ಚೆಟ್ಟಳ್ಳಿ, ಆ. 27: ಕೊಡಗಿನ ಅಮ್ಮಾಟಂಡ ದಿಕ್ಷಿತ್ ಬೆಳ್ಳಿಯಪ್ಪ ಯುವ ಯೋಗ ಮಾಸ್ಟರ್ ದುಬೈನಲ್ಲಿ ಯೋಗದ ತರಬೇತಿ ನೀಡುವ ಮೂಲಕ ಕೊಡಗಿನ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ.

ಮಡಿಕೇರಿ ತಾಲೂಕಿನ ಹಾಕತ್ತೂರಿನ ಅಮ್ಮಾಟಂಡ ಕುಟಂಬದ ಸೋಮಣ್ಣ ಹಾಗೂ ತುಳಸಿ ಸೋಮಣ್ಣ ದಂಪತಿಗಳ ಪುತ್ರ ದೀಕ್ಷಿತ್ ಬೆಳ್ಯಪ್ಪ ಶಾಲಾ ವಿದ್ಯಾಭ್ಯಾಸವನ್ನು ಮಡಿಕೇರಿಯ ಸೆಂಟ್ ಜೋಸೆಫ್, ಪುತ್ತೂರಿನ ಸೆಂಟ್ ಫಿಲೋಮಿನಾಸ್, ಬ್ಲೋಸಮ್ಸ್‍ನಲ್ಲೂ, ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಬ್ಯಾಚುರಲ್ ಆಫ್ ಆಟ್ರ್ಸ್ ಮುಗಿಸಿ ಒಂದು ವರ್ಷ ಬೆಂಗಳೂರಿನ ಕಿಂಗ್ಸ್‍ಫಿಶರ್ ಏರ್‍ಲೈನ್ಸ್‍ನಲ್ಲಿ ಹಾಗೂ ಆಕ್ಸೆಂಚರ್‍ನಲ್ಲಿ ಎರಡು ವರ್ಷ ಉದ್ಯೋಗದಲ್ಲಿದ್ದರು.

ತನ್ನ ಎಂಟನೇ ತರಗತಿ ಓದುತ್ತಿರುವಾಗಲೇ ಯೋಗದ ಬಗ್ಗೆ ಆಸಕ್ತಿ ಹೊಂದಿದ್ದ ದೀಕ್ಷಿತ್‍ಗೆ ಕಾಲೇಜು ಶಿಕ್ಷಣ ಮುಗಿದ ನಂತರದಲ್ಲಿ ಯೋಗದ ಕಡೆ ಹೆಚ್ಚಿನ ಆಸಕ್ತಿ ಹೆಚ್ಚಿ 2010ರಲ್ಲಿ ಬೆಂಗಳೂರಿನ ಸ್ವಾಮಿ ವಿವೇಕಾನಂದ ಅನುಷ್ಠಾನ ಸಂಸ್ಥಾನದಲ್ಲಿ 6 ತಿಂಗಳ ಯೋಗ ತರಬೇತಿ ಹೊಂದಿ ಯೋಗವನ್ನು ವೃತ್ತಿಯನ್ನಾಗಿಸಿಕೊಂಡು ಬೆಂಗಳೂರಿನ ಹಲವು ಕಾರ್ಪೋರೇಟ್ ಸಂಸ್ಥೆಗಳಲ್ಲಿ ಯೋಗವನ್ನು ಕಲಿಸತೊಡಗಿದರು. ಜೊತೆಗೆ ಯೋಗ ವಿದ್ಯೆಯ ಹಲವು ವಿಧವನ್ನು ಕರಗತ ಮಾಡಿಕೊಂಡಿದ್ದರು.

