ಮಡಿಕೇರಿ, ಡಿ. 23: ದೇವಮ್ಮಚ್ಚಿ ಅರಣ್ಯ ಪ್ರದೇಶದಲ್ಲಿ ನೆಲೆ ನಿಂತಿದ್ದ 577 ಆದಿವಾಸಿ ಕುಟುಂಬಗಳನ್ನು ಒಕ್ಕಲೆಬ್ಬಿಸಿ ಇಂದಿಗೆ 16 ದಿನಗಳು ಕಳೆದಿದ್ದು, ಇದುವರೆಗೆ ಜಿಲ್ಲೆಯಲ್ಲಿ ಕಂಡುಬಂದಿದ್ದ ಗೊಂದಲ ಕಳವಳಗಳನ್ನು ನಿವಾರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವಿತೂತನ ಸೂತ್ರವನ್ನು ಘೋಷಿಸಿದೆ. ಸರ್ಕಾರದ ಪರವಾಗಿ ಅಧಿಕೃತ ಪ್ರತಿನಿಧಿಯಾಗಿ ಆಗಮಿಸಿದ ರಾಜ್ಯ ಸಮಾಜ ಕಲ್ಯಾಣ ಇಲಾಖಾ ಸಚಿವ ಆಂಜನೇಯ ಅವರು ಬೆಳಗ್ಗಿನಿಂದಲೂ ದಿಡ್ಡಳ್ಳಿ ಸನಿಹದ ಗಿರಿಜನ ನೆಲೆಯ ಸ್ಥಳಕ್ಕೆ ಭೇಟಿ ಬಳಿಕ ಮಡಿಕೇರಿಯಲ್ಲಿ ಸಂಬಂಧಿಸಿದ ಪ್ರಮುಖರೊಂದಿಗೆ ದೀರ್ಘ ಸಮಾಲೋಚನೆ ನಡೆಸಿ ಕೊನೆಗೂ ಸರ್ಕಾರದ ಪರ ಘೋಷಣೆ ಯೊಂದನ್ನು ಹೊರಡಿಸಿದರು.
ಅದರ ಅನ್ವಯ ಮುಂದಿನ ಒಂದು ತಿಂಗಳ ಅವಧಿಯವರೆಗೆ ಆದಿವಾಸಿಗಳು ಈಗ ಆಶ್ರಮ ಶಾಲೆ ಬಳಿ ನೆಲೆಸಿರುವ ಸ್ಥಳದಲ್ಲಿಯೇ ಮೂಲಭೂತ ಸೌಲಭ್ಯಗಳೊಂದಿಗೆ ತಾತ್ಕಾಲಿಕ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸುವದು. ಇದಕ್ಕಾಗಿ ಮುಖ್ಯ ಮಂತ್ರಿಯವರ ನಿರ್ದೇಶನದಂತೆ ಸಮಾಜ ಕಲ್ಯಾಣ ಇಲಾಖೆಯಿಂದ ರೂ. 1 ಕೋಟಿ ಚೆಕ್ ಅನ್ನು ಸಚಿವರು ಜಿಲ್ಲಾಧಿಕಾರಿ ಆರ್.ವಿ. ಡಿಸೋಜ ಅವರಿಗೆ ಹಸ್ತಾಂತರಿಸಿದರು. ಈ ಒಂದು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಲಭ್ಯವಿರುವ ಸೂಕ್ತ ಸ್ಥಳವನ್ನು ಗುರುತಿಸಿ ಒಂದೇ ಕಡೆ ಅಲ್ಲದಿದ್ದರೂ ಸನಿಹದ ಪ್ರದೇಶಗಳಲ್ಲಿ ಭೂಮಿಯನ್ನು ಪಡೆದು ತಲಾ ಒಬ್ಬರಿಗೆ 30ಘಿ 40 ರ ನಿವೇಶನವನ್ನು ಮಂಜೂರು ಮಾಡುವದು. ಆ ಸ್ಥಳದಲ್ಲಿ ಆದಿವಾಸಿಗಳು ಮನೆಗಳನ್ನು ನಿರ್ಮಿಸಿಕೊಳ್ಳಲು ನೆರವಾಗುವದು. ಪ್ರತ್ಯೇಕ ಬಡಾವಣೆಗಳನ್ನು ಅಭಿವೃದ್ಧಿಗೊಳಿಸಿ
(ಮೊದಲ ಪುಟದಿಂದ) ಅಲ್ಲಿ ನೀರು, ವಿದ್ಯುತ್ ಇತ್ಯಾದಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವದು.
