ಸಿದ್ದಾಪುರ, ಡಿ. 18: ದಿಡ್ಡಳ್ಳಿಯಲ್ಲಿ ತಾ. 7 ರಂದು 577 ಗಿರಿಜನ ಕುಟುಂಬಗಳನ್ನು ಒಕ್ಕಲೆಬ್ಬಿಸಿ ಗುಡಿಸಲುಗಳನ್ನು ನಿರ್ನಾಮ ಮಾಡಿದ ಪ್ರಕರಣ ಇದೀಗ ತೀವ್ರ ಪ್ರತಿರೋಧದ ಹಂತ ತಲುಪಿದೆ. ತಾ. 7 ರಂದು ಓರ್ವ ಗಿರಿಜನ ಮಹಿಳೆ ಮತ್ತು ಓರ್ವ ಪುರುಷ ಅರಣ್ಯ ಇಲಾಖಾ ಕಾರ್ಯಾಚರಣೆ ವಿರೋಧಿಸಿ ಬೆತ್ತಲೆ ಓಟದ ಮೂಲಕ ನಡೆಸಿದ ಪ್ರತಿಭಟನೆಯನ್ನು ಆ ದಿನ ಪೊಲೀಸರು ನಿರಾಕರಿಸಿದ್ದರು. ಇದೀಗ ಪ್ರತ್ಯಕ್ಷ ಸಾಕ್ಷಿಯಾಗಿ ಬೆತ್ತಲೆ ಓಟದ ವೀಡಿಯೋ ಕ್ಲಿಪ್ ರಾಜ್ಯ ಮಟ್ಟದ ಹಲವು ದೃಶ್ಯ ಮಾಧ್ಯಮಗಳಲ್ಲಿ ಇಂದು ಪ್ರಸಾರಗೊಂಡಿದ್ದು “ಶಕ್ತಿ”ಗೂ ಈ ದೃಶ್ಯ ಲಭ್ಯವಾಗಿದೆ. ಕೊಡಗು ಜಿಲ್ಲೆಯಲ್ಲಿ ಇದೊಂದು ಅಮಾನವೀಯ ಬೆಳವಣಿಗೆಯಾಗಿದೆ ಎಂದು ಸಾರ್ವಜನಿಕ ಪ್ರತಿಕ್ರಿಯೆಗಳು ವೇದ್ಯವಾಗುತ್ತಿವೆ.
ಈ ನಡುವೆ ದಿಡ್ಡಳ್ಳಿ ಸನಿಹದ ಆಶ್ರಮ ಶಾಲೆ ಬಳಿಯ ಪ್ರದೇಶದಲ್ಲಿ ವಿವಿಧ ಸಂಘಟನೆಗಳ ನೇತಾರರ ನೇತೃತ್ವದಲ್ಲಿ ಸಂತ್ರಸ್ಥ ಗಿರಿಜನ ಕುಟುಂಬಗಳು ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆ ಇಂದಿಗೆ 13 ದಿನ ತಲುಪಿದ್ದು ಇಂದು ಜಿಲ್ಲಾ ಮತ್ತು ರಾಜ್ಯ ಮಟ್ಟದ ನಾಯಕರುಗಳು ಇದರಲ್ಲಿ ಭಾಗವಹಿಸಿ “ಸಂಕಲ್ಪ” ದಿನವಾಗಿ ಪರಿಗಣಿಸಿ ಹೋರಾಟವನ್ನು ಇಂದಿನಿಂದ ಪ್ರಾರಂಭಿಸಿದ್ದಾರೆ.
ಈ ಸಂದರ್ಭ ವಿವಿಧ ಮುಖಂಡರು ಈ ಕೆಳಗಿನ ತಮ್ಮ ನಿಲುವು ವ್ಯಕ್ತಪಡಿಸಿದರು.
ಭಿಕ್ಷೆ ಬೇಕಾಗಿಲ್ಲ: ಎ.ಕೆ.ಎಸ್.
