ಸೋಮವಾರಪೇಟೆ, ಜೂ.16: ಜಿಲ್ಲೆಯಲ್ಲಿ ಪ್ರಸ್ತುತ ತಲೆದೋರಿರುವ ದೇವಟ್ ಪರಂಬು ವಿವಾದವನ್ನು ಸೌಹಾರ್ಧಯುತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮಧ್ಯೆ ಪ್ರವೇಶಿಸಬೇಕೆಂದು ಆಗ್ರಹಿಸಿರುವ ಸೋಮವಾರಪೇಟೆ ಒಕ್ಕಲಿಗರ ಸಂಘ ಹಾಗೂ ಜಿಲ್ಲಾ ಒಕ್ಕಲಿಗರ ಸಂಘ, ಈ ಬಗ್ಗೆ ಕಾದು ನೋಡುವ ತಂತ್ರ ಅನುಸರಿಸಬಾರದು ಎಂದು ಅಭಿಪ್ರಾಯಿಸಿದೆ.
ಇಲ್ಲಿನ ಒಕ್ಕಲಿಗರ ಸಂಘದ ಸಮುದಾಯ ಭವನದಲ್ಲಿ ಸಮಾಜದ ಪ್ರಮುಖರು ಈ ಬಗ್ಗೆ ಚರ್ಚಿಸಿದ್ದು, ಜಿಲ್ಲೆಯ ಹಿರಿಯ ಜನಪ್ರತಿನಿಧಿಗಳು, ವಿಚಾರವಂತರು, ಸಮುದಾಯಗಳ ಮುಖಂಡರುಗಳನ್ನು ಒಳಗೊಂಡಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಕ್ಷಣ ಸಭೆ ನಡೆಸಿ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕು ಎಂದು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ ಅಭಿಪ್ರಾಯಿಸಿದರು.
ಕೊಡಗಿನಲ್ಲಿ ಎಲ್ಲರೂ ಸಹಭಾಳ್ವೆ ಯಿಂದ ಜೀವನ ನಡೆಸುತ್ತಿದ್ದು, ಇದುವರೆಗೂ ಜನಾಂಗೀಯ ವೈಷಮ್ಯ ಕಂಡುಬಂದಿರಲಿಲ್ಲ. ಇದೀಗ ಕೊಡಗಿನ ಎರಡು ಪ್ರಮುಖ ಜನಾಂಗಗಳ ನಡುವೆ ಶೀತಲ ಸಮರದಂತೆ ದೇವಟ್ ಪರಂಬು ವಿಚಾರ ಹರಿದಾಡುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಒಡೆದಿರುವ ಮನಸ್ಸುಗಳನ್ನು ಮತ್ತೆ ಒಂದುಗೂಡಿಸುವ ಪ್ರಯತ್ನಕ್ಕೆ ಜಿಲ್ಲಾಡಳಿತ ಮುಂದಾಗಬೇಕು. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕದ್ವಯರು ತಕ್ಷಣ ಕ್ರಿಯಾಶೀಲರಾಗಬೇಕು ಎಂದು ಸಭೆಯಲ್ಲಿದ್ದ ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ. ಚಂಗಪ್ಪ ಅಭಿಪ್ರಾಯಿಸಿದರು.
ಈ ಹಿಂದೆ ಟಿಪ್ಪು ಜಯಂತಿ ಸಂದರ್ಭ ರಾಜಕೀಯ ಲಾಭಕ್ಕೆ ಬಳಸಿಕೊಂಡ ಜಿಲ್ಲೆಯ ಶಾಸಕರುಗಳಾದ ಅಪ್ಪಚ್ಚು ರಂಜನ್ ಹಾಗೂ ಕೆ.ಜಿ. ಬೋಪಯ್ಯ ಅವರುಗಳು ಇದೀಗ ಮೌನ ವಹಿಸಿರುವದು ಯಾಕೆ? ದೇವಟ್ ಪರಂಬು ವಿಚಾರದಲ್ಲಿ ರಾಜಕೀಯ ಲಾಭಕ್ಕೆ ಇವರುಗಳು ಕಾಯುತ್ತಿ ದ್ದಾರೆಯೇ ಎಂದು ಅವರು ಪ್ರಶ್ನಿಸಿದರು.
ದೇವಟ್ ಪರಂಬು ವಿವಾದವನ್ನು ಶಮನಗೊಳಿಸಬೇಕಾದ ಶಾಸಕದ್ವಯರು ಕೈಕಟ್ಟಿ ಕುಳಿತಿರುವದು ಏಕೆ? ಈ ವಿಚಾರದಲ್ಲಿ ಶಾಸಕರುಗಳು ಜವಾಬ್ದಾರಿಯಿಂದ ಹಿಂದೆ ಸರಿದಿದ್ದಾರೆ ಎಂದು ಆರೋಪಿಸಿದ ಚಂಗಪ್ಪ, ಎರಡೂ ಸಮುದಾಯಗಳ ಮುಖಂಡರುಗಳ ನಡುವೆ ಸಮನ್ವಯ ಸಭೆ ನಡೆಸಲು ಶಾಸಕರುಗಳೂ ವೇದಿಕೆ ಕಲ್ಪಿಸಬೇಕು. ಮುಕ್ತ ಮಾತುಕತೆಯ ಮೂಲಕ ವಿವಾದವನ್ನು ಶಮನಗೊಳಿಸಬೇಕು ಎಂದರು.
ಕೊಡಗಿನ ಅಭಿವೃದ್ಧಿಗೆ ಎಲ್ಲರ ಸಹಕಾರ ಮುಖ್ಯ. ಹೊರ ಭಾಗದಿಂದ ಜನರು ಆಗಮಿಸದೇ ಇದ್ದಿದ್ದರೆ ಇಂದು ಕೊಡಗು ಈ ಮಟ್ಟದಲ್ಲಿ ಅಭಿವೃದ್ಧಿ ಕಾಣುತ್ತಿರಲಿಲ್ಲ. ಜಿಲ್ಲೆಯ ಅಭಿವೃದ್ಧಿಗೆ ಎಲ್ಲಾ ಸಮುದಾಯದ, ಎಲ್ಲಾ ವರ್ಗದವರ ಕೊಡುಗೆ ಇದೆ ಎಂಬದನ್ನು ಜನತೆ ಮನಗಾಣಬೇಕು. ಘಟಿಸಿಹೋದ ವಿಷಯಗಳ ಬಗ್ಗೆ ವೃಥಾ ಚರ್ಚೆ ನಡೆಸಿ, ಸಾಮಾಜಿಕ ಸಾಮರಸ್ಯ ಹಾಳುಗೆಡುವಬಾರದು ಎಂದು ಚಂಗಪ್ಪ ಅಭಿಪ್ರಾಯಿಸಿದರು.
ಸಭೆಯಲ್ಲಿ ಒಕ್ಕಲಿಗರ ಸಂಘದ ಮುಖಂಡರಾದ ಎಸ್.ಜಿ. ಮೇದಪ್ಪ, ಎಸ್.ಬಿ. ಭರತ್‍ಕುಮಾರ್, ಎನ್.ಬಿ. ಗಣಪತಿ, ಸಿ.ಕೆ. ರಾಘವ, ಕೆ.ಎಂ. ಜಗದೀಶ್, ಬಿ.ಈ. ಶಿವಯ್ಯ, ಹೆಚ್.ಬಿ. ರಾಜಪ್ಪ, ಕೊಮಾರಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.