ಸರ್ಕಾರಿ ನಿವೇಶನ ಲಭ್ಯವಿಲ್ಲದ ಕಡೆ ಸನಿಹದಲ್ಲಿರುವಂತಹ ಖಾಸಗಿ ನಿವೇಶನಗಳನ್ನು ಸರ್ಕಾರವೇ ಖರೀದಿಸಿ ಬಡಾವಣೆ ಅಭಿವೃದ್ಧಿಗೊಳಿಸಲು ಕೂಡ ಸಂಕಲ್ಪಿಸಲಾಗಿದೆ ಎಂದು ಸಚಿವರು ವಿವರಿಸಿದರು.
ಆದಿವಾಸಿಗಳು ತಲತಲಾಂತರ ದಿಂದ ಅರಣ್ಯ ಸನಿಹದಲ್ಲಿಯೇ ವಾಸಿಸಿಕೊಂಡು ಬಂದಿದ್ದು, ಈ ಹಿಂದೆ ಖಾಸಗಿ ತೋಟಗಳಲ್ಲಿ, ಕಂಪೆನಿ ತೋಟಗಳಲ್ಲಿ ಕೂಲಿ ಕಾರ್ಮಿಕರಾಗಿ ದುಡಿದುಕೊಂಡು ಬದುಕುತ್ತಿದ್ದರು. ಇತ್ತೀಚೆಗಷ್ಟೇ ಈ ಮಂದಿ ಎಚ್ಚೆತ್ತುಕೊಂಡು ತಮಗೆ ಸೂರು ಬೇಕು, ನಿವೇಶನ ಬೇಕು, ನೆಲೆಬೇಕು ಎನ್ನುವ ನ್ಯಾಯಯುತ ಹಕ್ಕೊತ್ತಾಯವನ್ನು ಮಂಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸ್ಪಂದಿಸುತ್ತಿದೆ. ಆದಿವಾಸಿಗಳು ತಾವು ಈಗ ನೆಲೆಸಿರುವ ತಾತ್ಕಾಲಿಕ ಸ್ಥಳದಲ್ಲಿ ನೆಲೆಸಿರುವ ಸಂದರ್ಭವೇ ತಮ್ಮ ಈ ಹಿಂದಿನ ದುಡಿಮೆಯಾದ ತೋಟಗಳಿಗೆ ತೆರಳಿ ಕಾಯಕ ಮಾಡುವ ಕೆಲಸವನ್ನು ಮುಂದುವರೆಸಲಿ ಅಲ್ಲದೇ, ಅವರ ಮಕ್ಕಳನ್ನು ಮನೆಯಲ್ಲಿರಿಸದೆ ಶಾಲೆಗೆ ವಿದ್ಯಾಭ್ಯಾಸಕ್ಕೆ ಕಲಿಸಿಕೊಡಲಿ.
ಸಮಾಜ ಕಲ್ಯಾಣ ಇಲಾಖೆಯೊಂದಿಗೆ ರಾಜ್ಯ ಪರಿಶಿಷ್ಟ ಜಾತಿ ಮತ್ತು ಅನುಸೂಚಿತ ವರ್ಗಗಳ ಕಲ್ಯಾಣ ಸಮಿತಿಯು ಕೈಜೋಡಿಸಿದೆ. ಸಮಿತಿಯ ಅಧ್ಯಕ್ಷ ಶಿವಮೂರ್ತಿ ಅವರು ತಮ್ಮೊಂದಿಗೆ ಆಗಮಿಸಿದ್ದಾರೆ. ಈ ಸಮಿತಿಯ ಸಾಕಾರದೊಂದಿಗೆ ಗಿರಿಜನರ ಅಳಲಿಗೆ ಸ್ಪಂದಿಸುತ್ತೇವೆ. ಅವರನ್ನು ಉತ್ತಮ ನಾಗರಿಕರನ್ನಾಗಿ ಮಾಡುವ ವಿಶ್ವಾಸವಿದೆ. ಈಗ ಇರುವ ಸ್ಥಳದಲ್ಲಿಯೂ ಆ ಮಂದಿಗೆ ಇಲಾಖೆಯಿಂದ ಪೌಷ್ಟಿಕ ಆಹಾರ ನೀಡಲಾಗುತ್ತದೆ. ಸರ್ಕಾರವೂ ಈ ಮಂದಿಯ ನೋವನ್ನು ಕೇಳಿ ಕಣ್ಣಿರನ್ನು ಒರೆಸುವ ಕಾರ್ಯಕ್ಕೆ ಎಂದಿಗೂ ಹಿಂದೇಟುವ ಹಾಕುವದಿಲ್ಲ ಎಂದು ಸಚಿವ ಆಂಜನೇಯ ಸಂವೇದನಾತ್ಮಕ ನುಡಿಯಾಡಿದರು.
