ಮಡಿಕೇರಿ, ಡಿ.16 : ದಿಡ್ಡಳ್ಳಿಯಲ್ಲಿ ಗುಡಿಸಲುಗಳನ್ನು ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದ ಆದಿವಾಸಿಗಳನ್ನು ಏಕಾಏಕಿ ತೆರವುಗೊಳಿಸುವ ಮೂಲಕ ನಿರಾಶ್ರಿತರನ್ನಾಗಿ ಮಾಡಿರುವದು ಅಮಾನವೀಯ ಕಾರ್ಯಾಚರಣೆ ಯಾಗಿದೆ ಎಂದು ಜಾತ್ಯಾತೀತ ಜನತಾದಳದ ಪರಿಶಿಷ್ಟ ಜಾತಿ ಘಟಕದ ಜಿಲ್ಲಾಧ್ಯಕ್ಷ ಹೆಚ್.ಎನ್. ಯೋಗೇಶ್ ಕುಮಾರ್ ಆರೋಪಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಜಿಲ್ಲೆಯಲ್ಲಿರುವ ದುರ್ಬಲ ವರ್ಗದ ಬಗ್ಗೆ ಸರಕಾರ ದಿವ್ಯ ನಿರ್ಲಕ್ಷ್ಯ ತೋರುತ್ತಿದೆ ಎಂದು ಟೀಕಿಸಿದ್ದಾರೆ. ಅಧಿಕಾರಿಗಳು ಕಾನೂನು ಪಾಲನೆ ಮಾಡುವ ನೆಪದಲ್ಲಿ ಅಸಹಾಯಕ ವರ್ಗವನ್ನು ಮಾತ್ರ ಗುರಿ ಮಾಡುತ್ತಿದ್ದಾರೆ. ಶ್ರೀಮಂತರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಸರಕಾರಿ ಜಾಗವನ್ನು ತೆರವುಗೊಳಿಸುವ ವಿಚಾರದಲ್ಲಿ ಅಧಿಕಾರಿಗಳು ಯಾಕೆ ತಮ್ಮ ಪ್ರಾಮಾಣಿಕತೆ ಯನ್ನು ಪ್ರದರ್ಶಿಸುತ್ತಿಲ್ಲವೆಂದು ಪ್ರಶ್ನಿಸಿದ್ದಾರೆ.

ಅರಣ್ಯ ಭಾಗದಲ್ಲಿ ಅಕ್ರಮ ಗುಡಿಸಲುಗಳನ್ನು ನಿರ್ಮಿಸಿಕೊಂಡು ಜೀವನ ಸಾಗಿಸುವದು ತಪ್ಪೆಂದು ಅಧಿಕಾರಿಗಳು ಸಮರ್ಥಿಸಿ ಕೊಳ್ಳುತ್ತಿದ್ದಾರೆ. ಆದರೆ ಕಡುಬಡ ವರ್ಗವಾಗಿರುವ ಆದಿವಾಸಿಗಳಿಗೆ ಸೂರು ಕಲ್ಪಿಸಿಕೊಡದಿದ್ದಲ್ಲಿ ಅದು ಮಾನವ ಹಕ್ಕುಗಳ ಉಲ್ಲಂಘನೆ ಎನ್ನುವದನ್ನು ಆಡಳಿತ ನಡೆಸುತ್ತಿರುವವರು ಮತ್ತು ಅಧಿಕಾರಿ ವರ್ಗ ಮನವರಿಕೆ ಮಾಡಿಕೊಳ್ಳ ಬೇಕಾಗಿದೆ. ದಿಡ್ಡಳ್ಳಿಯಲ್ಲಿ ಗಿರಿಜನರನ್ನು ಬೀದಿಪಾಲು ಮಾಡಲು ತೋರಿದ ಕಾಳಜಿಯನ್ನೇ ನಿರಾಶ್ರಿತರಿಗೆ ಸೂರು ಕಲ್ಪಿಸಿ ಕೊಡುವಲ್ಲಿ ಕೂಡ ತೋರ ಬೇಕಾಗಿದೆ ಎಂದು ಯೋಗೇಶ್ ಕುಮಾರ್ ತಿಳಿಸಿದ್ದಾರೆ.

ತಕ್ಷಣ ಜಿಲ್ಲಾ ಕಾಂಗ್ರೆಸ್ ಸಮಿತಿ ಎಚ್ಚೆತ್ತುಕೊಂಡು ದಿಡ್ಡಳ್ಳಿಯಲ್ಲಿ ಗುಡಿಸಲುಗಳನ್ನು ಕಳೆದುಕೊಂಡವರಿಗೆ ನಿವೇಶನ ಅಥವಾ ವಸತಿ ಸೌಲಭ್ಯವನ್ನು ಕಲ್ಪಿಸಲು ಸರಕಾರ ಹಾಗೂ ಗಿರಿಜನ ಅಭಿವೃದ್ಧಿ ಇಲಾಖೆಯೊಂದಿಗೆ ವ್ಯವಹರಿಸ ಬೇಕೆಂದು ಅವರು ಒತ್ತಾಯಿಸಿದ್ದಾರೆ.

ಮೇಟಿ ಬೆಂಬಲಿಗರು ದೃಶ್ಯ ಮಾಧ್ಯಮದ ಪ್ರತಿನಿಧಿಗಳ ಮೇಲೆ ನಡೆಸಿದ್ದಾರೆ ಎನ್ನಲಾಗಿರುವ ದೌರ್ಜನ್ಯದ ಪ್ರಕರಣವನ್ನು ಖಂಡಿಸುವದಾಗಿ ಯೋಗೇಶ್ ಕುಮಾರ್ ತಿಳಿಸಿದ್ದಾರೆ.