ಭೂಮಿಯನ್ನು ಭಿಕ್ಷೆಯ ರೀತಿಯಲ್ಲಿ ಪಡೆಯುವ ಅಗತ್ಯವಿಲ್ಲ. ಹೋರಾಟದ ಮೂಲಕ ಪಡೆಯುತ್ತೇವೆ ಎಂದು ಹಿರಿಯ ವಕೀಲ ಎ.ಕೆ ಸುಬ್ಬಯ್ಯ ಅಭಿಪ್ರಾಯಪಟ್ಟರು.
ಸಮೀಪದ ಮಾಲ್ದಾರೆಯ ದಿಡ್ಡಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂಕಲ್ಪ
(ಮೊದಲ ಪುಟದಿಂದ) ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಆದಿವಾಸಿಗಳು ಸ್ವಂತ ಸೂರಿಲ್ಲದೇ, ಕಾಫಿ ತೋಟಗಳಲ್ಲಿ ಅಲ್ಪ ಕೂಲಿಗೆ ದುಡಿಯಬೇಕಾಗಿದ್ದು, ಸರಕಾರ ಆದಿವಾಸಿಗಳಿಗೆ ಸ್ವಂತ ಸೂರನ್ನು ಒದಗಿಸಬೇಕಿದೆ. ಆದಿವಾಸಿಗಳ ಹಕ್ಕನ್ನು ಹೋರಾಟದ ಮೂಲಕ ಪಡೆಯುತ್ತೇವೆ ಎಂದರಲ್ಲದೇ ಸರಕಾರವು ಆದಿವಾಸಿಗಳಿಗೆ ಭೂಮಿ ನೀಡದಿದ್ದಲ್ಲಿ ಕಿತ್ತು ಪಡೆಯಬೇಕಾಗುತ್ತದೆ ಎಂದರು.
ಆದಿವಾಸಿಗಳು ಸಂಘಟಿತರಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಕೆಲವು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪಿತೂರಿ ನಡೆಸಿ ಆದಿವಾಸಿಗಳನ್ನು ಒಕ್ಕಲೆಬ್ಬಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ದಿಡ್ಡಳ್ಳಿಯಲ್ಲಿ ವಾಸವಾಗಿರುವವರಲ್ಲಿ ಅಸ್ಸಾಂನವರಿದ್ದಾರೆ ಎಂದು ಬೇಜವಾಬ್ದಾರಿ ಹೇಳಿಕೆಯನ್ನು ನೀಡಿ, ಗೊಂದಲ ಸೃಷ್ಟಿಸಿದ್ದಾರೆ. ಇಂತಹ ಹೇಳಿಕೆಗಳನ್ನು ಕೂಡಲೇ ನಿಲ್ಲಿಸಬೇಕೆಂದು ಅವರು ಎಚ್ಚರಿಸಿದರು. ಮೂಲ ನಿವಾಸಿಗಳು ಶೋಷಣೆಗೆ ಒಳಪಡುತ್ತಿದ್ದು, ಇವರ ಜೀವನ ದುಸ್ತರವಾಗಿದೆ. ಅರಣ್ಯ ಅಧಿಕಾರಿಗಳು ಬಡವರ ಮೇಲೆ ಗದಾ ಪ್ರಹಾರ ಮಾಡುತ್ತಿದ್ದು, ಇದರಿಂದಾಗಿ ನಿರ್ಗತಿಕರು ನರಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದಿವಾಸಿಗಳು ತಮ್ಮ ಶಕ್ತಿಯನ್ನು ಪ್ರದರ್ಶಿಸುವ ಮೂಲಕ ಜನಶಕ್ತಿಯನ್ನು ಬಲಪಡಿಸಬೇಕೆಂದು ಅವರು ಕರೆ ನೀಡಿದರು. ಡಾ.ಅಂಬೇಡ್ಕರರಂತೆ ಹೋರಾಟವನ್ನು ಮೈಗೂಡಿಸಿ, ಗೆಲ್ಲುವವರೆಗೆ ಹೋರಾಡಿ ತಮ್ಮ ಹಕ್ಕನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಅಧಿಕಾರಿಗಳ ಅಮಾನತಿಗೆ ಆಗ್ರಹ
