ಸೋಮವಾರಪೇಟೆ, ಜ. 6: ಭಾರತದ ಹಾಕಿ ಕ್ಷೇತ್ರದಲ್ಲಿ ಕೊಡಗಿನ ಆಟಗಾರರು ಅದ್ವಿತೀಯ ಸಾಧನೆ ತೋರುತ್ತಿದ್ದು, ದೇಶದ ಹಾಕಿ ಕ್ರೀಡೆಗೆ ಜಿಲ್ಲೆಯ ಕೊಡುಗೆ ಅಪಾರವಾದುದು ಎಂದು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಬಣ್ಣಿಸಿದರು.ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಡಾಲ್ಫಿನ್ಸ್ ಸ್ಫೋಟ್ರ್ಸ್ ಕ್ಲಬ್ ಹಾಗೂ ಹಾಕಿ ಕೂರ್ಗ್ ಆಶ್ರಯದಲ್ಲಿ ಆಯೋಜಿಸಲಾಗಿರುವ ಅಂತಾರ್ರಾಷ್ಟ್ರೀಯ ಹಾಕಿ ಆಟಗಾರ ಎಸ್.ವಿ.ಸುನಿಲ್ ಅವರ ತಂದೆ ದಿ. ವಿಠಲಾಚಾರ್ಯ ಸ್ಮಾರಕ ಜಿಲ್ಲಾ ಮಟ್ಟದ ಆಹ್ವಾನಿತ ತಂಡಗಳ ನಡುವಿನ ಹಾಕಿ ಪಂದ್ಯಾಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವೀರರ ನಾಡು, ಸಂಸ್ಕøತಿ ಸೌಂದರ್ಯದ ಬೀಡು, ಕ್ರೀಡೆಯ ತವರಾದ

ಕೊಡಗು ಜಿಲ್ಲೆಯ ಕ್ರೀಡಾಪಟುಗಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರುತ್ತಿರುವದು ಕೊಡಗಿಗೆ ಹೆಮ್ಮೆಯ ವಿಚಾರವಾಗಿದೆ. ಕ್ರೀಡೆಗೆ ಸರ್ಕಾರದಿಂದ ಸಿಗುತ್ತಿರುವ ಪ್ರೋತ್ಸಾಹ ಸಾಲದಾಗಿದೆ. ತಾನು ಕ್ರೀಡಾ ಸಚಿವನಾಗಿದ್ದ ಸಂದರ್ಭ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆಗೆ ಯೋಜನೆ ರೂಪಿಸಿ ಶೇ.80ರಷ್ಟು ಕಾರ್ಯಗಳು ನಡೆದಿತ್ತು. ನಂತರದ ಸರ್ಕಾರ ಈ ಬಗ್ಗೆ ಚಿಂತಿಸದ ಪರಿಣಾಮ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆ ನೆನೆಗುದಿಗೆ ಬಿದ್ದಿದೆ ಎಂದರು.