ತನ್ನ ದೇಶದ ಯೋಗದ ಪ್ರಾಮುಖ್ಯತೆಯನ್ನು ಹಲವು ರಾಷ್ಟ್ರದುದ್ದಕ್ಕೂ ತಿಳಿಸಬೇಕೆಂಬ ಕನಸು ಹೊಂದಿದ್ದ ದೀಕ್ಷಿತ್‍ಗೆ ಅದೇ ಸಮಯದಲ್ಲಿ ಭಾರತೀಯ ಪ್ರಸಿದ್ಧ ಯೋಗ ಗುರುವಿನ ಪರಿಚಯವಾಗಿ ದುಬೈನಲ್ಲಿ ಯೋಗ ಪ್ರದರ್ಶನಕ್ಕೆ ಅವಕಾಶ ದೊರಕಿತು. ದೀಕ್ಷಿತ್ ತನ್ನ ಗುರಿಯೊಂದಿಗೆ ತಾಯಿನಾಡಿನಿಂದ ದುಬೈನ ವಿಮಾನ ಏರಿ ಅಲ್ಲಿ ತನ್ನ ಸ್ನೇಹಿತರನ್ನು ಸಂಪಾದಿಸಿ ಅವರೊಂದಿಗೆ ಸೇರಿ ಯೋಗ ತರಬೇತಿ ಕೇಂದ್ರವನ್ನು ಸ್ಥಾಪಿಸಿಯೇ ಬಿಟ್ಟರು.

ಒಂದು ವರ್ಷ ದುಬೈನ ಜನತೆಗೆ ಯೋಗ ತರಬೇತಿಯನ್ನು ನೀಡಿದ ನಂತರ ತನ್ನ ಸ್ವಂತ ಯೋಗ ತರಬೇತಿ ಸಂಸ್ಥೆಯೊಂದನ್ನು ಸ್ಥಾಪಿಸಿದರು. ಅಲ್ಲಿ ನಿತ್ಯವೂ ಪುರುಷರು, ಮಹಿಳೆಯರು ಹಾಗೂ ಮಕ್ಕಳು ಯೋಗ ಕಲಿಯತೊಡಗಿದ್ದಾರೆ.

ದುಬೈನ ಪ್ರತಿಷ್ಠಿತ ಟ್ರಾನ್ಸ್ ವಲ್ಡ್‍ಶಿಪ್ಪಿಂಗ್ ಕಂಪೆನಿಯ ಸಿಇಓ ರಮೇಶ್ ಸ್ವಾಮಿ ರಾಮಕೃಷ್ಣನ್, ಎಎಸ್‍ಎ ಲಾಜಿಸ್ಟಿಕ್ಸ್‍ನ ಸಿಇಓ, ಸಿಟ್ರಾಬೆನ್ ಕಂಪೆನಿಯ ರಜಾಬೇಗಂ, ಪ್ರತಿಷ್ಠಿತ ಕಂಪೆನಿಯ ಪಾಲುದಾರರಾದ ಹಿತೇಶ್ ಬಯಾನಿ, ಮಹೇಂದ್ರ ಅಸ್‍ರ್‍ಪೋರ್ಟ್ ಹಾಗೂ ದುಬೈ ಬ್ಯಾಂಕಿಂಗ್‍ನ ಸಿಬ್ಬಂದಿಗಳಿಗೆಲ್ಲ ದೀಕ್ಷಿತ್ ಯೋಗವನ್ನು ಕಲಿಸುತ್ತಿದ್ದಾರೆ. ಸುಮಾರು 30 ರಿಂದ 40 ಮಂದಿಗೆ ಯೋಗ ಸೆಮಿನಾರ್ ಕೂಡ ನಡೆಸುತ್ತಿದ್ದಾರೆ.

ಮಾನಸಿನ ನಿಯಂತ್ರಣ, ನಿತ್ಯದ ಆಹಾರ ಕ್ರಮ, ದೇಹದ ಆರೋಗ್ಯ ಕಾಪಾಡಿಕೊಳ್ಳುವದು, ಉತ್ತಮ ನಿದ್ರೆ, ಆತ್ಮದ ಬಗ್ಗೆ ಹಾಗೂ ಆಯುರ್ವೇದದ ಬಗ್ಗೆ ದೀಕ್ಷಿತ್ ಯೋಗ ತರಬೇತಿಯಲ್ಲಿ ಜನರಿಗೆ ತಿಳಿಸಿಕೊಡುತ್ತಿದ್ದಾರೆ.

