ಕುಶಾಲನಗರ, ನ 26: ಕನ್ನಡ ನೆಲ ಮತ್ತು ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ದೇಶ ಹಾಗೂ ಭಾಷೆಯ ಅಭಿಮಾನಿಗಳಾಗಬೇಕಿದೆ ಎಂದು ಜನಪದ ತಜ್ಞ ಡಾ.ಪಿ.ಕೆ. ರಾಜಶೇಖರ್ ಹೇಳಿದರು.

ಕುಶಾಲನಗರ ವಿವೇಕಾನಂದ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಾಚೀನ ಭಾಷೆಯಾದ ಕನ್ನಡ ಅತ್ಯಂತ ಸಮೃದ್ಧ ಭಾಷೆಯಾಗಿದೆ. ಕಲೆ, ಸಾಹಿತ್ಯ, ಸಂಗೀತ ಕ್ಷೇತ್ರಗಳಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿದೆ. ಕನ್ನಡದ ನೂರಾರು ಪದಗಳನ್ನು ಗ್ರೀಕರು ಎರವಲು ಪಡೆದು ಬಳಸಿದ ಕಾರಣ ಇಂದಿಗೂ ಕೂಡ ಇಂಗ್ಲೀಷ್ ಪದಗಳಲ್ಲಿ ಕನ್ನಡ ಅಡಕವಾಗಿರುವ ಬಗ್ಗೆ ಉದಾಹರಣೆ ಸಹಿತ ಅವರು ವಿವರಿಸಿದರು.

ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್.ಎನ್. ಶಂಭುಲಿಂಗಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿವೇಕಾನಂದ ಪಿಯು ಕಾಲೇಜು ಪ್ರಾಂಶುಪಾಲ ಟಿ.ವಿ. ಪಂಡರಿನಾಥ ನಾಯ್ಡು, ಮಹಾತ್ಮಾಗಾಂಧಿ ಪದವಿ ಕಾಲೇಜು ಪ್ರಾಂಶುಪಾಲ ಪಿ. ರವೀಂದ್ರಬಾಬು ಇದ್ದರು.

ಇದೇ ಸಂದರ್ಭ ಪಿ.ಕೆ. ರಾಜಶೇಖರ್ ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ವಿದ್ಯಾರ್ಥಿ ಗಳಾದ ಸುಮಂತ್ ಮತ್ತು ಪೂಜಾ ಕನ್ನಡ ರಾಜ್ಯೋತ್ಸವ ಕುರಿತು ಮಾತನಾಡಿದರು. ತೇಜಸ್ವಿನಿ ಮತ್ತು ತಂಡ ಪ್ರಾರ್ಥಿಸಿ, ಶಿಕ್ಷಕಿ ಪೃಥ್ವಿ ಪರಿಚಯ ಮಾಡಿದರು.