇಕಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ. ಅವರು ಆತ್ಮಹತ್ಯೆಗೆ ಶರಣಾದ ಡಿವೈಎಸ್ಪಿ ಎಂ.ಕೆ. ಗಣಪತಿ ಅವರ ರಂಗಸಮುದ್ರದ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ಅಧಿಕಾರಿಗಳು ಆತ್ಮಹತ್ಯೆಯ ಹಾದಿಯಲ್ಲಿದ್ದಾರೆ. ಸರಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು. ಡಿವೈಎಸ್ಪಿ ಗಣಪತಿ ಆತ್ಮಹತ್ಯೆಗೆ ಮುನ್ನ ನೀಡಿದ ಹೇಳಿಕೆ ಇದಕ್ಕೆ ಸಾಕ್ಷಿ ಎಂದರಲ್ಲದೆ, ರಾಜ್ಯದಲ್ಲಿ ಓರ್ವ ಅಧಿಕಾರಿಯನ್ನು ಎರಡು ವರ್ಷದ ಅವಧಿಯಲ್ಲಿ 24 ಕಡೆಗೆ ವರ್ಗಾಯಿಸಿದ ಉದಾಹರಣೆಗಳಿದ್ದು, ಈ ಮೂಲಕ ನ್ಯಾಯಕ್ಕಾಗಿ ಪರಿ ತಪಿಸುವ ಪರಿಸ್ಥಿತಿಯಲ್ಲಿ ಅಧಿಕಾರಿಗಳು ಕೆಲಸ ನಿರ್ವಹಿಸ ಬೇಕಾಗಿದೆ ಎಂದರು.
ಗಣಪತಿ ಅವರ ಪ್ರಕರಣದ ಹಿನೆÀ್ನಲೆಯಲ್ಲಿ ಸಿಐಡಿ ಅಧಿಕಾರಿಗಳು ಸತ್ಯಾಂಶವನ್ನು ಹೊರಗೆಡಹಲೇ ಬೇಕಾಗಿದೆ.
ಇಲ್ಲದಿದ್ದಲ್ಲಿ ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗುವ ಪರಿಸ್ಥಿತಿ ಉಂಟಾಗಲಿದೆ ಎಂದರು.
ಈ ಪ್ರಕರಣದಲ್ಲಿ ರಾಜಕೀಯ ರಹಿತವಾಗಿ ಎಲ್ಲರೂ ಅವರ ಕುಟುಂಬದೊಂದಿಗೆ ಕೈಜೋಡಿಸ ಬೇಕೆಂದು ಕರೆ ನೀಡಿದ ಅವರು, ಬಿಜೆಪಿ ಕುಟುಂಬದ ಜೊತೆಗೆ ಇದೆ ಎಂದು ಭರವಸೆ ನೀಡಿದರು.
ವಿಧಾನಮಂಡಲ ಅಧಿವೇಶನ ವನ್ನು ಮಧ್ಯದಲ್ಲಿಯೇ ಮೊಟಕು ಗೊಳಿಸುವ ಶಂಕೆಯಿದ್ದು, ಶುಕ್ರವಾರ ದಿನದ 4 ನಿಮಿಷ ಅವಧಿಯಲ್ಲಿ 4 ವಿಧೇಯಕಗಳನ್ನು ಮಂಡನೆ ಮಾಡಿರುವದು ಇದಕ್ಕೆ ಪುಷ್ಟಿ ನೀಡುತ್ತಿದೆ ಎಂದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ, ರಾಜ್ಯದ ಸ್ಥಿತಿಗತಿ ಹಾಗೂ ಗೃಹ ಇಲಾಖೆಯ ಪ್ರಕರಣಗಳ ಬಗ್ಗೆ ಕೇಂದ್ರ ಸರಕಾರಕ್ಕೆ ಮಾಹಿತಿ ಒದಗಿಸ ಲಾಗುವದು. ಈ ತಿಂಗಳ 18 ರಿಂದ ಆರಂಭವಾಗಲಿರುವ ಪಾರ್ಲಿಮೆಂಟ್ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗುವದೆಂದರು.
ಗಡಿಯಲ್ಲಿ ಸ್ವಾಗತ
ಮಧ್ಯಾಹ್ನ 3.30 ಕ್ಕೆ ಆಗಮಿಸಿದ ಶೋಭಾ ಕರಂದ್ಲಾಜೆ ಅವರನ್ನು ಕೊಪ್ಪ ಕಾವೇರಿ ಪ್ರತಿಮೆ ಬಳಿ ಕೊಡಗು ಜಿಲ್ಲಾ ಬಿಜೆಪಿ ಪ್ರಮುಖರು ಮತ್ತು ಕಾರ್ಯಕರ್ತರು ಹೂಗುಚ್ಚ ನೀಡಿ ಬರಮಾಡಿಕೊಂಡರು. ಈ ಸಂದರ್ಭ ಕೊಡಗು ಜಿಲ್ಲಾ ಜಿಜೆಪಿ ಅಧ್ಯಕ್ಷ ಅಪ್ಪಚಟ್ಟೋಳಂಡ ಮನು ಮುತ್ತಪ್ಪ, ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ರೀನಾ ಪ್ರಕಾಶ್, ಕುಶಾಲನಗರ ಪಟ್ಟಣ ಪಂಚಾಯಿತಿ ಸದಸ್ಯರಾದ ಹೆಚ್.ಎಂ. ಮಧು ಸೂದನ್, ಡಿ.ಕೆ. ತಿಮ್ಮಪ್ಪ, ಕುಶಾಲನಗರ ಘಟಕದ ಅಧ್ಯಕ್ಷ ಕೆ.ಜಿ. ಮನು, ಪ್ರಧಾನ ಕಾರ್ಯದರ್ಶಿ ಹೆಚ್.ಡಿ. ಶಿವಾಜಿರಾವ್, ಮಹಿಳಾ ಘಟಕದ ಅಧ್ಯಕ್ಷೆ ಸರಳಾ ರಾಮಣ್ಣ, ಯುವ ಮೋರ್ಚಾದ ಅಧ್ಯಕ್ಷ ಕಾಳನ ರವಿ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಎಂ.ಎನ್. ಕೊಮಾರಪ್ಪ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಂ.ಡಿ. ಕೃಷ್ಣಪ್ಪ, ಹಿಂದುಳಿದ ವರ್ಗಗಳ ತಾಲೂಕು ಕಾರ್ಯದರ್ಶಿ ದೇವರಾಜ್, ಪ್ರಮುಖರಾದ ಬಿ.ಬಿ. ಭಾರತೀಶ್, ಕಾಂತಿ ಸತೀಶ್, ಮಧು ದೇವಯ್ಯ, ಲೋಕೇಶ್, ಭಾಸ್ಕರ್ ನಾಯಕ್, ನಿಡ್ಯಮಲೆ ದಿನೇಶ್, ಪಟ್ಟಡ ಪ್ರಕಾಶ್, ಹೆಚ್.ಎನ್. ರಾಮಚಂದ್ರ, ವೈಶಾಖ್, ಪ್ರವೀಣ್, ವಿ.ಡಿ. ಪುಂಡರೀಕಾಕ್ಷ, ಜಿ.ಎಲ್. ನಾಗರಾಜ್ ಮತ್ತಿತರರು ಇದ್ದರು.