*ಸಿದ್ದಾಪುರ, ಆ. 9: ‘ದೇವರ ಆಟ ಬಲ್ಲವರಾರು.., ಹೇಳದೆ ದುಃಖವ ಕೊಡುವ.., ಕೇಳದೆ ಸುಖವ ತರುವ...’ ಇದೊಂದು ಗೀತೆಯಾದರೂ ಸಾಮಾನ್ಯವಾಗಿ ಪ್ರತಿಯೋರ್ವರ ಜೀವನದಲ್ಲಿ ಈ ರೀತಿಯ ಘಟನೆ ನಡೆಯುತ್ತಿರುತ್ತದೆ..,
ನೋವು-ನಲಿವು ಸಾಮಾನ್ಯ.., ಸಾವು-ನೋವು ಅನಿವಾರ್ಯ.., ಹುಟ್ಟು ಸಹಜ.., ಸಾವು ಅಸ್ವಾಭಾವಿಕ ಎಂಬದು ಎಲ್ಲರಿಗೂ ಗೊತ್ತು. ಆದರೂ ನಾವು ವಿಧಿಯನ್ನು ಹಳಿಯುತ್ತೇವೆ. ಅದು ಸಂದರ್ಭಕ್ಕನುಗುಣವಾಗಿ.., ಮನುಷ್ಯ ಸಾಯುತ್ತಾನೆಂದು ತಿಳಿದಿದ್ದರೆ ಅಷ್ಟೇನು ದುಃಖವಾಗುವದಿಲ್ಲ. ಆದರೆ ಇದ್ದಕ್ಕಿದ್ದ ಹಾಗೆ ಸಾವನ್ನಪ್ಪಿದರೆ ಸಹಿಸಲಾಗದು.., ಅಂತದ್ದರಲ್ಲಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ಆರೋಗ್ಯವಂತರಾಗಿ ಗುಣಮುಖರಾಗಿ ಇನ್ನೇನು ಆಸ್ಪತ್ರೆಯಿಂದ ಮನೆಯತ್ತ ಹೆಜ್ಜೆಯಿಡಬೇಕೆನ್ನುವಷ್ಟರಲ್ಲಿ ಸಾವನ್ನಪ್ಪಿದರೆ ಹೇಗಾಗಬೇಡ...? ಇಂತಹ ಒಂದು ಮನಕಲಕುವ ಘಟನೆ ಇಂದು ನಡೆದಿದೆ.
ಅಭ್ಯತ್ಮಂಗಲ ಗ್ರಾಮದ ಮಡ್ತಲೆ ಪೊನ್ನಪ್ಪ ಅವರ ಪುತ್ರ ಮುತ್ತಪ್ಪ (52) ಎಂಬವರು ಆರೋಗ್ಯ ಸರಿ ಇಲ್ಲದ ಕಾರಣ ಕಳೆದ 15 ದಿನಗಳ ಹಿಂದೆ ಮಡಿಕೇರಿಯ ಅಶ್ವಿನಿ ಆಸ್ಪತ್ರೆಗೆ ಆಗಮಿಸಿದ್ದರು. ಅಲ್ಲಿಂದ ಅವರನ್ನು ವೈದ್ಯರ ಶಿಫಾರಸ್ಸಿನ ಮೇರೆಗೆ ಮಂಗಳೂರಿನ ಫಾದರ್ಮುಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಹೊಂದಿಕೊಂಡ ಮುತ್ತಪ್ಪ ಅವರು ಬರಬರುತ್ತಾ ಗುಣಮುಖರಾದರು. ಈ ಹಿನ್ನೆಲೆಯಲ್ಲಿ ಅಲ್ಲಿನ ವೈದ್ಯರು ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದ್ದರು.
