ಮಡಿಕೇರಿ, ಆ. 26: ಬೆಂಗಳೂರಿನ ಥಿಯೋಲಾಜಿಕಲ್ ಕಾಲೇಜು ಸಭಾಂಗಣದಲ್ಲಿ ಆಮ್ನೆಸ್ಟಿ ಸಂಘಟನೆ ಆಯೋಜಿಸಿದ ಬ್ರೋಕನ್ ಫ್ಯಾಮಿಲೀಸ್ ಕಾರ್ಯಕ್ರಮದಲ್ಲಿ ದೇಶದ್ರೋಹದ ಘೋಷಣೆಗಳನ್ನು ಕೂಗಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಆಮ್ನೆಸ್ಟಿ ವಿರುದ್ಧ ಕ್ರಮ ಕೈಗೊಳ್ಳುವದು ವಿಳಂಬವಾಗುತ್ತಿರುವ ದನ್ನು ವಿರೋಧಿಸಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿರುವದು ತೀವ್ರ ಖಂಡನೀಯ ಎಂದಿರುವ ಜಿಲ್ಲಾ ಬಿಜೆಪಿ ದೇಶದ್ರೋಹದ ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಬೇಕು. ಅಲ್ಲದೇ ದೇಶವಿರೋಧಿ ಘೋಷಣೆ ಕೂಗಿರುವವರನ್ನು ಕೂಡಲೇ ಬಂಧಿಸಬೇಕು, ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಗೆ ಸವಾಲು ಹಾಕುತ್ತಿರುವ ಕುರಿತು ಮೂಡಿರುವ ಆತಂಕವನ್ನು ದೂರಮಾಡಬೇಕು, ವಿದ್ಯಾರ್ಥಿಗಳ ಮೇಲೆ ಅಮಾನುಷ ವಾಗಿ ವರ್ತಿಸಿದ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ ಛಿಕಾನೂನು ಕ್ರಮ ಜರುಗಿಸಬೇಕು, ತನಿಖೆ ಶೀಘ್ರವಾಗಿ ಪೂರ್ಣಗೊಂಡು ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭ ಜಿಲ್ಲಾ ಬಿಜೆಪಿ ಅಧ್ಯಕ್ಷ ಎ.ಕೆ. ಮನು ಮುತ್ತಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂತಿ ಸತೀಶ್, ಬಾಲಚಂದ್ರ ಕಳಗಿ, ಮಡಿಕೇರಿ ತಾಲೂಕು ಅಧ್ಯಕ್ಷ ಕಿಶೋರ್‍ಕುಮಾರ್, ನಗರ ಅಧ್ಯಕ್ಷ ಮಹೇಶ್ ಜೈನಿ, ಪ್ರಧಾನ ಕಾರ್ಯದರ್ಶಿ ಅಪ್ಪಣ್ಣ, ಮಹಿಳಾ ಘಟಕದ ನಗರ ಅಧ್ಯಕ್ಷೆ ಅನಿತಾ ಪೂವಯ್ಯ, ತಾಲೂಕು ಯುವ ಮೋರ್ಚಾ ಅಧ್ಯಕ್ಷ ಧನಂಜಯ, ಹಿಂದುಳಿದ ಘಟಕದ ಅಧ್ಯಕ್ಷ ಸುಕುಮಾರ್, ಜಿ.ಪಂ. ಅಧ್ಯಕ್ಷ ಹರೀಶ್, ಪ್ರಮುಖರಾದ ಸಿ.ಕೆ. ಬಾಲಕೃಷ್ಣ, ಮಲ್ಲಂಡ ಮಧು ದೇವಯ್ಯ, ಕನ್ನಂಡ ಸಂಪತ್ ಹಾಗೂ ಇನ್ನಿತರರು ಇದ್ದರು.