ಈ ಎಲ್ಲಾ ಕಾರ್ಯಗಳನ್ನು ಒಂದು ತಿಂಗಳಲ್ಲಿ ತ್ವರಿತಗತಿಯಲ್ಲಿ ಕೈಗೊಳ್ಳಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ. ಈ ಸಮಿತಿಯಲ್ಲಿ ಇಲಾಖಾ ಕಾರ್ಯದರ್ಶಿ ಮಣಿವಣ್ಣನ್ ಇರುತ್ತಾರೆ. ಜೊತೆಗೆ ಸದಸ್ಯರಾಗಿ ಅರಣ್ಯ ಇಲಾಖಾಧಿಕಾರಿಗಳು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು ಹಾಗೂ ಹೋರಾಟಗಾರರ ಪರ 5 ಮಂದಿ ಪ್ರತಿನಿಧಿಗಳು ಕೈಜೋಡಿಸುವದಾಗಿ ಸಚಿವರು ಪ್ರಕಟಿಸಿದರು.
ಈ ನೂತನ ಸೂತ್ರವನ್ನು ಪ್ರಕಟಿಸುವ ಮುನ್ನ ಸಚಿವರು ಸ್ಥಳೀಯ ಜನಪ್ರತಿನಿಧಿಗಳು, ರಾಜ್ಯಮಟ್ಟದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು, ಹೋರಾಟಗಾರರ ಪರವಾಗಿ ಚಿತ್ರನಟ ಚೇತನ್, ಸಿರಿಮನೆ ನಾಗರಾಜು, ಎ.ಕೆ. ಸುಬ್ಬಯ್ಯ, ನಿರ್ವಾಣಪ್ಪ, ಅಮೀನ್ ಮೊಹಿಸಿನ್, ಹೆಚ್.ಎಂ. ಕಾವೇರಿ, ಜೆ.ಕೆ. ಮುತ್ತಮ್ಮ, ಅಪ್ಪಾಜಿ ಮೊದಲಾದವರು, ಸ್ಥಳೀಯ ಶಾಸಕರು ಹಾಗೂ ಜನಪ್ರತಿನಿಧಿU Àಳೊಂದಿಗೆ ದೀರ್ಘಕಾಲ ಚರ್ಚಿಸಿ ಬಳಿಕವಷ್ಟೇ ತಮ್ಮ ನಿರ್ಧಾರವನ್ನು ಇಲ್ಲಿನ ಕೋಟೆ ಆವರಣದ ಹಳೇ ವಿಧಾನ ಸಭಾಂಗಣದಲ್ಲಿ ಕರೆಯಲಾಗಿದ್ದ ಪ್ರಮುಖರ ಸಭೆಯಲ್ಲಿ ಘೋಷಿಸಿದರು.ಈ ಸಂದರ್ಭ ವಿಧಾನ ಸಭಾ ಸದಸ್ಯರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮಿತಿಯ ಸದಸ್ಯರಾದ ಡಿ.ಎಸ್. ವೀರಯ್ಯ, ಕೆ.ಟಿ. ಪರಮೇಶ್ವರ ನಾಯಕ್, ಬಿ.ಬಿ. ನಿಂಗಯ್ಯ, ಸಮಾಜ ಕಲ್ಯಾಣ ಇಲಾಖೆಗಳು ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್, ಶಾಸಕರಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚು, ಶಾಂತೆಯಂಡ ವೀಣಾ ಅಚ್ಚಯ್ಯ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ, ಪ್ರಬಾರ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.