ವಿಧಿ ಕರೆಯಿತು
ಇಂದು ಬೆಳಿಗ್ಗೆ ಮುತ್ತಪ್ಪ ಆಸ್ಪತ್ರೆಯಿಂದ ಮನೆಗೆ ತೆರಳುವವರಿದ್ದರು. ಈ ಬಗ್ಗೆ ಎಲ್ಲ ಸಿದ್ಧತೆ ಕೂಡ ಆಗಿತ್ತು. ತಾನು ಗುಣಮುಖರಾಗಿ ಮಂಗಳವಾರ ಮನೆಗೆ ಬರುತ್ತಿರುವದಾಗಿ ಬಂಧುಗಳು, ಸ್ನೇಹಿತರೊಂದಿಗೆ ಸಂತಸದಿಂದ ಹೇಳಿಕೊಂಡಿದ್ದರು. ಆದರೆ ಅಲ್ಲಿ ನಡೆದಿದ್ದೇ ಬೇರೆ.., ವಿಧಿಯಾಟವೇ ಬೇರೆಯಾಗಿತ್ತು. ಸಾಮಗ್ರಿ, ಬಟ್ಟೆ, ಬರೆಗಳನ್ನೆಲ್ಲ ಜೋಡಿಸಿಕೊಂಡು ಕೋಣೆಯಿಂದ ಹೊರಡ ಬೇಕೆನ್ನುವಷ್ಟರಲ್ಲಿ ಮುತ್ತಪ್ಪ ಶೌಚಾಲಯಕ್ಕೆ ತೆರಳಿದ್ದಾರೆ. ಶೌಚಾಲಯಕ್ಕೆ ತೆರಳಿದವರು ಎಷ್ಟು ಹೊತ್ತಾದರೂ ಬಾರದೆ ಇರುವದನ್ನು ಗಮನಿಸಿದ ಅವರ ಪತ್ನಿ ಶೌಚಾಲಯದ ಬಳಿ ತೆರಳಿ ಕರೆದಿದ್ದಾರೆ. ಯಾವದೇ ಉತ್ತರ ಬಾರದಿದ್ದಾಗ ಬಾಗಿಲು ಬಡಿದಿದ್ದಾರೆ. ಆದರೆ ಒಳಗಿನಿಂದ ಚಿಲಕ ಹಾಕಿಕೊಂಡಿದ್ದ ಬಾಗಿಲು ತೆರೆಯಲೇ ಇಲ್ಲ.
ನಂತರ ಆಸ್ಪತ್ರೆಯ ಸಿಬ್ಬಂದಿಗಳಿಗೆ ವಿಷಯ ತಿಳಿಸಿದ ಬಳಿಕ ಆಗಮಿಸಿದ ಸಿಬ್ಬಂದಿಗಳು ಬಾಗಿಲನ್ನು ಮುರಿದು ನೋಡಿದಾಗ ಮುತ್ತಪ್ಪ ಕುಸಿದು ಬಿದ್ದು ಸಾವನ್ನಪ್ಪಿದ್ದರು. ಪರೀಕ್ಷಿಸುವಷ್ಟರಲ್ಲಿ ಅದಾಗಲೇ ಕಾಲನ ಕರೆಗೆ ಓಗೊಟ್ಟು ವಿಧಿವಶರಾಗಿದ್ದರು. ಹೃದಯಾಘಾತವಾಗಿ ಮುತ್ತಪ್ಪ ಸಾವನ್ನಪ್ಪಿದ್ದರು.
ಇತ್ತ ಮುತ್ತಪ್ಪ ಗುಣಮುಖರಾಗಿ ಬರುತ್ತಿದ್ದಾರೆ ಎಂದು ಕಾಯುತ್ತಿದ್ದ ಬಂಧು-ಬಳಗ, ಸ್ನೇಹಿತರು, ಗ್ರಾಮಸ್ಥರಲ್ಲಿ ಶೋಕದ ಛಾಯೆ ಆವರಿಸಿದೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದು, ಅಂತ್ಯಕ್ರಿಯೆ ತಾ. 10 ರಂದು (ಇಂದು) ನಡೆಯಲಿದೆ. -ಅಂಚೆಮನೆ ಸುಧಿ