ಮಡಿಕೇರಿ, ಸೆ. 13: ಒಂದೆಡೆ ವಿಜೃಂಭಣೆಯೊಂದಿಗೆ 70 ಸ್ವಾತಂತ್ರ್ಯೋತ್ಸವವನ್ನು ಆಚರಿಸಿದ್ದರೆ, ಇನ್ನೊಂದೆಡೆ ದೇಶ ದ್ರೋಹಿಗಳು ಹುಟ್ಟುತ್ತಿದ್ದಾರೆ. ಇವರನ್ನು ನಶಿಸಿ ಹಾಕುವ ಕೆಲಸ ಮಾಡಬೇಕಾಗಿದೆ.

ಈ ನಿಟ್ಟಿನಲ್ಲಿ ಯುವ ಪೀಳಿಗೆ ಪಾತ್ರ ಬಹುಮುಖ್ಯವಾದುದು ಎಂದು ರಾಜ್ಯ ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ ಬಸವರಾಜು ಇಂಕಟ್ಟಿ ಹೇಳಿದರು.

ಭಾಗಮಂಡಲ ಗೌಡ ಸಮಾಜದಲ್ಲಿ ನಡೆದ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಜವಾಬ್ದಾರಿಯನ್ನು ತೆಗೆದುಕೊಂಡು ಉತ್ತಮ ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿದೆ. ದೇಶದ ಪ್ರಧಾನಿ ಇತರ ದೇಶಗಳಿಗೆ ಸ್ನೇಹ ಹಸ್ತ ಚಾಚಿ ದೇಶದ ಶಕ್ತಿಯನ್ನು ತೋಡಿಸುತ್ತಿದ್ದಾರೆ. ರಾಜ್ಯದ ಕಾಂಗ್ರೆಸ್ ದುರಾಡಳಿತದಿಂದಾಗಿ ಇಡೀ ದೇಶ ತಲೆತಗ್ಗಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕಾಳನ ರವಿ ಅವರಿಗೆ ಪಕ್ಷದ ಧ್ವಜವನ್ನು ನೀಡಿ ಮಾತನಾಡಿದ ಶಾಸಕ ಕೆ.ಜಿ. ಬೋಪಯ್ಯ ಅವರು, ರಾಜ್ಯ ಸರಕಾರ ಎಡೆಬಿಡಂಗಿ ಸರಕಾರವಾಗಿದೆ. ಭಾಗ್ಯ ಭಾಗ್ಯ ಎಂದೇಳುವ ಕಾರ್ಯಕ್ರಮ ರಾಜ್ಯದ ಜನತೆಯ ದೌರ್ಭಾಗ್ಯದ ಸರಕಾರವಾಗಿದೆ. ಕಾವೇರಿ ಜನವಿವಾದವನ್ನು ನಿವಾರಣೆ ಮಾಡದೇ ಅಶಾಂತಿಯನ್ನುಂಡು ಮಾಡುವ ಕೆಲಸ ಸರಕಾರದಿಂದ ನಡೆಯುತ್ತಿದೆ ಎಂದು ಆರೋಪಿಸಿದರು.

ದೇಶದ ಭವಿಷ್ಯ ಯುವ ಶಕ್ತಿಯಲ್ಲಿ ಅಡಗಿದ್ದು, ಅದಕ್ಕಾಗಿ ನಾವು ಜಾಗೃತರಾಗಬೇಕು. ಎಲ್ಲರ ನಿರೀಕ್ಷೆಯ ಯಡಿಯೂರಪ್ಪ ಮುಖ್ಯ ಮಂತ್ರಿಯಾಗಬೇಕೆಂಬದು ಕರ್ನಾಟಕದ ಜನರ ಅಪೇಕ್ಷೆಯಾಗಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಮನುಮುತ್ತಪ್ಪ ಮಾತನಾಡಿ, ಭಾರತೀಯ ಜನತಾ ಪಕ್ಷವು ರಾಜಕಾರಣಕ್ಕೆ ಸೀಮಿತವಲ್ಲ. ದೇಶದ ನಿರ್ವಹಣೆಗಾಗಿ ಕೆಲಸ ಮಾಡುತ್ತಿದೆ.

ದೇಶದಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ನೇತ್ರದಾನ ಕಾರ್ಯಕ್ರಮವನ್ನು ಯುವ ಮೋರ್ಚಾದ ವತಿಯಿಂದ ಹಮ್ಮಿಕೊಳ್ಳಲಾಗುವದು ಎಂದರು.

ವೇದಿಕೆಯಲ್ಲಿ ಮಡಿಕೇರಿ ತಾಲೂಕು ಅಧ್ಯಕ್ಷ ಕಿಶೋರ್ ಕುಮಾರ್, ರಾಜ್ಯಯುವ ಮೋರ್ಚಾದ ಖಜಾಂಚಿ ಶಶಾಂಕ್ ಭೀಮಯ್ಯ, ಜಿಲ್ಲಾ ಉಪಾಧ್ಯಕ್ಷ ಸೂರಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕಳಗಿ, ತಾ.ಪಂ. ಅಧ್ಯಕ್ಷೆ ತೆಕ್ಕೆಡೆ ಶೋಭಾ, ಜಿ.ಪಂ. ಸದಸ್ಯೆ ಕವಿತಾ ಪ್ರಭಾಕರ್, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಯುವ ಮೋರ್ಚಾ ಪದಾಧಿಕಾರಿ ಕಿಚ್ಚಿಟ್ಟ ಮಧು ಹಾಗೂ ಇನ್ನಿತರರು ಇದ್ದರು.