ಸಮಿತಿಯ ಸಂಚಾಲಕ ನೂರ್ ಶ್ರೀಧರ್ ಮಾತನಾಡಿ, ಕಳೆದ 13 ದಿನಗಳಿಂದ ದಿಡ್ಡಳ್ಳಿಯಲ್ಲಿ ನಿರಾಶ್ರಿತರು ಗಾಳಿ ಮಳೆಗೆ ಮರದ ಕೆಳಗೆ ವಾಸವಾಗಿದ್ದರೂ ಕೂಡ ಜಿಲ್ಲೆಗೆ ಆಗಮಿಸಿದ ಐವರು ಸಚಿವರಾಗಲಿ, ಜಿಲ್ಲಾಡಳಿತವಾಗಲಿ ಇತ್ತ ಬಾರದೆ ನಿರ್ಲಕ್ಷ್ಯ ವಹಿಸಿರುವದು ಖಂಡನೀಯ ಎಂದ ಅವರು, ಅರಣ್ಯ ಇಲಾಖಾಧಿ ಕಾರಿಗಳು ಹಾಗೂ ಪೊಲೀಸರು ದಬ್ಬಾಳಿಕೆ ಮಾಡಿರುವ ದನ್ನು ಖಂಡಿಸಿದರು. ಆದಿವಾಸಿಗಳು ಅರಣ್ಯವನ್ನು ಉಳಿಸಿ ಬೆಳೆಸಿದ್ದಾರೆ. ಅವರು ಕಳ್ಳತನವನ್ನು ಮಾಡಲಿಲ್ಲ. ಅರಣ್ಯ ಅಧಿಕಾರಿಗಳು ಅರಣ್ಯವನ್ನು ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದ ಅವರು ಗುಡಿಸಲು ತೆರವುಗೊಳಿಸಿದ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿದವರ ವಿರುದ್ಧ ಲಾಠಿ ಪ್ರಹಾರ, ದೌರ್ಜನ್ಯ ನಡೆಸಿದ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಹಾಗೂ ಅವರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಬೇಕೆಂದರು. ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಬಂದು 10 ವರ್ಷಗಳು ಕಳೆದರೂ ಈವರೆಗೂ ಆದಿವಾಸಿಗಳಿಗೆ ಸರಕಾರ ಸಮರ್ಪಕವಾದ ಜಾಗ ನೀಡಿಲ್ಲ. ಆದೇಶದ ಪ್ರಕಾರ ಕನಿಷ್ಟ 5 ಎಕರೆ ಜಾಗ ನೀಡಬೇಕಾಗಿತ್ತು. ಆದರೆ, ಗುಡಿಸಲು ನಿರ್ಮಿಸಿದವರನ್ನು ಯಾವ ಕಾಯ್ದೆಯಲ್ಲಿ ಬೆಳ್ಳಂಬೆಳಗ್ಗೆ ತೆರವುಗೊಳಿಸಿದ್ದಾರೆ ಎಂದು ಅವರು ಪ್ರಶ್ನಿಸಿದರು.
ಜೀತದಾಳುಗಳೇ?
ರಂಗ ಕಲಾವಿದೆ ಡಾ.ವಿಜಯಮ್ಮ ಮಾತನಾಡಿ, ಸರಕಾರ ಹಾಗೂ ಅಧಿಕಾರಿಗಳಿಗೆ ಆದಿವಾಸಿಗಳ ಬಗ್ಗೆ ಕಾಳಜಿ ಇಲ್ಲದಾಗಿದೆ. ಆದಿವಾಸಿಗಳನ್ನು ಈವರೆಗೂ ಜೀತದಾಳುಗಳಾಗಿ ನಡೆಸಿಕೊಂಡು ಬರಲಾಗಿದೆ. ಆದಿವಾಸಿಗಳು ಒಗ್ಗಟ್ಟಾಗಿ ತಮ್ಮ ವಿರುದ್ಧ ದೌರ್ಜನ್ಯ ನಡೆಸುತ್ತಿರುವ ಅಧಿಕಾರಿಗಳ ವಿರುದ್ಧ ಹೋರಾಡ ಬೇಕು. ತಮ್ಮ ಭೂಮಿಯ ಹಕ್ಕನ್ನು ಪಡೆಯಬೇಕು. ಇದಕ್ಕೆ ತಮ್ಮ ಬೆಂಬಲವಿದೆ ಎಂದ ಅವರು ಇದರ ಬಗ್ಗೆ ಸರಕಾರದ ಗಮನ ಸೆಳೆಯಲಾಗುವದು ಎಂದರು.