ದೇಹಕ್ಕೆ ನಾವೇ ಮೊದಲ ವೈದ್ಯರು. ಆದ್ದರಿಂದ ನಮ್ಮ ಕೈಯಲ್ಲೇ ಆರೋಗ್ಯದ ನಿಯಂತ್ರಣ ಸಾಧ್ಯವೆಂದು ಹೇಳುವ ದೀಕ್ಷಿತ್ ಬೆಳ್ಯಪ್ಪ ಯೋಗದ ಜೊತೆ ದೇಹದ ಮೂಳೆ ಮಾಂಸ ಖಂಡಗಳ ತೊಂದರೆಯ ನಿವಾರಣೆಯ ವಿದ್ಯೆಯಾದ ಥೈಲ್ಯಾಂಡಿನ ತಾಯ್ ಮಸಾಜ್ ಕಲಿತು ಜನರಿಗೆ ತಿಳಿಸುತ್ತಿದ್ದಾರೆ.

ದೀಕ್ಷಿತ್ ಚಿತ್ರನಟರ ಮಿಮಿಕ್ರಿ ಮಾಡುವದು, ಕೊಡಗಿನ ಆಚಾರ-ವಿಚಾರಗಳು, ಕೊಳಲುವಾದನ ಹೀಗೆ ಹಲವು ವಿಷಯಗಳ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಜೊತೆಗೆ ತನ್ನ ಫೇಸ್ ಬುಕ್‍ನಲ್ಲೂ ಯೋಗದ ವಿಷಯಗಳನ್ನು, ವಿವಿಧ ಭಂಗಿಗಳು, ಬದುಕಿನ ಹಾಗೂ ಯೋಗದ ತಾಟ್‍ಗಳ ಮೂಲಕ ತಿಳಿಸುತ್ತಿದ್ದಾರೆ.

ದೀಕ್ಷಿತ್ ಹೇಳುವಂತೆ ತಾಯಿಯ ಹೊಟ್ಟೆಯಲ್ಲಿರುವಾಗಲೇ ಮಗು ಯೋಗ ಮಾಡುತ್ತಿದ್ದು, ನಂತರದ ಬದುಕಿನ ದಿನಗಳಲ್ಲೂ ನಿತ್ಯವೂ ಯೋಗ ಮಾಡುತ್ತಿರುತ್ತಾನೆನ್ನುತ್ತಾರೆ. ಯೋಗದಲ್ಲಿ ಉತ್ತಮ ಬದುಕನ್ನು ರೂಪಿಸುವ ಅಗಾಧ ಶಕ್ತಿ ಅಡಗಿದ್ದು, ತನ್ನ ಹಲವು ವರ್ಷಗಳ ಯೋಗದ ಕಲಿಕೆಯಲ್ಲಿ ಇನ್ನೂ ಕಲಿಯಬೇಕಾದುದು ಬಹಳಷ್ಟಿದೆ ಎನ್ನುತ್ತಾರೆ.

ಯೋಗದ ಪ್ರಾಮುಖ್ಯತೆಯನ್ನು ವಿಶ್ವದುದ್ದಗಲಕ್ಕೂ ಪಸರಿಸುವ ಕಾರ್ಯಕ್ಕೆ ಮುಂದಾಗಿರುವ ಪ್ರಧಾನಿಗಳ ಕಾರ್ಯದ ಜೊತೆ ಕೊಡಗಿನ ಎಲೆಮರೆ ಕಾಯಿಯಂತಿದ್ದು ವಿದೇಶದಲ್ಲಿ ಯೋಗದ ಪ್ರಾಮುಖ್ಯತೆಯನ್ನು ತಿಳಿಸಹೊರಟಿರುವ ಯುವ ಯೋಗ ಮಾಸ್ಟರ್ ದೀಕ್ಷಿತ್‍ರನ್ನು ದೇಶ ಗುರುತಿಸಬೇಕಿದೆ.

- ಪುತ್ತರಿರ ಕರುಣ್ ಕಾಳಯ್ಯ