ಸೋಮವಾರಪೇಟೆ, ಜ.27: ದೇಶದ ರಕ್ಷಣೆಗೆ ಹಗಲಿರುಳೆನ್ನದೆ ದುಡಿದ ಯೋಧರಿಗೆ ಅವರು ನಿವೃತ್ತರಾದ ನಂತರವೂ ಸಮಾಜ ಗೌರವ ನೀಡುತ್ತದೆ. ನಿವೃತ್ತ ಯೋಧರ ಸೇವೆ ಸದಾ ಸ್ಮರಣೀಯ ಎಂದು ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಮೆಚ್ಚುಗೆ ವ್ಯಕ್ತಪಡಿಸಿದರು.ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಸಮೀಪದ ಸೂರ್ಲಬ್ಬಿ ಸರ್ಕಾರಿ ಮಾದರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಆಟ್‍ಪಾಟ್ ಪಡಿಪು ಸಮಾರೋಪ ಹಾಗೂ ಶಾಲೆಯ ವಾರ್ಷಿಕೋತ್ಸವದ ವೇದಿಕೆಯಲ್ಲಿ ಅಖಿಲ ಕರ್ನಾಟಕ ಪರಿಸರ ಜಾಗೃತಿ ವೇದಿಕೆ ಪ್ರಾಯೋಜಕತ್ವದ ಗ್ರಾಮದ 77 ಮಂದಿ ಮಾಜಿ ಸೈನಿಕರ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸೈನಿಕರ ನಾಡು ಎಂದು ಕರೆಯಲ್ಪಡುವ ಕೊಡಗಿನಲ್ಲಿ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಯೊಂದರಲ್ಲೇ 77 ಮಂದಿ ಮಾಜೀ ಯೋಧರು ಇರುವದು ನಿಜಕ್ಕೂ ಹೆಮ್ಮೆಯ ವಿಚಾರ. ದೇಶ ರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಯೋಧರ ಸೇವೆ ಸ್ಮರಣೀಯ ಎಂದು ಸಂಸದರು ಮೆಚ್ಚುಗೆಯ ನುಡಿಯಾಡಿದರು.
ಗರ್ವಾಲೆ ಗ್ರಾ.ಪಂ. ವ್ಯಾಪ್ತಿಯ ಅಭಿವೃದ್ಧಿಗೆ ಸಂಸದರ ನಿಧಿಯಿಂದ ಅನುದಾನ ಕಲ್ಪಿಸಲಾಗುವದು. ಗ್ರಾಮದಲ್ಲಿ ಬಿಎಸ್‍ಎನ್‍ಎಲ್ ಟವರ್ ನಿರ್ಮಾಣದ ಬೇಡಿಕೆಗೆ ತಕ್ಷಣ ಸ್ಪಂದಿಸಲಾಗುವದು. ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಗರ್ವಾಲೆಯನ್ನು ಒಳಪಡಿಸುವ ಬಗ್ಗೆ ಮನವಿ ಸಲ್ಲಿಕೆಯಾಗಿದ್ದು, ಈ ಬಗ್ಗೆಯೂ ಚಿಂತನೆ ನಡೆಸಲಾಗುವದು ಎಂದು ಭರವಸೆ ನೀಡಿದರು.
ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಗ್ರಾಮಸ್ಥರ ಸಹಕಾರ ಮುಖ್ಯವಾಗಿದ್ದು, ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದರೆ ಎಲ್ಲವೂ ಸಾಧ್ಯ. ಮುಂದಿನ ದಿನಗಳಲ್ಲಿಯೂ ಈ ಭಾಗದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವದು ಎಂದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಮಾತನಾಡಿ, ದೇಶಕ್ಕಾಗಿ ಹೋರಾಡಿದ ಸೈನಿಕರನ್ನು ಗುರುತಿಸಿ ಅವರನ್ನು ಸನ್ಮಾನಿಸುತ್ತಿರುವ ಕಾರ್ಯ
(ಮೊದಲ ಪುಟದಿಂದ) ಶ್ಲಾಘನೀಯ ಎಂದರು. ಅಖಿಲ ಕರ್ನಾಟಕ ಪರಿಸರ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಚಾಮೇರ ದಿನೇಶ್ ಮಾತನಾಡಿ, ವೇದಿಕೆಯ ವತಿಯಿಂದ ಗರ್ವಾಲೆ ಗ್ರಾ.ಪಂ. ವ್ಯಾಪ್ತಿಯ ಕಿಕ್ಕರಳ್ಳಿ, ಗರ್ವಾಲೆ, ಕುಂಬಾರಗಡಿಗೆ, ಹಮ್ಮಿಯಾಲ, ಮುಟ್ಲು, ಸೂರ್ಲಬ್ಬಿ, ಮಂಕ್ಯ ಗ್ರಾಮಗಳ 77 ಮಂದಿ ನಿವೃತ್ತ ಸೈನಿಕರನ್ನು ಸನ್ಮಾನಿಸಲಾಗಿದ್ದು, ಈ ಭಾಗದಲ್ಲಿ 100ಕ್ಕೂ ಅಧಿಕ ಮಂದಿ ಯೋಧರು ಇಂದಿಗೂ ಸೈನ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್, ಐಎನ್‍ಟಿಯುಸಿ ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ, ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯ ಮಾದೇಟಿರ ಬೆಳ್ಯಪ್ಪ, ಗ್ರಾ.ಪಂ. ಉಪಾಧ್ಯಕ್ಷ ಪಳಂಗಪ್ಪ, ಸದಸ್ಯೆ ಮಾಯಮ್ಮ, ಪ್ರಮುಖರಾದ ಗಪ್ಪಣ್ಣ, ಶಿಕ್ಷಕರ ಸಂಘದ ಅಧ್ಯಕ್ಷರುಗಳಾದ ಚೇತನ್, ಮಂಜುನಾಥ್, ಸೋಮಶೇಖರ್, ಧರ್ಮಪ್ಪ, ಪ್ರೇಮ್‍ಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.
ಶಾಲಾ ವಾರ್ಷಿಕೋತ್ಸವ ಅಂಗವಾಗಿ ಏರ್ಪಡಿಸಲಾಗಿದ್ದ ಕಬಡ್ಡಿ ಪಂದ್ಯಾಟದ ಫೈನಲ್ ಪಂದ್ಯದಲ್ಲಿ ಸೂರ್ಲಬ್ಬಿ ತಂಡವನ್ನು ಮಣಿಸಿದ ಹಮ್ಮಿಯಾಲ ತಂಡಕ್ಕೆ ಅತಿಥಿಗಳು ಬಹುಮಾನ ವಿತರಿಸಿದರು. ವಾರ್ಷಿಕೋತ್ಸವ ಅಂಗವಾಗಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.