ಅಂಬೇಡ್ಕರ್ ಸೇನೆಯ ಅಧ್ಯಕ್ಷ ಮೂರ್ತಿ ಮಾತನಾಡಿ, 13 ದಿನ ಗಳಿಂದ ದಿಡ್ಡಳ್ಳಿಯಲ್ಲಿ ವಾಸವಿದ್ದರೂ ಸಂಬಂಧಪಟ್ಟ ಜಿಲ್ಲಾಡಳಿತವಾಗಲಿ, ಇತರ ಇಲಾಖೆಯ ಅಧಿಕಾರಿಗಳಾಗಲಿ ಕನಿಷ್ಟ ಸೌಜನ್ಯವನ್ನೂ ತೋರದೆ, ಜಾಗವನ್ನೂ ನೀಡದೆ ನಿರ್ಲಕ್ಷ್ಯ ವಹಿಸಿರುವದನ್ನು ಖಂಡಿಸಿದರು. ಮುಂದಿನ ದಿನಗಳಲ್ಲಿ 30 ಜಿಲ್ಲೆಯ ಆದಿವಾಸಿ ಜನರನ್ನು ಒಗ್ಗೂಡಿಸಿ ಕೊಡಗು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವದು ಎಂದರು.
ಸಮಿತಿಯ ಜಿಲ್ಲಾಧ್ಯಕ್ಷ ಡಿ.ಎಸ್. ನಿರ್ವಾಣಪ್ಪ ಮಾತನಾಡಿ, ಕಳೆದ 2 ವಾರದಿಂದ 577 ಕುಟುಂಬಗಳು ಬೀದಿಪಾಲಾಗಿದ್ದು, ಜಿಲ್ಲಾಧಿಕಾರಿಗಳು ಈ ಸಮಸ್ಯೆಗೆ ಸ್ಪಂದಿಸದೆ ನಿರ್ಲಕ್ಷ್ಯ ವಹಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಕೆಲವು ರಾಜಕಾರಣಿಗಳು ದಿಡ್ಡಳ್ಳಿಗೆ ಭೇಟಿ ನೀಡಿ ತಮ್ಮ ಮೊಸಳೆ ಕಣ್ಣೀರು ಸುರಿಸಿ ತೆರಳುತ್ತಿದ್ದು, ಮಾಧ್ಯಮಗಳಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಅರಣ್ಯ ಅಧಿಕಾರಿಗಳು ಬಡ ಆದಿವಾಸಿಗಳಿಂದ ಅರಣ್ಯ ಪ್ರದೇಶದಲ್ಲಿ ನಿವೇಶನ ನೀಡುವದಾಗಿ ಹಣ ಪಡೆದಿದ್ದು, ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ಅವರನ್ನು ಅಮಾನತುಗೊಳಿಸಬೇಕೆಂದು ಒತ್ತಾಯಿಸಿದರು. ಜಿಲ್ಲಾಧಿಕಾರಿಗಳು ಭೂಮಾಲೀಕ ಹಾಗೂ ಕೆಲವು ರಾಜಕಾರಣಿಗಳ ಒತ್ತಡಕ್ಕೆ ಮಣಿದು ಗಿರಿಜನರಿಗೆ ಅನ್ಯಾಯವೆಸಗುತ್ತಿದ್ದಾರೆ ಎಂದರು. ಆದಿವಾಸಿಗಳ ಹೆಸರಿನಲ್ಲಿ ಕೆಲ ಸಂಘಟನೆಗಳ ಪ್ರಮುಖರು ಹೋರಾಟದ ದಿಕ್ಕು ತಪ್ಪಿಸುತ್ತಿದ್ದು, ನಿಜವಾಗಿಯೂ ಅವರಿಗೆ ಆದಿವಾಸಿಗಳ ಬಗ್ಗೆ ಕಾಳಜಿ ಇದ್ದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿ ಎಂದರು.