ಕ್ರೀಡೆಗಳಿಗೆ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದ್ದರೂ ಈಗಿನ ಸರ್ಕಾರದಿಂದ ಪ್ರೋತ್ಸಾಹವನ್ನು ನಿರೀಕ್ಷಿಸಲು ಸಾಧ್ಯವಾಗುತ್ತಿಲ್ಲ ಎಂದ ರಂಜನ್, ದೇಶದ ವಿವಿಧ ಕ್ರೀಡೆಗಳಲ್ಲಿ ಕೊಡಗಿನ ಶೇ.50ರಷ್ಟು ಕ್ರೀಡಾಪಟುಗಳು ಇರುವದನ್ನು ಕಾಣಬಹುದಾಗಿದೆ. ಸೋಮವಾರಪೇಟೆಯ ಮೈದಾನದಲ್ಲಿ ಆಡಿದ ಹಲವರು ಭಾರತೀಯ ತಂಡವನ್ನು ಪ್ರತಿನಿಧಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಟ್ರೋಫಿಗಳನ್ನು ಅನಾವರಣ ಮಾಡಿದ ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಮಾತನಾಡಿ, ಈಜಿಪ್ಟ್‍ನಲ್ಲಿ ಮನೋರಂಜನೆಗಾಗಿ ಪ್ರಾರಂಭಿಸಲಾದ ಹಾಕಿ ಕ್ರೀಡೆ ನಂತರ ಇಥಿಯೋಪಿಯಾ, ರೋಮ್, ಗ್ರೀಸ್‍ನಲ್ಲಿ ಪ್ರಚಲಿತಗೊಂಡಿತು. 1876ರಲ್ಲಿ ಹಾಕಿಗೆ ನಿಯಮಗಳನ್ನು ಅಳವಡಿಸಲಾಯಿತು. ಪ್ರಥಮವಾಗಿ 1908ರಲ್ಲಿ ಒಲಂಪಿಕ್ಸ್‍ನಲ್ಲಿ ಹಾಕಿ ಸೇರ್ಪಡೆಗೊಂಡಿತು. 6 ದೇಶಗಳು ಹಾಕಿಯಲ್ಲಿ ಪಾಲ್ಗೊಂಡಿದ್ದವು. 1924ರಲ್ಲಿ ಅಂತರ್ರಾಷ್ಟ್ರೀಯ ಹಾಕಿ ಫೆಡರೇಷನ್ ಅಸ್ವಿತ್ವಕ್ಕೆ ಬಂದಿತಲ್ಲದೆ, 1980ರಲ್ಲಿ ಪ್ರಥಮವಾಗಿ ಮಹಿಳೆಯರು ಹಾಕಿ ಕ್ರೀಡೆಯಲ್ಲಿ ಭಾಗವಹಿಸಿದ್ದರು. ಇಂದು ಭಾರತ ತಂಡ ದೇಶದ ಬಲಿಷ್ಠ ಹಾಕಿ ತಂಡಗಳ ಸಾಲಿನಲ್ಲಿ 6ನೇ ಸ್ಥಾನದಲ್ಲಿದೆ ಎಂದು ಹಾಕಿ ಕ್ರೀಡೆಯ ಇತಿಹಾಸದ ಬಗ್ಗೆ ಮಾಹಿತಿ ನೀಡಿದರು.

ಭಾರತೀಯ ತಂಡದಲ್ಲಿ ಜಿಲ್ಲೆಯ ಪಟುಗಳು ಸ್ಥಾನಗಿಟ್ಟಿಸಿರುವದು ಅಭಿನಂದನಾರ್ಹವಾದರೂ, ಹಾಕಿ ಕ್ರೀಡೆಯ ಆಯ್ಕೆಯಲ್ಲಿ ರಾಜಕೀಯ ಹಸ್ತಕ್ಷೇಪ ತೊಲಗಿ ವೈಜ್ಞಾನಿಕತೆಯ ಪಾರದರ್ಶಕ ಆಯ್ಕೆ ಪ್ರಕ್ರಿಯೆ ನಡೆದರೆ ಭಾರತ ತಂಡದ 11 ಸ್ಥಾನವನ್ನೂ ಕೊಡಗಿನವರೇ ಪಡೆಯಲಿದ್ದಾರೆ ಎಂದರು. ಗ್ರಾಮೀಣ ಭಾಗದಲ್ಲಿ ಹಾಕಿ ಪಂದ್ಯಾವಳಿ ಆಯೋಜಿಸಿರುವ ಡಾಲ್ಫ್ಪೀನ್ಸ್ ಸ್ಪೋಟ್ರ್ಸ್ ಕ್ಲಬ್‍ನ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಮಾತನಾಡಿ, ಸೋಮವಾರಪೇಟೆಯಲ್ಲಿ ಸಿಂಥೆಟಿಕ್ ಹಾಕಿ ಟರ್ಫ್ ಮೈದಾನ ನಿರ್ಮಾಣವಾದರೆ ಕ್ರೀಡಾಪಟುಗಳಿಗೆ ಇನ್ನಷ್ಟು ಪ್ರೋತ್ಸಾಹ ಲಭಿಸಲಿದೆ ಎಂದರು. ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್ ಹಾಗೂ ಸದಸ್ಯೆ ತಂಗಮ್ಮ ಅವರುಗಳು ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಂದ್ಯಾವಳಿಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾಲ್ಫೀನ್ಸ್ ಸ್ಪೋಟ್ರ್ಸ್ ಕ್ಲಬ್‍ನ ಅಧ್ಯಕ್ಷ ಹೆಚ್.ಎನ್. ಅಶೋಕ್ ವಹಿಸಿದ್ದರು. ವೇದಿಕೆಯಲ್ಲಿ ಬ್ಲೂಸ್ಟಾರ್ ಹಾಕಿ ಸಂಸ್ಥೆಯ ಮಾಜೀ ಅಧ್ಯಕ್ಷ ಬಿ.ಎಂ. ಸುರೇಶ್, ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಎಸ್. ಮಹೇಶ್, ಹಿರಿಯ ಹಾಕಿ ಆಟಗಾರ, ಮೇಘ ಡ್ರೈವಿಂಗ್ ಸ್ಕೂಲ್‍ನ ಮಂಜುನಾಥ್, ಹಾಕಿ ಕೂರ್ಗ್ ಉಪಾಧ್ಯಕ್ಷ ಸುಬ್ಬಯ್ಯ ಅವರುಗಳು ಉಪಸ್ಥಿತರಿದ್ದರು.

