ಮಡಿಕೇರಿ, ಅ. 6: ಕೊಡಗು ಜಾನಪದ ಪರಿಷತ್ ಆಶ್ರಯದಲ್ಲಿ ವೀರಾಜಪೇಟೆ ತಾಲೂಕು ಜಾನಪದ ಪರಿಷತ್ ಘಟಕದ ವತಿಯಿಂದ ದೇವಣಗೇರಿಯ ಬಿ.ಸಿ. ಪ್ರೌಢ ಶಾಲೆಯ ಆವರಣದಲ್ಲಿ ನಡೆದ ಗ್ರಾಮೀಣ ಜನಪದೋತ್ಸವ ಜಾನಪದ ಕಲೆ, ಸಂಸ್ಕøತಿಯನ್ನು ಬಿಂಬಿಸುವಲ್ಲಿ ಯಶಸ್ವಿಯಾಯಿತು.
ದೇವಣಗೇರಿಯ ಬಿ.ಸಿ. ಪ್ರೌಢಶಾಲೆಯ ಆಡಳಿತ ಮಂಡಳಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ದೇವಣಗೇರಿ ಪ್ಲಾಂಟರ್ಸ್ ಕ್ಲಬ್, ಚೆಂಬೆಬೆಳಿಯೂರು ಕೊಡವ ಅಸೋಸಿಯೇಷನ್, ಚೆಂಬೆಬೆಳಿ ಯೂರು ಮಹಿಳಾ ಸಮಾಜ, ದೇವಣಗೇರಿ ಹಾಗೂ ಚೆಂಬೆಬೆಳಿಯೂರು ಸ್ತ್ರೀ ಶಕ್ತಿ ಸಂಘ, ಬೆಕ್ಕೆ ಸೊಡ್ಲೂರು ಶ್ರೀ ಮಂದತವ್ವ ಕೊಡವ ಸಾಂಸ್ಕøತಿಕ ಟ್ರಸ್ಟ್ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಏರ್ಪಡಿಸಲಾಗಿದ್ದ ಗ್ರಾಮೀಣ ಜಾನಪದೋತ್ಸವಕ್ಕೆ ಕರ್ನಾಟಕ ಜಾನಪದ ಪರಿಷತ್ ಗೌರವ ಕಾರ್ಯದರ್ಶಿ ಪ್ರೊ. ಎಚ್. ಆರ್. ರಾಜೇಗೌಡ ಅವರು ಶಾಲಾ ಆವರಣದಲ್ಲಿ ಕಲ್ಪವೃಕ್ಷವನ್ನು ನೆಡುವ ಮೂಲಕ ಬಿ.ಸಿ. ಪ್ರೌಢಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಮುಕ್ಕಾಟಿರ ಸುನಿಲ್ ನಾಣಯ್ಯ ವಾಲಗ ಊದುವ ಮೂಲಕ ಚಾಲನೆ ನೀಡಿದರು.
ಜಾನಪದೋತ್ಸವದ ಪ್ರಯುಕ್ತ ಸೋಮೆಯಂಡ ಗಣಿ ನಂಜಪ್ಪ ತಂಡದಿಂದ ಬಾಳೋಪಾಟ್, ಬಿ.ಸಿ. ಪ್ರೌಢಶಾಲೆ ಮಕ್ಕಳಿಂದ ಉಮ್ಮತಾಟ್, ಯರವ ಕುಣಿತ, ಬೆಕ್ಕೆಸೊಡ್ಲೂರುವಿನ ಸುಳ್ಳಿಮಾಡ ಗೌರಿ ನಂಜಪ್ಪ ತಂಡದಿಂದ ಕೋಲಾಟ, ಬೀಕಚಂಡ ಪುಟ್ಟ ಬೆಳ್ಯಪ್ಪ, ತಂಡದಿಂದ ನರಿಪೂದ, ಅಜ್ಜಪ್ಪ, ತಾಯವ್ವ ಕೋಲ, ಚೆಂಬೆಬೆಳಿಯೂರು ಹೆಚ್. ಮಂಜು ತಂಡದಿಂದ ದೋಳ್ ಪಾಟ್, ಕುಡಿಯರ ಗೋಪಮ್ಮ ತಂಡದಿಂದ ಉರ್ಟಿಕೊಟ್ಟ್ ಆಟ್, ಬುಗರಿ ಆಟ, ಕುಂಟೆಬಿಲ್ಲೆ ಆಟ ಹಾಗೂ ವಾಲಗತಾಟ್ ಸ್ಪರ್ಧೆಗಳು ನಡೆದು ಜಾನಪದ ಕಲಾಭಿಮಾನಿಗಳನ್ನು ರಂಜಿಸಿದವು.ಸಭಾ ಕಾರ್ಯಕ್ರಮ