ಬೆತ್ತಲೆ ಪ್ರದರ್ಶನ ಪ್ರತಿಭಟನೆ
ಗಿರಿಜನ ಮುಖಂಡ ಜೆ.ಕೆ. ಸಾಮಿ ಮಾತನಾಡಿ, ಗುಡಿಸಲು ತೆರವು ಗೊಳಿಸುವ ಸಂದರ್ಭ ತಾನು ಹಾಗೂ ತನ್ನೊಂದಿಗೆ ಇದ್ದ ಜೆ.ಕೆ.ಮುತ್ತಮ್ಮ ಬೆತ್ತಲೆ ಪ್ರತಿಭಟನೆ ನಡೆಸುವ ಸಂದರ್ಭ ಪೊಲೀಸರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ತಮ್ಮ ಮೇಲೆ ದೌರ್ಜನ್ಯ ಎಸಗಿದ್ದು, ಮನ ಬಂದಂತೆ ಲಾಠಿಯಿಂದ ಥಳಿಸಿದರು.ತಮ್ಮಿಂದ ಜಾಗ ನೀಡುವದಾಗಿ ಹಣ ವಸೂಲು ಮಾಡಿದ ಅರಣ್ಯ ಅಧಿಕಾರಿಗಳು, ತದನಂತರ ಏಕಾಏಕಿ ಗುಡಿಸಲು ತೆರವುಗೊಳಿಸಿದರು. ಬೆಳ್ಳಂಬೆಳಗ್ಗೆ ಮಕ್ಕಳು, ಮಹಿಳೆಯರು ಮಲಗಿದ್ದ ಸಂದರ್ಭ ಜೆ.ಸಿ.ಬಿ ಮೂಲಕ ಗುಡಿಸಲು ಕೆಡವಿದ್ದಾರೆ ಎಂದು ಕಣ್ಣೀರಿಡುತ್ತಾ ನೋವನ್ನು ವ್ಯಕ್ತಪಡಿಸಿದರು.
ದಿಡ್ಡಳ್ಳಿಯ ನಿರಾಶ್ರಿತ ಮಹಿಳೆ ಅನಿತ, ತಮ್ಮದೇ ಭಾಷೆಯಾದ ಜೇನುಕುರುಬರ ಭಾಷೆಯಲ್ಲಿ ಮಾತನಾಡಿ, ನಾವು ಅಸ್ಸಾಂನಿಂದ ಬಂದವರಲ್ಲ. ನಾವು ಮೂಲನಿವಾಸಿ ಬುಡಕಟ್ಟಿಗೆ ಸೇರಿದವರು. ಇಲ್ಲಿನ ಅರಣ್ಯ ಅಧಿಕಾರಿಗಳು ಅರಣ್ಯದಲ್ಲಿ ವಾಸಿಸಲು ಆಶ್ವಾಸನೆ ನೀಡಿ ನಮ್ಮಿಂದ ಹಣ ಪಡೆದುಕೊಂಡು ನಮಗೆ ಯಾವದೇ ಮಾಹಿತಿ ನೀಡದೆ ತೆರವುಗೊಳಿಸಿ ಅನ್ಯಾಯವೆಸೆಗಿದ್ದಾರೆ ಎಂದು ಕಣ್ಣೀರಿಟ್ಟರು. ನಾವು ಕಾಡಿನ ಮಕ್ಕಳು. ನಾವು ಕಾಡಿನಲ್ಲೇ ಹುಟ್ಟಿ ಬೆಳೆದವರು. ಶ್ರೀಮಂತರು ಒತ್ತುವರಿ ಮಾಡಿದ ಜಾಗವನ್ನು ತೆರವುಗೊಳಿಸಲಿ ಎಂದು ಸವಾಲು ಎಸೆದರು.