ಹಾಕಿ ಕೂರ್ಗ್‍ನ ನೋಂದಾಯಿತ ತಂಡಗಳಾದ ಆತಿಥೇಯ ಡಾಲ್ಫಿನ್ಸ್ ಸ್ಪೋಟ್ರ್ಸ್ ಕ್ಲಬ್, ಬಿಬಿಸಿ ಗೋಣಿಕೊಪ್ಪ, ಯುಎಸ್‍ಸಿ ಬೇರಳಿನಾಡು ರೆಡ್, ಚಾರ್ಮರ್ಸ್ ಮಡಿಕೇರಿ, ಹಾಕತ್ತೂರು ಸ್ಪೋಟ್ರ್ಸ್ ಕ್ಲಬ್, ಟವರ್ಸ್ ವೀರಾಜಪೇಟೆ, ಎಸ್‍ಆರ್‍ಸಿ ಕಾಕೋಟುಪರಂಬು, ಎಂಆರ್‍ಎಫ್ ಮೂರ್ನಾಡು ತಂಡಗಳು ಭಾಗವಹಿಸಿವೆ.

ಸೋಮವಾರಪೇಟೆಯ ಮೈದಾನದಲ್ಲಿ ಹಾಕಿ ಅಭ್ಯಾಸ ನಡೆಸಿ ಇದೀಗ ಭಾರತೀಯ ಹಾಕಿ ತಂಡದಲ್ಲಿ ಪ್ರಮುಖ ಆಟಗಾರನ ಸ್ಥಾನ ಪಡೆದಿರುವ ಎಸ್.ವಿ. ಸುನಿಲ್ ಅವರು ತಮ್ಮ ತಂದೆ ವಿಠಲಾಚಾರ್ಯ ಅವರ ಸ್ಮರಣಾರ್ಥ ಈ ವರ್ಷದ ಕ್ರೀಡಾಕೂಟಕ್ಕೆ ಮುಖ್ಯ ಪ್ರಾಯೋಜಕತ್ವ ಒದಗಿಸಿದ್ದಾರೆ.

ಇಂದಿನಿಂದ ಪ್ರಾರಂಭವಾಗಿರುವ ಹಾಕಿ ಪಂದ್ಯಾಟ ತಾ. 8ರವರೆಗೆ ನಡೆಯಲಿದ್ದು, ಅಂದು ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ.