ಮಡಿಕೇರಿ, ಸೆ. 1: ಕಳ್ಳಭಟ್ಟಿ ತಯಾರಿಸುತ್ತಿದ್ದಾರೆ ಎಂದು ಆರೋಪಿಸಿ ಇತ್ತೀಚೆಗೆ ಅಬಕಾರಿ ಅಧಿಕಾರಿಗಳು ತಿತಿಮತಿ ವ್ಯಾಪ್ತಿಯ ಇಬ್ಬರು ಗ್ರಾಮ ಪಂಚಾಯ್ತಿ ಸದಸ್ಯರ ವಿರುದ್ಧ ದುರುದ್ದೇಶದಿಂದ ದೂರು ದಾಖಲಿಸಿದ್ದಾರೆ ಎಂದು ಆರೋಪಿಸಿರುವ ಬುಡಕಟ್ಟು ಕೃಷಿಕರ ಸಂಘ ಹಾಗೂ ಸ್ಥಳೀಯ ಪಂಚಾಯಿತಿ ಸದಸ್ಯರು ಅಧಿಕಾರಿಗಳ ವಿರುದ್ಧ ತನಿಖೆÉ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬುಡಕಟ್ಟು ಕೃಷಿಕರ ಸಂಘÀದ ಅಧ್ಯಕ್ಷ ಜೆ.ಪಿ. ರಾಜು, ಅಬಕಾರಿ ಅಧಿಕಾರಿಗಳು ದುರುದ್ದೇಶದಿಂದ ಜಂಗಲ್ ಹಾಡಿಯ ಇಬ್ಬರ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ ಎಂದು ಆರೋಪಿಸಿದರು. ಇದು ಅತ್ಯಂತ ಖಂಡನೀಯ ಕ್ರಮವಾಗಿದ್ದು, ಅಧಿಕಾರಿಗಳಿಗೆ ಕೆಲವು ಪ್ರಭಾವಿ ರಾಜಕಾರಣಿಗಳು ಒತ್ತಡ ಹೇರಿದ ಪರಿಣಾಮ ಕಳ್ಳಭಟ್ಟಿ ತಯಾರಿಯ ಆರೋಪ ಹೊರಿಸಿ ಮೊಕದ್ದಮೆ ದಾಖಲಿಸಿಕೊಳ್ಳ್ಳಲಾಗಿದೆಯೆಂದು ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ಪಿ.ಎಂ. ಸುಬ್ರು ಮಾತನಾಡಿ, ಅಬಕಾರಿ ಅಧಿಕಾರಿಗಳು ವಿನಾಃಕಾರಣ ಕಳ್ಳಭಟ್ಟಿ ತಯಾರಿಕೆಯ ಆರೋಪ ಹೊರಿಸಿ ತಿತಿಮತಿ ಗ್ರಾಮ ಪಂಚಾಯಿತಿಯ ಮೂವರು ಸದಸ್ಯರು ನಡೆಸುತ್ತಿರುವ ಜನಪರ ಹೋರಾಟಗಳನ್ನು ಹತ್ತಿಕ್ಕಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಯಾವದೇ ಸಾಕ್ಷ್ಯಾಧಾರಗಳಿಲ್ಲದೆ ಮೊಕದ್ದಮೆ ಹೂಡಲಾಗಿದ್ದು, ಸಂಕಷ್ಟದ ಬದುಕು ಸಾಗಿಸುತ್ತಿರುವ ಹಾಡಿಯ ಜನರು ಕೋರ್ಟ್ ಕಛೇರಿ ಎಂದು ಅಲೆಯಲು ಸಾಧ್ಯವಿಲ್ಲ. ಕೃಷಿ ಜಮೀನಿನಲ್ಲಿ ಕೃಷಿ ಮಾಡುತ್ತ ಜೀವನ ಸಾಗಿಸುತ್ತಿರುವ ಗಿರಿಜನರಿಗೆ ತಮ್ಮದೇ ಆದ ಗೌರವವಿದೆ. ಕೆಲವರು ಇಂದಿಗೂ ಗಿರಿಜನರನ್ನು ನ್ಯಾಯಯುತ ವೇತನ ನೀಡದೆ ದುಡಿಸಿಕೊಳ್ಳುತ್ತಿದ್ದು, ಆಧುನಿಕ ತಂತ್ರಜ್ಞಾನದಿಂದಲೂ ವಂಚಿತರನ್ನಾಗಿ ಮಾಡಿದ್ದಾರೆ ಎಂದು ಆರೋಪಿಸಿದರು.

ಇತ್ತೀಚೆಗೆ ಹಾಡಿಯಲ್ಲಿ ಮಹಿಳೆಯೊಬ್ಬರು ಅನಾರೋಗ್ಯದಿಂದ ಮೃತಪಟ್ಟಿದ್ದಾರೆಯೇ ಹೊರತು ಕಳ್ಳಭಟ್ಟಿ ಸೇವನೆಯಿಂದ ಅಲ್ಲವೆಂದು ಸ್ಪಷ್ಟಪಡಿಸಿದ ಸುಬ್ರು, ತಪ್ಪು ಮಾಡದವರ ಹೆಸರನ್ನು ಅಧಿಕಾರಿಗಳು ಆರೋಪಿಗಳೆಂದು ಪ್ರತಿಬಿಂಬಿಸುವ ಮೂಲಕ ಮಾನಹಾನಿ ಮಾಡಿದ್ದು, ಕಾನೂನಿನ ಮೂಲಕ ಹೋರಾಟ ನಡೆÀಸುವದಾಗಿ ಎಚ್ಚರಿಕೆ ನೀಡಿದರು.

ಮೂವರು ಗಿರಿಜನರು ಗ್ರಾಮ ಪಂಚಾಯಿತಿ ಸದಸ್ಯರಾಗಿರುವದನ್ನು ಸಹಿಸದೆ ಪುನರ್ವಸತಿ ಹೋರಾಟ ಸಮಿತಿಯ ಕೆಲವು ಸದಸ್ಯರು ಆರೋಪಗಳನ್ನು ಮಾಡುತ್ತಿದ್ದಾರೆ. ನಮ್ಮ ಹೋರಾಟದ ಫಲವಾಗಿ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಹಾಡಿಗಳಲ್ಲಿ ಮೂಲ ಭೂತ ಸೌಲಭ್ಯದ ವ್ಯವಸ್ಥೆಗಳಾಗುತ್ತಿದೆ. ಇದನ್ನು ಸಹಿಸದ ಕೆಲವು ಪ್ರಭಾವಿ ರಾಜಕಾರಣಿಗಳು ವಿನಾಃಕಾರಣ ಅಮಾಯಕರ ವಿರುದ್ಧ ದೂರು ದಾಖಲಾಗುವಂತೆ ನೋಡಿ ಕೊಂಡಿದ್ದಾರೆ ಎಂದು ಸುಬ್ರು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಪಿ.ಎಂ. ವಿಜಯ, ಸಿದ್ಧರಾಜು, ಹಾಡಿ ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ಪಿ.ಸಿ. ರಾಮು, ಪ್ರಮುಖರಾದ ಬಿ.ಟಿ. ರಾಜು ಹಾಗೂ ಬೊಗ್ಗ ಉಪಸ್ಥಿತರಿದ್ದರು.