ಅಧಿಕಾರಿಗಳ ವಿರುದ್ಧ ಆರೋಪ
ಕಾಂಗ್ರೆಸ್ ಮುಖಂಡ ಪಿ.ಸಿ ಹಸೈನಾರ್ ಮಾತನಾಡಿ, ಕೆಲವು ಶ್ರೀಮಂತರು 30 ಕ್ಕೂ ಅಧಿಕ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿ ಕೊಂಡಿದ್ದು, ಈ ಬಗ್ಗೆ ಅರಣ್ಯ ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದು, ಬಡ ಗಿರಿಜನರು ಗುಡಿಸಲು ಕಟ್ಟಿಕೊಂಡು ಜೀವನ ಮಾಡುತ್ತಿದ್ದ ಆದಿವಾಸಿಗಳನ್ನು ಒಕ್ಕಲೆಬ್ಬಿಸಿದ ಕ್ರಮವನ್ನು ಖಂಡಿಸಿ ದರಲ್ಲದೇ ಪೈಸಾರಿ ಜಾಗಗಳನ್ನು ಅರಣ್ಯ ಇಲಾಖೆಯವರು ಅರಣ್ಯ ಪ್ರದೇಶವೆಂದು ಪಹಣಿಪತ್ರದಲ್ಲಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಅಧಿಕಾರಿಗಳ ಆಗಮನ
ಇದೇ ಸಂರ್ಭದಲ್ಲಿ ಜಿಲ್ಲಾಧಿಕಾರಿ ಗಳು ಹಾಗೂ ಉಸ್ತುವಾರಿ ಸಚಿವರು ಪ್ರತಿಭಟನಾ ಸ್ಥಳಕ್ಕೆ ಬರಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಬಳಿಕ ಜಿಲ್ಲಾಧಿಕಾರಿಗಳ ಪರವಾಗಿ ಜಿಲ್ಲಾ ಉಪ ವಿಭಾಗ ಅಧಿಕಾರಿ ನಂಜುಂಡೇಗೌಡ, ವೀರಾಜಪೇಟೆ ತಾಲೂಕು ತಹಶೀಲ್ದಾರ್ ಮಹದೇವಸ್ವಾಮಿ, ಸಮಾಜ ಕಲ್ಯಾಣ ಇಲಾಖಾಧಿಕಾರಿ ಮಾಯಾದೇವಿ ಗಲಗಲಿ ಸ್ಥಳಕ್ಕಾಗಮಿಸಿದ ಸಂದರ್ಭ ಆಕ್ರೋಶಭರಿತ ಪ್ರತಿಭಟನಾಕಾರರು ಅಧಿಕಾರಿಗಳ ವಿರುದ್ಧ ದಿಕ್ಕಾರ ಘೋಷಣೆಗಳನ್ನು ಕೂಗಿದರು. ಬಳಿಕ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಉಪ ವಿಭಾಗಾಧಿಕಾರಿ ನಂಜುಂಡೇಗೌಡ, ಈಗಾಗಲೇ ಜಿಲ್ಲಾಧಿಕಾರಿಗಳು ನಿರಾಶ್ರಿತರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ಭೂಮಿಯನ್ನು ಗುರುತಿಸಲಾಗಿದ್ದು, ಒಂದು ತಿಂಗಳೊಳಗೆ ಕಾಯ್ದಿರಿಸಿದ ಭೂಮಿ ಯನ್ನು ಮೂರು ತಾಲೂಕಿನ ನಿರಾಶ್ರಿತರಿಗೆ ನೀಡಲಾಗುವದು ಎಂದು ತಿಳಿಸಿದರು. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮಾಯಾದೇವಿ ಗಲಗಲಿ ಮಾತನಾಡಿ, ತಾನು ಅಧಿಕಾರ ಸ್ವೀಕರಿಸಿ ಒಂದು ತಿಂಗಳಾಗಿದ್ದು, ದಿಡ್ಡಳ್ಳಿಯ ಸಮಸ್ಯೆಯನ್ನು ಈಗಾಗಲೇ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಸೂಕ್ತ ಪೈಸಾರಿ ಜಾಗವನ್ನು ಗುರುತಿಸಿ ಕಂದಾಯ ಇಲಾಖೆಗೆ ವರ್ಗಾಯಿಸಿ ನಿರಾಶ್ರಿತರಿಗೆ ನಿವೇಶನ ನೀಡಿದಲ್ಲಿ ಇಲಾಖೆಯ ವತಿಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವದು ಎಂದರು.
ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಅಧಿಕಾರಿಗಳ ಆಶ್ವಾಸನೆಯನ್ನು ತಿರಸ್ಕರಿಸಿ, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ದಿಡ್ಡಳ್ಳಿಗೆ ಆಗಮಿಸಬೇಕೆಂದು ಪ್ರತಿಭಟನೆಯನ್ನು ಮುಂದುವರಿಸಿದರು.
ಸಂಕಲ್ಪ ಸಭೆಯ ಅಧ್ಯಕ್ಷತೆಯನ್ನು ಸಮಿತಿಯ ಕೇಂದ್ರ ಸಮಿತಿ ಸದಸ್ಯ ಸಿರಿಮನೆ ನಾಗರಾಜ್ ವಹಿಸಿದ್ದರು. ಸಭೆಯಲ್ಲಿ ಕೇಂದ್ರ ಸಮಿತಿ ಸದಸ್ಯರಾದ ಗುರುಶಾಂತ್, ಸದಸ್ಯರಾದ ಮಲ್ಲಿಕ, ನೇಮಿಚಂದ್, ಮಾನವಹಕ್ಕು ಕಾರ್ಯಕರ್ತ ವಸಂತ್, ಸಮಿತಿಯ ಖಜಾಂಜಿ ಕಾವೇರಿ, ಸಿ.ಪಿ.ಐ (ಎಂ) ಜಿಲ್ಲಾ ಕಾರ್ಯದರ್ಶಿ ಡಾ.ದುರ್ಗಾ ಪ್ರಸಾದ್, ಆರ್.ಕೆ. ಸಲಾಂ, ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷ ಅಮೀನ್ ಮೊಯಿಸಿನ್, ಶಿವಮೊಗ್ಗದ ಹೋರಾಟಗಾರ ಕಿರಣ್ ಗಾಜನೂರು, ಮಹೇಂದ್ರ, ಪ್ರಗತಿಪರ ಚಳುವಳಿಯ ರಾಜಣ್ಣ, ಮೂಲಭೂತ ಹಕ್ಕುಗಳ ಸಮಿತಿ ಅಧ್ಯಕ್ಷ ಅಣ್ಣಯ್ಯ, ಬುಡಕಟ್ಟು ಹಕ್ಕುಗಳ ಜಾಗೃತಿ ಸಮಿತಿ ಅಧ್ಯಕ್ಷೆ ಜಯಮಾಲ, ಬಹುಜನ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ರಮೇಶ, ರೇವತಿ, ಬಾಲಾಜಿ, ಸಿದ್ಧಲಿಂಗ, ಜಯಮಾಲ, ಸ್ವರ್ಣಭಟ್ ಸೇರಿದಂತೆ ರಾಜ್ಯದ 50 ಕ್ಕೂ ಹೆಚ್ಚು ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದರು.
ಪ್ರತಿಭಟನೆಯ ಹಿನ್ನೆಲೆಯಲ್ಲಿ ಡಿ.ವೈ.ಎಸ್.ಪಿ ಛಬ್ಬಿ, ವೃತ್ತನಿರೀಕ್ಷ ಮೇದಪ್ಪ, ಎಸ್.ಐ ಸಂತೋಷ್ ಕಶ್ಯಪ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.