ವೀರಾಜಪೇಟೆ, ಸೆ. 29: ಪ್ರತಿಯೊಬ್ಬ ಭಾರತೀಯನು ತಮ್ಮ ಜೀವನದೊಂದಿಗೆ ದೇಶದ ಪ್ರಗತಿಗೆ ಕಾನೂನನ್ನು ಪಾಲಿಸಲು ಮುಂದಾಗಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಮೋಹನ್ ಪ್ರಭು ಹೇಳಿದರು.

ತಾಲೂಕು ಕಾನೂನು ಸೇವೆಗಳ ಸಮಿತಿ, ವೀರಾಜಪೇಟೆ ವಕೀಲರ ಸಂಘದ ಆಶ್ರಯದಲ್ಲಿ ಪಟ್ಟಣದ ಶಿವಕೇರಿ ಅಂಗನವಾಡಿ ಕೇಂದ್ರದ ಸಭಾಂಗಣದಲ್ಲಿ ಬುಡಕಟ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಜನಾಂಗದವರಿಗೆ ಸೌಲಭ್ಯ ಮತ್ತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಮೋಹನ್ ಪ್ರಭು ಅವರು ಕಾನೂನಿನ ಪರಿಮಿತಿಯಲ್ಲಿ ಯಾವದೇ ವ್ಯವಹಾರವನ್ನು ಮಾಡಬೇಕು. ಬಡ ಕಾರ್ಮಿಕರಿಗೂ ಸರ್ಕಾರ ಎಲ್ಲಾ ಸವಲತ್ತುಗಳನ್ನು ನೀಡುತ್ತಿದ್ದು, ಪ್ರತಿ ತಾಲೂಕಿನಲ್ಲೂ ನ್ಯಾಯಾಲಯದ ಮೂಲಕ ಕಾನೂನು ಅರಿವು ಕಾರ್ಯಕ್ರಮ ಗಳನ್ನು ಆಯೋಜಿಸಲಾಗುತ್ತಿದ್ದು ಇದರ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳು ವಂತಾಗಬೇಕು ಹಾಗೂ ಬಡ ಕುಟುಂಬದ ಕಾರ್ಮಿಕರ ಮಕ್ಕಳಿಗೆ ತಪ್ಪದೆ ಶಿಕ್ಷಣ ನೀಡಿ ಅವರು ಕೂಡ ಎಲ್ಲರಂತೆ ಉನ್ನತ ಹುದ್ದೆಗೇರು ವಂತಾಗಬೇಕು ಎಂದರು.

ಪಟ್ಟಣ ಪಂಚಾಯಿತಿ ಸದಸ್ಯ ಹೆಚ್.ಆರ್. ಚಂದ್ರಶೇಖರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಹಿರಿಯ ಸಿವಿಲ್ ನ್ಯಾಯಾಧೀಶÀ ಡಿ.ಆರ್. ಜಯಪ್ರಕಾಶ್, ಸಿವಿಲ್ ನ್ಯಾಯಾಧೀಶೆ ಕೆ. ಶರ್ಮಿಳಾ ಕಾಮತ್ ಮಾತನಾಡಿದರು. ಪ.ಪಂ.ನ ಮಾಜಿ ಅಧ್ಯಕ್ಷ ವಿ.ಕೆ. ಸತೀಶ್ ಕುಮಾರ್, ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.

ವಕೀಲ ಕೆ.ವಿ. ಸುನಿಲ್ ಅವರು ಬುಡಕಟ್ಟು ಜನಾಂಗದವರಿಗೆ ಸೌಲಭ್ಯ ಮತ್ತು ಕಾನೂನಿನ ಅರಿವು ಎಂಬ ವಿಷಯದ ಬಗ್ಗೆ ಮಾತನಾಡಿ ಪ.ಜಾತಿ ಮತ್ತು ಪಂಗಡದವರು ಸರ್ಕಾರದ ಸವಲತ್ತುಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ತಮ್ಮ ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗೂ ಇನ್ನಿತರ ಸೌಲತ್ತುಗಳನ್ನು ಪಡೆಯುವ ಮೂಲಕ ಉತ್ತಮ ಶಿಕ್ಷಣ ನೀಡುವಂತಾಗಬೇಕು ಎಂದು ತಮ್ಮ ಉಪನ್ಯಾಸದಲ್ಲಿ ಹೇಳಿದರು. ಚಿಕ್ಕ ಮಾದಯ್ಯ ಸ್ವಾಗತಿಸಿದರು. ಕೆ.ಸತೀಶ್ ವಂದಿಸಿದರು.