ಕಲಾ ಪ್ರದರ್ಶನ ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಬಿ.ಸಿ. ಪ್ರೌಢಶಾಲೆಯ ಕಾರ್ಯನಿರ್ವಾಹಕರಾದ ಕರ್ನಂಡ ಎನ್. ಬೊಳ್ಳಮ್ಮ ಉದ್ಘಾಟಿಸಿದರು. ಮುಖ್ಯ ಭಾಷಣ ಮಾಡಿದ ಜಾನಪದ ಪರಿಷತ್ನ ರಾಜ್ಯ ಗೌರವ ಕಾರ್ಯದರ್ಶಿ ಪ್ರೊ. ರಾಜೇಗೌಡ ಅವರು, ಹಸನ್ಮುಖ ನಡವಳಿಕೆಯ ಮೂಲಕ ಕೊಡಗಿನ ಜನತೆ ವಿಶಿಷ್ಟವಾಗಿ ರಾಜ್ಯದಲ್ಲಿ ಪರಿಗಣಿಸಲ್ಪಟ್ಟಿದ್ದಾರೆ. ಕರ್ನಾಟಕದ ಕಾಶ್ಮೀರವಾದ ಕೊಡಗು ಜಿಲ್ಲೆಯ ಪರಿಸರ ನಾಶವಾಗದಂತೆ ಕೊಡಗಿನವರು ಎಚ್ಚರವಹಿಸಬೇಕು. ಜೀವನದಿ ಕಾವೇರಿಯ ಸ್ವಚ್ಛತೆ ಹಾಳಾಗದಂತೆ ಜಾಗ್ರತೆ ವಹಿಸುವದು ಕೊಡಗಿನ ಜನರ ಧ್ಯೇಯವಾಗಬೇಕೆಂದು ಅಭಿಪ್ರಾಯಿಸಿದರು. ಹಿರಿಯರನ್ನು ಗೌರವಿಸುವದರಲ್ಲಿ ಕೊಡಗಿನ ಜನತೆ ಇತರರಿಗೆ ಮಾದರಿ ಎಂದು ಶ್ಲಾಘಿಸಿದ ರಾಜೇಗೌಡರು ದೇಶದಲ್ಲಿ ಮತೀಯ ಭಾವನೆ ದೂರವಾಗಿ, ಎಲ್ಲರೂ ಒಂದೇ ಎಂಬ ಮನೋಭಾವ ಪ್ರತಿಯೊಬ್ಬರಲ್ಲೂ ಮೂಡಬೇಕೆಂದು ಆಶಯ ವ್ಯಕ್ತಪಡಿಸಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಮಾತನಾಡಿ, ಕೊಡಗಿನಲ್ಲಿ ಸಂಸ್ಕøತಿ, ಆಚಾರ - ವಿಚಾರವನ್ನು ಉಳಿಸಿ ಬೆಳೆಸುವಲ್ಲಿ ಮಹಿಳೆಯರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅಕಾಡೆಮಿ ವತಿಯಿಂದ ಆಟ್ಪಾಟ್ ಪಡಿಪು ಶಿಬಿರ ನಡೆಸಲಾಗುತ್ತಿದ್ದು, ಮಕ್ಕಳಿಗೆ ಇದರ ಪ್ರಯೋಜನ ಕಲ್ಪಿಸಲು ಪೋಷಕರು ಹಾಗೂ ಶಿಕ್ಷಕರು ಮುಂದಾಗಬೇಕೆಂದರು.
ಜಿ.ಪಂ. ಆರೋಗ್ಯ ಮತ್ತು ಶಿಕ್ಷಕ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ಶಶಿ ಸುಬ್ರಮಣಿ ಮಾತನಾಡಿ, ಪ್ರಸ್ತುತ ಕೊಡಗಿನಲ್ಲಿ ಕೃಷಿ ಚಟುವಟಿಕೆಯ ಬಗ್ಗೆ ಒಲವು ಕಡಿಮೆಯಾಗುತ್ತಿದೆ ಎಂದು ವಿಷಾದಿಸಿದರು. ಪರಿಸರ ಸಂರಕ್ಷಿಸಿದರೆ ಮಾತ್ರ ಸುಖ ಜೀವನ ಸಾಧ್ಯ ಎಂದು ಅನಿಸಿಕೆ ವ್ಯಕ್ತಪಡಿಸಿದರು. ಬಿ.ಸಿ. ಪ್ರೌಢಶಾಲೆಯ ಆಡಳಿತಾದಿ üಕಾರಿ ಪಿ.ಎ. ಲಕ್ಷ್ಮಿನಾರಾಯಣ ಮಾತನಾಡಿ, ಬಿ.ಸಿ. ಪ್ರೌಢಶಾಲೆಯಲ್ಲಿ 1972 ರಿಂದಲೇ ಯೋಗಾಭ್ಯಾಸ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ರಾಜ್ಯ ಮಹಿಳಾ ಬಿಜೆಪಿ ಕಾರ್ಯದರ್ಶಿ ಪಟ್ಟಡ ರೀನಾ ಪ್ರಕಾಶ್, ಪ್ರತಿಯೊಬ್ಬ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕೆಂದರು.
ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಮಾತನಾಡಿ, ಹುತ್ತರಿ ಈಡ್ ಸಂಸ್ಕøತಿಯನ್ನು ಬೆಳಕಿಗೆ ತಂದು ಬೆಳೆಸುವ ಕೆಲಸವನ್ನು ಜಾನಪದ ಪರಿಷತ್ ಮಾಡಬೇಕೆಂದು ಸಲಹೆಯಿತ್ತರು. ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ವಾಂಚಿರ ಟಿ. ನಾಣಯ್ಯ ಮಾತನಾಡಿ, ಜಾನಪದ ಕಲೆಯನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಾನಪದ ಪರಿಷತ್ ಜಿಲ್ಲಾ ಸಂಚಾಲಕ ಮೇರಿಯಂಡ ಸಂಕೇತ್ ಪೂವಯ್ಯ, ಗ್ರಾಮೀಣ ಪ್ರದೇಶಗಳ ಪ್ರತಿಭೆಗಳನ್ನು ಬೆಳಕಿಗೆ ತರುವ ಕೆಲಸವನ್ನು ಪರಿಷತ್ ಮಾಡಲಿದೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿ, ಜಾನಪದ ಪರಿಷತ್ನ ಯೋಜನೆಗಳ ಬಗ್ಗೆ ವಿವರಿಸಿದರು. ಪರಸ್ಪರ ಆತ್ಮೀಯತೆ, ಬಾಂಧವ್ಯದಿಂದ ಬಾಳಿದಾಗ ಬದುಕು ಅರ್ಥಪೂರ್ಣ ವೆನಿಸುವದು ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭ ಹಿರಿಯ ಜಾನಪದ ಕಲಾ ಪೋಷಕರಾದ ಪುಗ್ಗೇರ ಪೂವಮ್ಮ ಕರುಂಬಯ್ಯ ಅವರನ್ನು ಪರಿಷತ್ ವತಿಯಿಂದ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಚೆಂಬೆಬೆಳಿಯೂರು ಕೊಡವ ಅಸೋಸಿಯೇಷನ್ ಅಧ್ಯಕ್ಷ ಚಂಬಾಂಡ ಮುದ್ದಪ್ಪ, ಚೆಂಬೆ ಬೆಳಿಯೂರು ಮಹಿಳಾ ಸಮಾಜದ ಅಧ್ಯಕ್ಷೆ ಮಂಡೇಪಂಡ ಸುಮಿತ್ರ ರಮೇಶ್, ಜಾನಪದ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನೀರ್ ಅಹ್ಮದ್, ಸೋಮವಾರ ಪೇಟೆ ತಾಲೂಕು ಸಮಿತಿ ಅಧ್ಯಕ್ಷ ಚಂದ್ರಮೋಹನ್ ಹಾಗೂ ಇತರರಿದ್ದರು. ಮುಖ್ಯ ಶಿಕ್ಷಕ ಲೋಕೇಶ್ ಹಾಗೂ ಪ್ರಮೀಳಾ ಮಹೇಶ್ ನಿರೂಪಿಸಿದರು. ವೀರಾಜಪೇಟೆ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಸ್ವಾಗತಿಸಿದರು. ಗಂಗಮ್ಮ ಬೆಳ್ಯಪ್ಪ ವಂದಿಸಿದರು.