ಮಡಿಕೇರಿ, ಡಿ. 11: ಜಿಲ್ಲೆಯಲ್ಲಿ ಬುಡಕಟ್ಟು ಸಮುದಾಯದ ಯರವ, ಜೇನುಕುರುಬ ಸಮುದಾಯಗಳ ಮೇಲೆ ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ಅಧಿಕಾರ ಶಾಹಿ ವರ್ಗದವರಿಂದ ದಬ್ಬಾಳಿಕೆ ನಿರಂತರವಾಗಿ ನಡೆಯುತ್ತಿದೆ ಎನ್ನುವದಕ್ಕೆ ಜಿಲ್ಲೆಯ ವೀರಾಜಪೇಟೆ ತಾಲೂಕಿನ ದಿಡ್ಡಳ್ಳಿ ಹಾಡಿಯಲ್ಲಿ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಹಾಗೂ ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆ ಒಟ್ಟಾಗಿ ಸೇರಿ ನಡೆಸಿದ ದೌರ್ಜನ್ಯ ನಿದರ್ಶನವಾಗಿದೆ ಎಂದು ಯರವ ಯುವ ಒಕ್ಕೂಟದ ಪದಾಧಿಕಾರಿಗಳಾದ ಪಿ. ಮುತ್ತ, ವೈ.ಯಂ. ಸಿದ್ದು, ವೈ.ಬಿ. ಗಣೇಶ, ಪಿ.ಬಿ. ರಾಜ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂತಹ ಹೇಯ ಕೃತ್ಯದಿಂದ ಮಾನವ ಸಮಾಜ ತಲೆ ತಗ್ಗಿಸುವಂತಾಗಿದೆ.

ಸಾವಿರಾರು ಮಹಿಳೆಯರು, ಮಕ್ಕಳು, ಗರ್ಭಿಣಿಯರು, ವಯೋವೃದ್ಧರು ನೆಲೆಸಿ ದಿನದ ತುತ್ತಿನ ಕೂಳಿಗೆ ಶ್ರಮಿಸಿ ಜೀವನ ನಡೆಸುವ ಸಮುದಾಯವನ್ನು ಜಿಲ್ಲಾಡಳಿತ ನಡೆಸಿಕೊಂಡ ರೀತಿ ತುಂಬಾ ನೋವಿನ ವಿಚಾರ. ಇಲ್ಲಿದ್ದವರು ಯಾರೂ ಚಂದ್ರಲೋಕದಿಂದ ಬಂದವರಲ್ಲ. ಇವರೆಲ್ಲ ಜಿಲ್ಲೆಯ ಆದಿವಾಸಿ ಸಮುದಾಯ. ಹೀಗೆ ನಿರಂತರವಾಗಿ ಅನ್ಯಾಯಗಳಿಂದ ನೊಂದು ಶ್ರೀಮಂತರ ತೋಟದ ಕೂಲಿ ಮಾಡಿ ಜೀವನ ನಡೆಸುವವರು, ಸ್ವಂತ ಮನೆಗಳಿಲ್ಲದವರು. ಜಿಲ್ಲಾಡಳಿತ ಮೊಸಳೆ ಕಣ್ಣೀರು ಹಾಕುತ್ತ ನಿವೇಶನ ಕೊಡುತ್ತೇವೆಂದು ಹೇಳುತ್ತಿದೆ. 1990ರ ದಶಕದಲ್ಲಿ ಸರಕಾರಿ ಜಮೀನು ಅರಣ್ಯ ಇಲಾಖೆಗೆ ಮೇಲುಸ್ತುವಾರಿ ನೀಡಿರುವದನ್ನು ವಾಪಸ್ ಪಡೆದು ಆದಿವಾಸಿಗಳಿಗೆ ನೀಡದೆ ವಂಚಿಸುತ್ತಿದೆ. ಆದ್ದರಿಂದ ಮುಖ್ಯಮಂತ್ರಿಗಳು ಹಿರಿಯ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದರು. ಸಾಮ್ರಾಜ್ಯ ಶಾಹಿ ಮನಸ್ಥಿತಿಯ ಹಿರಿಯ ಅಧಿಕಾರಿಗಳಿಂದ ಆದಿವಾಸಿ ಸಮುದಾಯಕ್ಕೆ ಭೂಮಿಯ ಹಕ್ಕು ದೊರೆಯುವದು ಕಷ್ಟಸಾಧ್ಯವಾಗಿದೆ. ಆದ್ದರಿಂದ ವಿಶೇಷ ಉಪವಿಭಾಗಾಧಿಕಾರಿಗಳನ್ನು ನೇಮಿಸಿ ಆದಿವಾಸಿಗಳಿಗೆ ಭೂಮಿ ನೀಡುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದರು.