(ಕಾಯಪಂಡ ಶಶಿ ಸೋಮಯ್ಯ)
ಮಡಿಕೇರಿ, ಜು. 5: ದೇಶಕ್ಕೆ ಆದಾಯ ತರುವ ಮೂಲಗಳಲ್ಲಿ ಒಂದಾಗಿ ಹೆಚ್ಚು ವಿದೇಶಿ ವಿನಿಮಯ ಗಳಿಸುವ ಬೆಳೆಯಾದ ಕಾಫಿ 2015-16ನೇ ಸಾಲಿನಲ್ಲಿ ದೇಶದಲ್ಲಿ 3.50 ಲಕ್ಷ ಮೆಟ್ರಿಕ್ ಟನ್ಗಳಷ್ಟು ಉತ್ಪಾದನೆಯಾಗಿದೆ. ಕಾಫಿ ಮಂಡಳಿ ವೆಬ್ಸೈಟ್ನಲ್ಲಿ ಪ್ರಕಟಿಸಿರುವ ಮಾಹಿತಿಯಂತೆ 2014-15ರಲ್ಲಿ 3.27 ಲಕ್ಷ ಮೆಟ್ರಿಕ್ ಟನ್ ಕಾಫಿ ಉತ್ಪಾದನೆಯಾಗಿದ್ದರೆ 2015-16ರಲ್ಲಿ 3.50 ಲಕ್ಷ ಮೆಟ್ರಿಕ್ ಟನ್ ಕಾಫಿ ಉತ್ಪಾದಿಸಲ್ಪಟ್ಟಿದೆ. ದೇಶದಲ್ಲಿ ಕರ್ನಾಟಕ, ಕೇರಳ, ತಮಿಳುನಾಡು ಹೆಚ್ಚು ಕಾಫಿ ಉತ್ಪಾದಿಸುವ ರಾಜ್ಯಗಳಾಗಿವೆ. ಇದು ಹೊರತುಪಡಿಸಿದರೆ ಆಂಧ್ರಪ್ರದೇಶ, ಒಡಿಶಾ ಹಾಗೂ ಉತ್ತರ ಈಶಾನ್ಯ ಪ್ರದೇಶದಲ್ಲಿ ಸಾಂಪ್ರದಾಯಿಕವಲ್ಲದಿದ್ದರೂ ಸಣ್ಣ ಪ್ರಮಾಣದಲ್ಲಿ ಕಾಫಿ ಬೆಳೆಯಲಾಗುತ್ತಿದೆ.
ದೇಶದ ಉತ್ಪಾದನೆಯಲ್ಲಿ ಕರ್ನಾಟಕ ರಾಜ್ಯ ಮೊದಲ ಸ್ಥಾನದಲ್ಲಿದ್ದರೆ, ರಾಜ್ಯದಲ್ಲಿ ಕೊಡಗು ಜಿಲ್ಲೆಯದ್ದು ಸಿಂಹಪಾಲು. ಕೊಡಗಿನೊಂದಿಗೆ ಚಿಕ್ಕಮಗಳೂರು ಹಾಗೂ ಹಾಸನದಲ್ಲಿ ಕಾಫಿ ಬೆಳೆಯಲಾಗುತ್ತಿದೆ. 2015-16ರಲ್ಲಿ ಕಾಫಿ ಮಂಡಳಿಯ ಮಾಹಿತಿಯಂತೆ ಕೊಡಗು ಜಿಲ್ಲೆಯಲ್ಲಿ 1.37 ಲಕ್ಷ ಮೆಟ್ರಿಕ್ಟನ್ ಕಾಫಿ ಉತ್ಪಾದಿಸಲ್ಪಟ್ಟಿದೆ. ಕೊಡಗಿನಲ್ಲಿ 21,085 ಮೆಟ್ರಿಕ್ ಟನ್ ಅರೆಬಿಕಾ ಹಾಗೂ 1,16,620 ಮೆಟ್ರಿಕ್ ಟನ್ ರೋಬಸ್ಟಾ ಸೇರಿದಂತೆ ಒಟ್ಟು 1,37,705 ಮೆಟ್ರಿಕ್ ಟನ್ ಕಾಫಿ ಉತ್ಪಾದನೆಯಾಗಿದೆ.
ಚಿಕ್ಕಮಗಳೂರಿನಲ್ಲಿ 42,425 ಮೆ.ಟ. ಅರೆಬಿಕಾ ಹಾಗೂ 41,385 ಮೆ.ಟ. ರೋಬಸ್ಟಾ ಸೇರಿದಂತೆ 83,810 ಮೆ.ಟನ್ ಕಾಫಿ ಬೆಳೆಯಲಾಗಿದ್ದರೆ ನೆರೆಯ ಹಾಸನದಲ್ಲಿ 18,960 ಮೆ.ಟ. ಅರೆಬಿಕಾ ಹಾಗೂ 12,875 ಮೆ.ಟ. ರೋಬಸ್ಟಾ ಸೇರಿದಂತೆ ಒಟ್ಟು 31,825 ಮೆಟ್ರಿಕ್ ಟನ್ ಕಾಫಿ ಉತ್ಪಾದನೆಯಾಗಿದೆ.
