ವಿರಾಜಪೇಟೆ, ಜು. 15: ದೇವಟ್ ಪರಂಬು ಘಟನೆ ಕೊಡವ ಜನಾಂಗಕ್ಕೆ ಮಾಡಿರುವ ಅಪಮಾನವಾಗಿದೆ. ಈ ಪ್ರಕರಣವನ್ನು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಆದಷ್ಟು ಬೇಗ ಇತ್ಯರ್ಥ ಪಡಿಸಿ ಸ್ಮಾರಕವನ್ನು ಮರು ಸ್ಥಾಪಿಸಿ ಜಿಲ್ಲೆಯಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕೆಂದು ಅಮ್ಮತ್ತಿ ರೈತ ಸಂಘದ ಅಧ್ಯಕ್ಷ ಕಾವಡಿಚಂಡ ಗಣಪತಿ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗಣಪತಿ ಅವರು ಇತ್ತೀಚೆಗೆ ಕೊಡವರ ಹಕ್ಕುಗಳನ್ನು ಪ್ರತಿಪಾದಿಸುವ ಸಿಎನ್ಸಿ ಸಂಘಟನೆಯು ದೇವಟ್ ಪರಂಬುವಿನಲ್ಲಿ ನಮ್ಮ ಪೂರ್ವಿಕರ ನೆನಪಿಗಾಗಿ ಸ್ಮಾರಕವನ್ನು ನಿರ್ಮಿಸಿ ಪದ್ಧತಿಯಂತೆ ಹಬ್ಬ ಹರಿದಿನಗಳಲ್ಲಿ ಎಡೆ ಇಟ್ಟು ಪೂಜಿಸುತ್ತಾ ಬರಲಾಗಿದೆ.
ಸ್ಮಾರಕವನ್ನು ನಾಶ ಪಡಿಸಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಸ್ಮಾರಕವನ್ನು ಮರುಸ್ಥಾಪಿಸಿ ಶಾಂತ ವಾತಾವರಣವನ್ನು ನಿರ್ಮಿಸುವಂತೆ ರೈತಸಂಘ ಆಗ್ರಹಿಸುತ್ತದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಕಾರ್ಯದರ್ಶಿ ಉದ್ದಪಂಡ ಜಗತ್, ಸಂಚಾಲಕ ಕೇಚಂಡ ಕುಶಾಲಪ್ಪ, ಖಜಾಂಜಿ ಪಿ.ಬಿ ಅರುಣ್, ಜಂಟಿ ಕಾರ್ಯದರ್ಶಿ ಎಂ.ಸಿ ವಿಜಯ್ ಉಪಸ್ಥಿತರಿದ್ದರು.