ಕುಶಾಲನಗರ, ಜೂ. 15: ಕೊಡಗಿನ ದೇವಟ್ ಪರಂಬುವಿನಲ್ಲಿ ಸ್ಮಾರಕ ನಿರ್ಮಾಣ ವಿಚಾರದಲ್ಲಿ ಎರಡು ಸಮುದಾಯಗಳ ನಡುವೆ ಉಂಟಾಗಿರುವ ಭಿನ್ನಾಭಿಪ್ರಾಯವನ್ನು ಸೌಹಾರ್ದಯುತವಾಗಿ ಬಗೆಹರಿಸಲು ಮುಂದಾಗಬೇಕಿದೆ ಎಂದು ಸಂಸದ ಪ್ರತಾಪ್‍ಸಿಂಹ ಹೇಳಿದರು.

ಕುಶಾಲನಗರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂದರ್ಭ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ದೇವಟ್ ಪರಂಬು ಹೆಸರಿನಲ್ಲಿ ಎರಡು ಸಮುದಾಯಗಳ ನಡುವೆ ವಿವಾದ ಆರಂಭವಾದ ಸಂದರ್ಭ ತಾನು ವಿದೇಶದಲ್ಲಿದ್ದ ಕಾರಣ ಪ್ರಕರಣದ ಕುರಿತು ಮಾತನಾಡಲು ಅವಕಾಶ ದೊರೆಯಲಿಲ್ಲ. ಪ್ರಮುಖವಾಗಿ ದಿನಪತ್ರಿಕೆಗಳಲ್ಲಿ ಪ್ರಕರಣದ ಕುರಿತಾಗಿ ಪ್ರತಿನಿತ್ಯ ವಿವಿಧ ಹೇಳಿಕೆಗಳು ನೀಡುವ ಮೂಲಕ ಸಮಸ್ಯೆ ಉಲ್ಭಣಗೊಳಿಸುವ ಕಾರ್ಯವನ್ನು ನಿಲ್ಲಿಸಬೇಕಿದೆ ಎಂದು ಅವರು ಹೇಳಿದರು.

ಕೊಡಗಿನಲ್ಲಿ ವಿವಿಧ ಸಮುದಾಯಗಳ ನಡುವೆ ಹಿಂದಿನಿಂದಲೂ ಉತ್ತಮ ಸೌಹಾರ್ದತೆ ಕಾಪಾಡಿಕೊಂಡು ಬರಲಾಗಿದೆ. ಕೊಡಗಿನ ರಕ್ಷಣೆಗೆ ಎಲ್ಲಾ ವರ್ಗದವರೂ ಕೂಡ ಹೋರಾಟ ನಡೆಸಿದ್ದಾರೆ, ರಕ್ತ ಸುರಿಸಿದ್ದಾರೆ. ದೇವಟ್ ಪರಂಬು ಪ್ರಕರಣ ಇತಿಹಾಸದಲ್ಲಿ ಉಲ್ಲೇಖವಾಗಿರುವ ವಿಚಾರವಾಗಿದ್ದು, ಇಂತಹದ್ದೇ ಸ್ಥಳದಲ್ಲಿ ನಡೆದಿದೆ, ನಡೆಯಲಿಲ್ಲ ಎಂಬದಕ್ಕೆ ಯಾವದೇ ಪುರಾವೆಗಳಿಲ್ಲ. ಇದು ಕೇವಲ ಊಹೆಯ ಆಧಾರದ ಮೇಲೆ ನಂಬುವಂತಹ ವಿಚಾರವಾಗಿದೆ. ದೇವಟ್ ಪರಂಬುವಿನಲ್ಲಿ ಹತ್ಯಾಕಾಂಡ ನಡೆದೇ ಇಲ್ಲ ಎನ್ನುವದಕ್ಕೂ ಸಾಧ್ಯವಿಲ್ಲ ಎಂದ ಅವರು, ಇಲ್ಲಿ ಸ್ಮಾರಕ ನಿರ್ಮಿಸುವ ವಿಚಾರದಲ್ಲಿ ಕೂಡ ಯಾವದೇ ತಪ್ಪಿಲ್ಲ. ಕೊಡಗಿನ ರಕ್ಷಣೆಯ ಹೋರಾಟದಲ್ಲಿ ಎಲ್ಲಾ ಸಮುದಾಯದವರು ಪಾಲ್ಗೊಂಡಿದ್ದಾರೆ ಎಂದರು. ವಿವಾದದ ವಿಚಾರವಾಗಿ ಶಾಸಕರ ಸಮ್ಮುಖದಲ್ಲಿ ಎರಡು ಸಮುದಾಯದವರನ್ನು ಒಂದೇ ವೇದಿಕೆಯಡಿ ತರುವ ಮೂಲಕ ಸಮಸ್ಯೆ ಇತ್ಯರ್ಥಗೊಳಿಸಲಿದ್ದೇವೆ ಎಂದು ಅವರು ಹೇಳಿದರು.

ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಶುಕ್ರವಾರ ಸಭೆಯೊಂದನ್ನು ಕರೆಯಲಾಗಿತ್ತು. ಅಂದು ಬಿಜೆಪಿ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ನಡೆಯಲಿರುವ ಕಾರಣ ಮುಂದಿನ ಶನಿವಾರಕ್ಕೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಕೊಡವ ಹಾಗೂ ಗೌಡ ಅಕಾಡೆಮಿಗಳ ಅಧ್ಯಕ್ಷರು, ಎರಡು ಸಮುದಾಯಗಳ ಪ್ರಮುಖರು ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಪ್ರಕರಣದ ಕುರಿತು ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವದು ಎಂದು ತಿಳಿಸಿದರು.