ದೇಶದಲ್ಲಿ 3.50 ಲಕ್ಷ ಮೆಟ್ರಿಕ್ ಟನ್ನಲ್ಲಿ ಕರ್ನಾಟಕದ ಪಾಲು 2.53 ಲಕ್ಷ ಮೆಟ್ರಿಕ್ ಟನ್ನಷ್ಟಿದೆ. ಉಳಿದಂತೆ ಕೇರಳದಲ್ಲಿ 68,650 ಹಾಗೂ ತಮಿಳುನಾಡುವಿನಲ್ಲಿ 18,125, ಸಾಂಪ್ರದಾಯಿಕವಾಗಿ ಕಾಫಿ ಬೆಳೆಯದ ಪ್ರದೇಶಗಳಾದ ಆಂಧ್ರ ಪ್ರದೇಶದಲ್ಲಿ 9.100, ಒಡಿಶಾದಲ್ಲಿ 600, ಈಶಾನ್ಯ ಪ್ರದೇಶದಲ್ಲಿ 185 ಮೆಟ್ರಿಕ್ ಟನ್ ಸೇರಿದಂತೆ ದೇಶದಲ್ಲಿ 3.50 ಮೆಟ್ರಿಕ್ ಟನ್ ಕಾಫಿ ಉತ್ಪಾದಿಸಲ್ಪಟ್ಟಿದೆ. ಒಟ್ಟು ಉತ್ಪಾದನೆಯಲ್ಲಿ 1.07 ಲಕ್ಷ ಮೆಟ್ರಿಕ್ ಟನ್ ಅರೆಬಿಕಾ ಕಾಫಿ ಹಾಗೂ 2.42 ಲಕ್ಷ ಮೆಟ್ರಿಕ್ ಟನ್ ರೋಬಸ್ಟಾ ಕಾಫಿಯಾಗಿದೆ.
4.23 ಲಕ್ಷ ಹೆಕ್ಟೇರ್ನಲ್ಲಿ ಕಾಫಿ
2014-15ನೇ ಸಾಲಿನ ಮಾಹಿತಿಯಂತೆ ದೇಶದಲ್ಲಿ ಒಟ್ಟು 4.23 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಬೆಳೆಯಲಾಗುತ್ತಿದೆ. 2.13 ಲಕ್ಷ ಹೆಕ್ಟೇರ್ನಲ್ಲಿ ಅರೆಬಿಕಾ ಹಾಗೂ 2.09 ಲಕ್ಷ ಹೆಕ್ಟೇರ್ನಲ್ಲಿ ರೋಬಸ್ಟಾ ಬೆಳೆ ಇದೆ. ಈ ಪೈಕಿ ಕರ್ನಾಟಕ ರಾಜ್ಯವೊಂದರಲ್ಲೇ 1.09 ಲಕ್ಷ ಹೆಕ್ಟೇರ್ನಲ್ಲಿ ಅರೆಬಿಕಾ ಹಾಗೂ 1.21 ಲಕ್ಷ ಹೆಕ್ಟೇರ್ನಲ್ಲಿ ರೋಬಸ್ಟಾ ಸೇರಿದಂತೆ ಒಟ್ಟು 2.30 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಬೆಳೆಯಲಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ 27,969 ಹೆಕ್ಟೇರ್ನಲ್ಲಿ ಅರೆಬಿಕಾ ಹಾಗೂ 76,953 ಹೆಕ್ಟೇರ್ನಲ್ಲಿ ರೋಬಸ್ಟಾ ಸೇರಿದಂತೆ 1,04,922 ಹೆಕ್ಟೇರ್ನಲ್ಲಿ ಕಾಫಿ ಬೆಳೆಯಲಾಗುತ್ತಿದೆ.
ಮುಂದಿನ ಫಸಲಿಗೆ ಧಕ್ಕೆ
ಪ್ರಸಕ್ತ ಸಾಲಿನಲ್ಲಿ ಹವಾಮಾನದಲ್ಲಿ ಉಂಟಾದ ಏರುಪೇರಿನಿಂದಾಗಿ ಮುಂದಿನ ಸಾಲಿನ ಫಸಲಿನ ಮೇಲೆ ಧಕ್ಕೆಯಾಗಿದೆ. ಕಾಫಿಗೆ ಬೇಸಿಗೆಯಲ್ಲಿ ಅಗತ್ಯವಿರುವ ಹೂ ಮಳೆ ಈ ಬಾರಿ ತಡವಾಗಿದ್ದರಿಂದ ಉತ್ಪಾದನೆ ಬಹುತೇಕ ಕುಂಠಿತವಾಗುವದು ಖಚಿತ ಎಂಬದು ಬೆಳೆಗಾರರ ಅಭಿಪ್ರಾಯವಾಗಿದೆ. ಇಡೀ ಜಿಲ್ಲೆಯಲ್ಲಿ ಮಳೆ ತಡವಾದ್ದರಿಂದ ಶೇ. 30ರಷ್ಟು ಉತ್ಪಾದನೆ ಕಡಿಮೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ನೀರು ಹಾಯಿಸಿದವರು ಸ್ವಲ್ಪಮಟ್ಟಿಗೆ ಸುಧಾರಿಸಿಕೊಂಡಿದ್ದರೂ ಬ್ಯಾಕಿಂಗ್ ಇಲ್ಲದಿದ್ದರೆ ನೀರು ಹಾಯಿಸಿದ ತೋಟಗಳಲ್ಲೂ ಶೇ. 10ರಿಂದ 20ರಷ್ಟು ಉತ್ಪಾದನೆ ಕಡಿಮೆಯಾಗಲಿದೆ. ಇನ್ನು ನೀರು ಹಾಯಿಸದ ತೋಟಗಳಲ್ಲಿ ಶೇ. 30ಕ್ಕೂ ಅಧಿಕ ಹೊಡೆತ ಉಂಟಾಗಲಿದೆ ಎಂಬದು ಕಾಫಿ ಬೆಳೆಗಾರರ ಅನುಭವದ ಮಾತಾಗಿದೆ.